Revised Common Lectionary (Complementary)
ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ
57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
2 ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
3 ಆತನು ಪರಲೋಕದಿಂದ ನನಗೆ ಸಹಾಯಮಾಡಿ,
ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.
4 ನನ್ನ ಪ್ರಾಣವು ಅಪಾಯದಲ್ಲಿದೆ.
ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
ಅವರ ಹಲ್ಲುಗಳು ಬಾಣಗಳಂತಿವೆ;
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನನ್ನನ್ನು ಬಂಧಿಸಲು
ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
ಆದರೆ ಅವರೇ ಅದರಲ್ಲಿ ಬಿದ್ದುಹೋದರು.
7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
ನಾನು ವಾದ್ಯ ಬಾರಿಸುತ್ತಾ ಹಾಡುವೆನು.
8 ನನ್ನ ಮನವೇ, ಎಚ್ಚರಗೊಳ್ಳು!
ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
9 ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
23 ಅಬೀಗೈಲಳು ದಾವೀದನನ್ನು ಕಂಡ ಕೂಡಲೆ ಕತ್ತೆಯಿಂದ ಬೇಗನೆ ಇಳಿದು ದಾವೀದನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. 24 ಅಬೀಗೈಲಳು ದಾವೀದನ ಪಾದಗಳಿಗೆ ಬಿದ್ದು, “ಒಡೆಯನೇ, ನಿನ್ನೊಂದಿಗೆ ಮಾತನಾಡಲು ದಯವಿಟ್ಟು ನನಗೆ ಅವಕಾಶ ಕೊಡು. ನಾನು ಹೇಳುವುದನ್ನು ಆಲಿಸು. ನಡೆದುಹೋದ ಸಂಗತಿಗೆ ನನ್ನನ್ನೇ ನಿಂದಿಸು. 25 ನೀನು ಕಳುಹಿಸಿದ ಜನರನ್ನು ನಾನು ನೋಡಲಿಲ್ಲ. ಒಡೆಯನೇ, ಮೂರ್ಖನಾದ ಆ ಮನುಷ್ಯನ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರ್ಖ’ ಮತ್ತು ಅವನು ನಿಜವಾಗಿಯೂ ಮೂರ್ಖ. 26 ಮುಗ್ದಜನರನ್ನು ಕೊಂದು ಅಪರಾಧಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ. ಯೆಹೋವನ ಆಣೆಯಾಗಿಯೂ ನಿನ್ನ ಆಣೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುಮಾಡುವವರೂ ನಾಬಾಲನಂತಾಗಲಿ. 27 ಈಗ ನಾನು ನಿನಗಾಗಿ ಈ ಕೊಡುಗೆಗಳನ್ನು ತಂದಿದ್ದೇನೆ. ನಿನ್ನನ್ನು ಹಿಂಬಾಲಿಸುತ್ತಿರುವ ನಿನ್ನ ಸೇವಕರಿಗೆ ದಯವಿಟ್ಟು ಇವುಗಳನ್ನು ಕೊಡು. 28 ನಾನು ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸು. ಯೆಹೋವನು ನಿನ್ನ ಕುಟುಂಬವನ್ನು ಪ್ರಬಲಗೊಳಿಸುತ್ತಾನೆಂದೂ ನಿನ್ನ ಕುಟುಂಬದಿಂದ ಅನೇಕ ರಾಜರು ಬರುತ್ತಾರೆಂದೂ ನನಗೆ ತಿಳಿದಿದೆ! ನೀನು ಯೆಹೋವನ ಯುದ್ಧಗಳಲ್ಲಿ ಹೋರಾಡುವುದರಿಂದ ಯೆಹೋವನು ಇದನ್ನು ನೆರವೇರಿಸುತ್ತಾನೆ. ನೀನು ಜೀವಿಸಿರುವ ತನಕ ಜನರು ನಿನ್ನಲ್ಲಿ ಯಾವುದೇ ಬಗೆಯ ಕೆಟ್ಟದನ್ನು ಕಂಡುಹಿಡಿಯುವುದಿಲ್ಲ! 29 ನಿನ್ನನ್ನು ಕೊಲ್ಲಲು ಒಬ್ಬ ವ್ಯಕ್ತಿಯು ಅಟ್ಟಿಸಿಕೊಂಡು ಬಂದರೆ, ನಿನ್ನ ದೇವರಾದ ಯೆಹೋವನು ನಿನ್ನ ಜೀವವನ್ನು ರಕ್ಷಿಸುತ್ತಾನೆ! ಆದರೆ ಯೆಹೋವನು ನಿನ್ನ ಶತ್ರುಗಳನ್ನು ಕವಣೆಯ ಕಲ್ಲನ್ನು ಎಸೆಯುವಂತೆ ಎಸೆದುಬಿಡುತ್ತಾನೆ! 30 ನಿನಗಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ. ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನೂ ನೆರವೇರಿಸುತ್ತಾನೆ! ದೇವರು ನಿನ್ನನ್ನು ಇಸ್ರೇಲರ ನಾಯಕನನ್ನಾಗಿ ಮಾಡಿದಾಗ 31 ನಿರಪರಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬಲೆಗೂ ಬೀಳುವುದಿಲ್ಲ. ನೀನು ಆ ಮಹಾಪದವಿಗೆ ಬಂದಾಗ ನನ್ನನ್ನು ಮರೆತುಬಿಡಬೇಡ” ಎಂದು ಹೇಳಿದಳು.
32 ಆಗ ದಾವೀದನು ಅಬೀಗೈಲಳಿಗೆ, “ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಳುಹಿಸಿದ್ದಾನೆ. 33 ನಿನ್ನ ಒಳ್ಳೆಯ ತೀರ್ಪಿಗಾಗಿ ದೇವರು ನಿನ್ನನ್ನು ಆಶೀರ್ವದಿಸಲಿ. ಈ ದಿನ ನಾನು ನಿರ್ದೋಷಿಗಳನ್ನು ಕೊಲ್ಲದಂತೆ ನೀನು ನನ್ನನ್ನು ತಡೆದೆ. 34 ಇಸ್ರೇಲರ ದೇವರಾದ ಯೆಹೋವನಾಣೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳೆಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯುತ್ತಿರಲಿಲ್ಲ” ಎಂದು ಹೇಳಿದನು.
35 ನಂತರ ದಾವೀದನು ಅಬೀಗೈಲಳ ಕೊಡುಗೆಗಳನ್ನು ಸ್ವೀಕರಿಸಿ ಆಕೆಗೆ, “ಶಾಂತಿಯಿಂದ ಮನೆಗೆ ಹಿಂದಿರುಗು. ನಾನು ನಿನ್ನ ಮಾತುಗಳನ್ನು ಆಲಿಸಿದ್ದೇನೆ ಮತ್ತು ನೀನು ಕೇಳಿಕೊಂಡಿರುವುದನ್ನು ನೆರವೇರಿಸುತ್ತೇನೆ” ಎಂದು ಹೇಳಿದನು.
ತಾಳ್ಮೆಯಿಂದಿರಿ
7 ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. 8 ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. 9 ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!
10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.
ಎಚ್ಚರಿಕೆಯಿಂದ ಮಾತಾಡಿರಿ
12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International