Revised Common Lectionary (Complementary)
ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ
57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
2 ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
3 ಆತನು ಪರಲೋಕದಿಂದ ನನಗೆ ಸಹಾಯಮಾಡಿ,
ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.
4 ನನ್ನ ಪ್ರಾಣವು ಅಪಾಯದಲ್ಲಿದೆ.
ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
ಅವರ ಹಲ್ಲುಗಳು ಬಾಣಗಳಂತಿವೆ;
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನನ್ನನ್ನು ಬಂಧಿಸಲು
ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
ಆದರೆ ಅವರೇ ಅದರಲ್ಲಿ ಬಿದ್ದುಹೋದರು.
7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
ನಾನು ವಾದ್ಯ ಬಾರಿಸುತ್ತಾ ಹಾಡುವೆನು.
8 ನನ್ನ ಮನವೇ, ಎಚ್ಚರಗೊಳ್ಳು!
ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
9 ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
2 ಮಾವೋನ್‌ನಲ್ಲಿ ಒಬ್ಬ ಮನುಷ್ಯನು ವಾಸಿಸುತ್ತಿದ್ದನು. ಈ ಮನುಷ್ಯನು ಬಹಳ ಶ್ರೀಮಂತನಾಗಿದ್ದನು. ಅವನು ಮೂರು ಸಾವಿರ ಕುರಿಗಳನ್ನೂ ಒಂದು ಸಾವಿರ ಆಡುಗಳನ್ನೂ ಹೊಂದಿದ್ದನು. ಅವನು ಕರ್ಮೆಲಿನಲ್ಲಿ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ಅವನು ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕರ್ಮೆಲಿಗೆ ಹೋಗಿದ್ದನು. 3 ಈ ಮನುಷ್ಯನ ಹೆಸರು ನಾಬಾಲ್. ಅವನ ಹೆಂಡತಿಯ ಹೆಸರು ಅಬೀಗೈಲ್. ಅಬೀಗೈಲಳು ಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು. ಆದರೆ ನಾಬಾಲನು ಕ್ರೂರಿ ಮತ್ತು ಕೀಳಾದ ವ್ಯಕ್ತಿ. ನಾಬಾಲನು ಕಾಲೇಬನ ಕುಟುಂಬಕ್ಕೆ ಸೇರಿದವನು.
4 ನಾಬಾಲನು ತನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿದ್ದಾನೆಂಬ ಸುದ್ದಿಯು ಮರಳುಗಾಡಿನಲ್ಲಿದ್ದ ದಾವೀದನಿಗೆ ತಿಳಿಯಿತು. 5 ಆದ್ದರಿಂದ ನಾಬಾಲನ ಸಂಗಡ ಮಾತನಾಡಲು ದಾವೀದನು ಹತ್ತು ಜನ ಯುವಕರನ್ನು ಕರೆದು ಅವರಿಗೆ, “ಕರ್ಮೆಲಿಗೆ ಹೋಗಿ ನಾಬಾಲನನ್ನು ಕಂಡುಹಿಡಿಯಿರಿ. ಅವನಿಗೆ ನನ್ನ ಪರವಾಗಿ ಶುಭವನ್ನು ಕೋರಿ.” 6 ಈ ಸಂದೇಶವನ್ನು ಅವನಿಗೆ ಹೇಳಿರಿ: “ನೀನು ಮತ್ತು ನಿನ್ನ ಕುಟುಂಬದವರು ಕ್ಷೇಮವಾಗಿದ್ದೀರೆಂದು ನಾನು ನಂಬಿದ್ದೇನೆ. ನಿನ್ನ ಸಕಲ ಸಂಪತ್ತು ಚೆನ್ನಾಗಿರುವುದೆಂದು ನಾನು ನಂಬಿದ್ದೇನೆ. 7 ನೀನು ನಿನ್ನ ಕುರಿಗಳ ತುಪ್ಪಟವನ್ನು ಕತ್ತರಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರುಬರು ನಮ್ಮೊಡನೆ ಸ್ವಲ್ಪ ಸಮಯವಿದ್ದರು. ನಾವು ಅವರಿಗೆ ಕೆಟ್ಟದ್ದೇನನ್ನೂ ಮಾಡಲಿಲ್ಲ. ಅವರು ಕರ್ಮೆಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ. 8 ನಿನ್ನ ಸೇವಕರನ್ನು ಕೇಳು, ಇದು ನಿಜವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯುವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹತ್ತಿರಕ್ಕೆ ಬರುತ್ತೇವೆ. ಸ್ನೇಹಿತನಾದ[a] ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯುವಕರಿಗೆ ಕೊಡು” ಎಂದು ಹೇಳಿ ಕಳುಹಿಸಿದನು.
9 ದಾವೀದನ ಜನರು ನಾಬಾಲನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸಿದರು. 10 ಆದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇಷಯನ ಮಗನೆಂಬವನು ಯಾರು? ಇತ್ತೀಚಿನ ದಿನಗಳಲ್ಲಿ ತಮ್ಮ ಒಡೆಯರ ಹತ್ತಿರದಿಂದ ಓಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ! 11 ನನ್ನ ಬಳಿ ನೀರು ಮತ್ತು ರೊಟ್ಟಿಗಳಿವೆ. ನನ್ನ ಕುರಿಗಳಿಂದ ತುಪ್ಪಟವನ್ನು ಕತ್ತರಿಸುತ್ತಿರುವ ಸೇವಕರಿಗೋಸ್ಕರ ಮಾಂಸವೂ ನನ್ನಲ್ಲಿದೆ. ಆದರೆ ನನಗೆ ಗೊತ್ತಿಲ್ಲದ ಜನರಿಗೆ ನಾನು ಕೊಡುವುದೇ ಇಲ್ಲ!” ಎಂದು ಹೇಳಿದನು.
12 ದಾವೀದನ ಜನರು ಹಿಂತಿರುಗಿ ಹೋಗಿ ನಾಬಾಲನು ಹೇಳಿದ್ದನ್ನೆಲ್ಲಾ ದಾವೀದನಿಗೆ ತಿಳಿಸಿದರು. 13 ಆಗ ದಾವೀದನು ತನ್ನ ಜನರಿಗೆ, “ನಿಮ್ಮ ಆಯುಧಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ!” ಎಂದು ಹೇಳಿದನು. ದಾವೀದನು ಮತ್ತು ಅವನ ಜನರು ಆಯುಧಗಳನ್ನು ಕಟ್ಟಿಕೊಂಡರು. ದಾವೀದನ ಸಂಗಡ ಸುಮಾರು ನಾನೂರು ಜನರು ಹೋದರು; ಇನ್ನೂರು ಜನರು ಸರಕುಗಳ ಬಳಿಯಲ್ಲಿ ಉಳಿದುಕೊಂಡರು.
ಅಬೀಗೈಲಳು ಕೇಡಿನಿಂದ ತಪ್ಪಿಸುವಳು
14 ನಾಬಾಲನ ಸೇವಕನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಒಡೆಯನನ್ನು ವಂದಿಸಲು ದಾವೀದನು ಅರಣ್ಯದಿಂದ ಸಂದೇಶಕರನ್ನು ಕಳುಹಿಸಿದ್ದನು. ಆದರೆ ನಾಬಾಲನು ದಾವೀದನ ಸಂದೇಶಕರೊಂದಿಗೆ ಕೀಳಾಗಿ ನಡೆದುಕೊಂಡನು. 15 ಈ ಜನರು ನಮಗೆ ಬಹಳ ಒಳ್ಳೆಯವರಾಗಿದ್ದರು. ನಾವು ಆಡುಗಳೊಂದಿಗೆ ಹೊಲಗಳಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲೆಲ್ಲ ನಮ್ಮ ಜೊತೆಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಲಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲೆಲ್ಲ ನಮ್ಮಿಂದ ಏನನ್ನೂ ಕದಿಯಲಿಲ್ಲ! 16 ನಾವು ಕುರಿಗಳನ್ನು ಕಾಯುತ್ತಿದ್ದಾಗ ದಾವೀದನ ಜನರು ನಮ್ಮನ್ನು ಹಗಲುರಾತ್ರಿ ರಕ್ಷಿಸಿದರು! ಅವರು ನಮ್ಮ ಸುತ್ತಲೂ ಗೋಡೆಯಂತಿದ್ದರು. 17 ಈಗ ಅದರ ಬಗ್ಗೆ ಯೋಚಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ಮೂರ್ಖನಾದ ನಾಬಾಲನೊಂದಿಗೆ ಮಾತಾಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ. ನಮ್ಮ ಒಡೆಯನಿಗೂ ಅವನ ಕುಟುಂಬಕ್ಕೂ ಭೀಕರವಾದ ಕೇಡು ಬರಲಿದೆ” ಎಂದು ಹೇಳಿದನು.
18 ಅಬೀಗೈಲಳು ಇನ್ನೂರು ರೊಟ್ಟಿಗಳನ್ನೂ ಎರಡು ದ್ರಾಕ್ಷಾರಸದ ಚೀಲಗಳನ್ನೂ ಐದು ಕುರಿಗಳ ಬೇಯಿಸಿದ ಮಾಂಸವನ್ನೂ ಹದಿನೇಳು ಕಿಲೋಗ್ರಾಂ ಬೇಯಿಸಿದ ಕಾಳನ್ನೂ ನೂರುಗೊಂಚಲು ಒಣದ್ರಾಕ್ಷಿಯನ್ನೂ ಅಂಜೂರ ಹಣ್ಣಿನ ಇನ್ನೂರು ಉಂಡೆಗಳನ್ನೂ ತ್ವರಿತವಾಗಿ ತೆಗೆದುಕೊಂಡಳು. ಅವಳು ಅವುಗಳನ್ನು ಕತ್ತೆಗಳ ಮೇಲೆ ಹೇರಿದಳು. 19 ನಂತರ ಅಬೀಗೈಲಳು ತನ್ನ ಸೇವಕರಿಗೆ, “ಮುಂದೆ ನಡೆಯಿರಿ, ನಾನು ನಿಮ್ಮ ಹಿಂದೆ ಬರುತ್ತೇನೆ” ಎಂದಳು. ಆದರೆ ಅವಳು ತನ್ನ ಗಂಡನಿಗೆ ಹೇಳಲಿಲ್ಲ.
20 ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು.
21 ಅಬೀಗೈಲಳನ್ನು ಸಂಧಿಸುವುದಕ್ಕೆ ಮುಂಚೆ ದಾವೀದನು, “ನಾಬಾಲನ ಆಸ್ತಿಯನ್ನು ನಾನು ಅರಣ್ಯದಲ್ಲಿ ಕಾಪಾಡಿದೆನು. ಅವನ ಕುರಿಗಳಲ್ಲಿ ಒಂದೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡೆನು. ನಾನು ಅವನಿಂದ ಏನನ್ನೂ ಅಪೇಕ್ಷಿಸದೆ ಇದನ್ನೆಲ್ಲ ಮಾಡಿದೆ! ನಾನು ಅವನಿಗೆ ಒಳ್ಳೆಯದನ್ನು ಮಾಡಿದೆ; ಆದರೆ ಅವನು ನನಗೆ ಕೆಟ್ಟವನಾದನು. 22 ನಾಳೆ ಬೆಳಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದುಕೊಳ್ಳಲು ನಾನು ಅವಕಾಶಕೊಟ್ಟರೆ ದೇವರು ನನ್ನನ್ನು ದಂಡಿಸಲಿ” ಎಂದು ಹೇಳಿದ್ದನು.
ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು
6 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? 2 ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. 3 ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. 4 ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. 5 ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? 6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!
7 ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. 8 ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.
Kannada Holy Bible: Easy-to-Read Version. All rights reserved. © 1997 Bible League International