Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 32:22-31

22 ಆ ರಾತ್ರಿ, ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ತನ್ನ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಗಂಡುಮಕ್ಕಳನ್ನೂ ಕರೆದುಕೊಂಡು ಹೊರಟು ಯಬ್ಬೋಕ್ ಹೊಳೆಯನ್ನು ದಾಟತಕ್ಕ ಸ್ಥಳಕ್ಕೆ ಬಂದನು. 23 ಯಾಕೋಬನು ತನ್ನ ಕುಟುಂಬದವರನ್ನೂ ತನ್ನಲ್ಲಿದ್ದ ಪ್ರತಿಯೊಂದನ್ನೂ ಆಚೆದಡಕ್ಕೆ ಕಳುಹಿಸಿದನು.

ದೇವರೊಡನೆ ಹೋರಾಟ

24 ಎಲ್ಲರನ್ನೂ ಹೊಳೆ ದಾಟಿಸಿದ ಮೇಲೆ ಕೊನೆಯವನಾಗಿ ತಾನೊಬ್ಬನೇ ಹೊಳೆದಾಟಲು ನಿಂತಿದ್ದಾಗ ಒಬ್ಬ ಪುರುಷನು ಬಂದು ಸೂರ್ಯೋದಯದವರೆಗೂ ಹೋರಾಡಿದನು. 25 ಯಾಕೋಬನನ್ನು ಸೋಲಿಸಲು ತನಗೆ ಸಾಧ್ಯವಾಗದಿರುವುದನ್ನು ಗಮನಿಸಿದ ಆ ಪುರುಷನು ಯಾಕೋಬನ ತೊಡೆಯನ್ನು ಮುಟ್ಟಿದನು. ಆಗ ಯಾಕೋಬನ ಕೀಲು ತಪ್ಪಿತು.

26 ಆ ಪುರುಷನು ಯಾಕೋಬನಿಗೆ, “ನನ್ನನ್ನು ಬಿಡು, ಸೂರ್ಯೋದಯವಾಗುತ್ತಿದೆ” ಎಂದು ಹೇಳಿದನು.

ಆದರೆ ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನು ಬಿಡುವುದಿಲ್ಲ” ಎಂದು ಹೇಳಿದನು.

27 ಆ ಪುರುಷನು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.

ಅದಕ್ಕೆ ಯಾಕೋಬನು, “ನನ್ನ ಹೆಸರು ಯಾಕೋಬ” ಅಂದನು.

28 ಆಗ ಆ ಪುರುಷನು, “ಇನ್ನು ಮೇಲೆ ನಿನ್ನ ಹೆಸರು ‘ಯಾಕೋಬ’ ಎಂದಿರುವುದಿಲ್ಲ. ಇಂದಿನಿಂದ ನಿನ್ನ ಹೆಸರು ‘ಇಸ್ರೇಲ್’ ಎಂದಾಗುವುದು. ನಾನೇ ನಿನಗೆ ಈ ಹೆಸರನ್ನು ಕೊಟ್ಟಿದ್ದೇನೆ; ಯಾಕೆಂದರೆ ನೀನು ದೇವರೊಡನೆಯೂ ಮನುಷ್ಯರೊಡನೆಯೂ ಹೋರಾಡಿದೆ; ಆದರೂ ನೀನು ಸೋಲಲಿಲ್ಲ” ಎಂದು ಹೇಳಿದನು.

29 ಯಾಕೋಬನು ಆತನಿಗೆ, “ದಯವಿಟ್ಟು ನಿನ್ನ ಹೆಸರನ್ನು ತಿಳಿಸು” ಎಂದು ಕೇಳಿದನು.

ಅದಕ್ಕೆ ಆ ಪುರುಷನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಯಾಕೋಬನನ್ನು ಆಶೀರ್ವದಿಸಿದನು.

30 ಆದ್ದರಿಂದ ಯಾಕೋಬನು, “ಈ ಸ್ಥಳದಲ್ಲಿ ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ ನನ್ನ ಜೀವ ಉಳಿಯಿತು” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು. 31 ಆಮೇಲೆ ಅವನು ಪೆನೀಯೇಲ್‌ನಿಂದ ಹೊರಟುಹೋಗುತ್ತಿರುವಾಗ ಸೂರ್ಯೋದಯವಾಯಿತು. ಯಾಕೋಬನು ತನ್ನ ಕೀಲುನೋವಿನಿಂದ ಕುಂಟುತ್ತಾ ಹೋದನು.

ಕೀರ್ತನೆಗಳು 121

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

2 ತಿಮೊಥೆಯನಿಗೆ 3:14-4:5

14 ಆದರೆ ನೀನು ಕಲಿತಿರುವ ಉಪದೇಶಗಳನ್ನು ಅನುಸರಿಸು. ಅವು ಸತ್ಯವೆಂಬುದು ನಿನಗೆ ತಿಳಿದಿದೆ. ಅವುಗಳನ್ನು ನಿನಗೆ ಕಲಿಸಿದ ಜನರು ನಂಬಿಕೆಗೆ ಯೋಗ್ಯರೆಂಬುದು ನಿನಗೆ ತಿಳಿದಿದೆ. 15 ಚಿಕ್ಕಂದಿನಿಂದಲೂ ನಿನಗೆ ಪವಿತ್ರ ಗ್ರಂಥದ ಪರಿಚಯವಿದೆ. ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಆ ಪವಿತ್ರ ಗ್ರಂಥವು ಶಕ್ತವಾಗಿದೆ. ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ಆ ಜ್ಞಾನವು ರಕ್ಷಣೆಯ ಕಡೆಗೆ ನಡೆಸುತ್ತದೆ. 16 ಪವಿತ್ರ ಗ್ರಂಥವನ್ನು ದೇವರು ದಯಪಾಲಿಸಿದನು. ಉಪದೇಶವನ್ನು ಮಾಡುವುದಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಅದು ಉಪಯುಕ್ತವಾಗಿದೆ. 17 ಆದ್ದರಿಂದ ದೇವರ ಸೇವಕರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

ಜೀವಂತರಾಗಿರುವ ಜನರಿಗೂ ಸತ್ತುಹೋಗಿರುವ ಜನರಿಗೂ ನ್ಯಾಯತೀರಿಸುವಾತನು ಕ್ರಿಸ್ತ ಯೇಸುವೇ. ಆತನು ತನ್ನ ರಾಜ್ಯವನ್ನು ಹೊಂದಿದ್ದಾನೆ. ಆತನು ಮತ್ತೆ ಬರುವನು. ಆದ್ದರಿಂದ ಯೇಸು ಕ್ರಿಸ್ತನ ಮತ್ತು ದೇವರ ಸನ್ನಿಧಿಯಲ್ಲಿ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಸುವಾರ್ತೆಯನ್ನು ಜನರಿಗೆ ತಿಳಿಸು. ಕಾಲವು ಅನುಕೂಲವಾಗಿದ್ದರೂ ಅನಾನುಕೂಲವಾಗಿದ್ದರೂ ಬೋಧನೆಯನ್ನು ಮುಂದುವರಿಸು. ಜನರು ಮಾಡಬೇಕಾದುದನ್ನು ಅವರಿಗೆ ತಿಳಿಸು. ಅವರು ತಪ್ಪು ಮಾಡಿದಾಗ ಅದನ್ನು ಅವರಿಗೆ ತೋರಿಸಿಕೊಡು. ಅವರನ್ನು ಗದರಿಸು, ಇವುಗಳನ್ನು ಬಹಳ ತಾಳ್ಮೆಯಿಂದಲೂ ಎಚ್ಚರಿಕೆಯಿಂದಲೂ ಮಾಡು.

ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳುಕಥೆಗಳನ್ನು ಕೇಳಲಾರಂಭಿಸುತ್ತಾರೆ. ಆದರೆ ನೀನು ಎಲ್ಲಾ ಕಾಲದಲ್ಲಿಯೂ ಸ್ವಸ್ಥಚಿತ್ತನಾಗಿರು. ತೊಂದರೆಗಳು ಬಂದಾಗ ಸಹಿಸಿಕೊ. ಸುವಾರ್ತೆಯನ್ನು ಪ್ರಚಾರಮಾಡು. ದೇವರ ಸೇವಕನಿಗೆ ಯೋಗ್ಯವಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿರು.

ಲೂಕ 18:1-8

ತನ್ನ ಜನರಿಗೆ ದೇವರ ಉತ್ತರ

18 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”

ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International