Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
ನನಗೆ ಸಹಾಯವು ಎಲ್ಲಿಂದ ಬರುವುದು?
2 ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
ನನಗೆ ಸಹಾಯವು ಬರುವುದು.
3 ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
4 ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
ನಿದ್ರಿಸುವುದೂ ಇಲ್ಲ!
5 ನಿನ್ನನ್ನು ಕಾಯುವವನು ಯೆಹೋವನೇ.
ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
6 ಹಗಲಲ್ಲಿ ಸೂರ್ಯನೂ
ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
7 ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8 ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
ಆತನು ನಿನ್ನನ್ನು ಸದಾಕಾಲ ಕಾಪಾಡುವನು.
3 ಯಾಕೋಬನ ಅಣ್ಣನಾದ ಏಸಾವನು ಸೇಯೀರ್ ಎಂಬ ಸ್ಥಳದಲ್ಲಿ ವಾಸವಾಗಿದ್ದನು. ಈ ಸ್ಥಳವು ಎದೋಮಿನ ಗುಡ್ಡಗಾಡು ಪ್ರದೇಶವಾಗಿತ್ತು. ಯಾಕೋಬನು ತನ್ನ ಸಂದೇಶಕರ ಮೂಲಕ 4 ಏಸಾವನಿಗೆ ಈ ಸಂಗತಿಗಳನ್ನು ತಿಳಿಸಿದನು: “ನಿನ್ನ ಸೇವಕನಾದ ಯಾಕೋಬನು ಹೇಳುವುದೇನೆಂದರೆ, ‘ನಾನು ಕಳೆದ ವರ್ಷಗಳೆಲ್ಲಾ ಲಾಬಾನನೊಡನೆ ಜೀವಿಸಿದೆನು. 5 ನನಗೆ ಅನೇಕ ದನಗಳೂ, ಕತ್ತೆಗಳೂ, ಆಡುಕುರಿಗಳೂ ಮತ್ತು ಸೇವಕಸೇವಕಿಯರೂ ಇದ್ದಾರೆ. ಸ್ವಾಮೀ, ನೀವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.’”
6 ಸಂದೇಶಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಬಳಿಗೆ ಹೋದೆವು. ಅವನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ಅವನೊಡನೆ ನಾನೂರು ಮಂದಿ ಗಂಡಸರಿದ್ದಾರೆ” ಎಂದು ಹೇಳಿದರು.
7 ಯಾಕೋಬನಿಗೆ ಭಯವಾಯಿತು. ಅವನು ತನ್ನೊಡನೆ ಇದ್ದ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. ಅವನು ಎಲ್ಲಾ ಆಡುಕುರಿಗಳನ್ನೂ ದನಕರುಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. 8 “ಒಂದುವೇಳೆ ಏಸಾವನು ಬಂದು ಒಂದು ಗುಂಪನ್ನು ನಾಶಗೊಳಿಸಿದರೆ, ಮತ್ತೊಂದು ಗುಂಪು ಓಡಿಹೋಗಿ ತಪ್ಪಿಸಿಕೊಳ್ಳಬಹುದು” ಎಂಬುದು ಅವನ ಆಲೋಚನೆಯಾಗಿತ್ತು.
9 ಯಾಕೋಬನು, “ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರಾಗಿರುವ ಯೆಹೋವನೇ, ನನ್ನ ದೇಶಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಿಂತಿರುಗಿ ಬರುವಂತೆ ನೀನು ಹೇಳಿದೆ. ನೀನು ನನಗೆ ಒಳ್ಳೆಯದನ್ನು ಮಾಡುವುದಾಗಿ ಹೇಳಿದೆ. 10 ನೀನು ನನಗೆ ತುಂಬ ಕರುಣೆ ತೋರಿದೆ. ನೀನು ನನಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಮೊದಲನೆ ಸಲ ನಾನು ಜೋರ್ಡನ್ ನದಿಯನ್ನು ದಾಟಿ ಪ್ರಯಾಣ ಮಾಡಿದಾಗ, ಕೇವಲ ನನ್ನ ಊರುಗೋಲೇ ಹೊರತು ಬೇರೇನೂ ನನಗಿರಲಿಲ್ಲ. ಆದರೆ ಈಗ ಎರಡು ಗುಂಪುಗಳಿಗೆ ಬೇಕಾದ ವಸ್ತುಗಳನ್ನು ನಾನು ಪಡೆದಿದ್ದೇನೆ. 11 ಇಂತಿರಲು, ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿರುವೆ. ಏಸಾವನಿಂದ ನನ್ನನ್ನು ಕಾಪಾಡು. ಅವನು ಬಂದು ನಮ್ಮೆಲ್ಲರನ್ನೂ ತಾಯಂದಿರನ್ನೂ ಮಕ್ಕಳನ್ನೂ ಕೊಲ್ಲುವನೆಂಬ ಭಯ ನನಗಿದೆ. 12 ‘ನಾನು ನಿನಗೆ ಒಳ್ಳೆಯದನ್ನು ಮಾಡುವೆ. ನಾನು ನಿನ್ನ ಕುಟುಂಬವನ್ನು ಹೆಚ್ಚಿಸಿ ನಿನ್ನ ಮಕ್ಕಳನ್ನು ಸಮುದ್ರದ ಮರಳಿನಷ್ಟು ವೃದ್ಧಿಗೊಳಿಸುವೆನು. ಅವರು ಲೆಕ್ಕಿಸಲಾಗದಷ್ಟು ಅಸಂಖ್ಯಾತವಾಗಿರುವರು’ ಎಂದು ನೀನು ನನಗೆ ವಾಗ್ದಾನ ಮಾಡಿದಿಯಲ್ಲವೇ” ಎಂದು ಪ್ರಾರ್ಥಿಸಿದನು.
13 ಯಾಕೋಬನು ಆ ರಾತ್ರಿ ಅಲ್ಲಿಯೇ ಉಳಿದುಕೊಂಡು ಏಸಾವನಿಗೆ ಉಡುಗೊರೆಯಾಗಿ ಕೊಡಲು ಕೆಲವು ವಸ್ತುಗಳನ್ನು ಸಿದ್ಧಗೊಳಿಸಿದನು. 14 ಯಾಕೋಬನು ಇನ್ನೂರು ಮೇಕೆಗಳನ್ನು, ಇಪ್ಪತ್ತು ಹೋತಗಳನ್ನು, ಇನ್ನೂರು ಕುರಿಗಳನ್ನು ಮತ್ತು ಇಪ್ಪತ್ತು ಟಗರುಗಳನ್ನು ತೆಗೆದುಕೊಂಡನು. 15 ಯಾಕೋಬನು ಮೂವತ್ತು ಒಂಟೆಗಳನ್ನು ಮತ್ತು ಅವುಗಳ ಮರಿಗಳನ್ನು ನಲವತ್ತು ಹಸುಗಳನ್ನು ಮತ್ತು ಹತ್ತು ಹೋರಿಗಳನ್ನು, ಇಪ್ಪತ್ತು ಹೆಣ್ಣು ಕತ್ತೆಗಳನ್ನು ಮತ್ತು ಹತ್ತು ಗಂಡು ಕತ್ತೆಗಳನ್ನು ತೆಗೆದುಕೊಂಡನು. 16 ಯಾಕೋಬನು ಪಶುಗಳ ಪ್ರತಿಯೊಂದು ಮಂದೆಯನ್ನೂ ತನ್ನ ಸೇವಕರ ವಶಕ್ಕೆ ಕೊಟ್ಟನು. ಆಮೇಲೆ ಯಾಕೋಬನು ಸೇವಕರಿಗೆ, “ಪಶುಗಳ ಪ್ರತಿಯೊಂದು ಗುಂಪನ್ನು ವಿಂಗಡಿಸಿ ನನ್ನ ಮುಂದೆ ಹೋಗಿರಿ; ಅಲ್ಲದೆ ಪ್ರತಿಯೊಂದು ಮಂದೆಯ ನಡುವೆಯೂ ಸ್ವಲ್ಪ ಅಂತರವಿರಲಿ” ಎಂದು ಹೇಳಿದನು. 17 ಯಾಕೋಬನು ಅವರಿಗೆ ಅವರವರ ಕರ್ತವ್ಯಗಳನ್ನು ತಿಳಿಸಿದನು. ಯಾಕೋಬನು ಪಶುಗಳ ಮೊದಲನೆ ಗುಂಪಿನ ಸೇವಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನ ಬಳಿಗೆ ಬಂದು, ‘ಇವು ಯಾರ ಪಶುಗಳು? ನೀನು ಎಲ್ಲಿಗೆ ಹೋಗುತ್ತಿರುವೆ? ನೀನು ಯಾರ ಸೇವಕನು?’ ಎಂದು ಕೇಳುವನು. 18 ಆಗ ನೀನು, ‘ಪಶುಗಳು ನಿನ್ನ ಸೇವಕನಾದ ಯಾಕೋಬನವು. ನನ್ನ ಒಡೆಯನಾದ ಏಸಾವನೇ, ಯಾಕೋಬನು ಇವುಗಳನ್ನು ನಿನಗೆ ಉಡುಗೊರೆಯಾಗಿ ಕಳುಹಿಸಿದ್ದಾನೆ. ಅಲ್ಲದೆ ಅವನು ಸಹ ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ತಿಳಿಸಬೇಕು” ಎಂದು ಹೇಳಿದನು.
19 ಇದೇ ರೀತಿ ಮಾಡುವಂತೆ ಯಾಕೋಬನು ಎರಡನೆಯ ಸೇವಕನಿಗೆ, ಮೂರನೆಯ ಸೇವಕನಿಗೆ ಮತ್ತು ಉಳಿದೆಲ್ಲಾ ಸೇವಕರಿಗೆ ಆಜ್ಞಾಪಿಸಿದನು. ಅವನು ಅವರಿಗೆ, “ನೀವು ಏಸಾವನನ್ನು ಭೇಟಿಯಾದಾಗ ಇದೇ ರೀತಿ ಮಾಡಬೇಕು. 20 ನೀವು ಅವನಿಗೆ, ‘ಇದು ನಿನಗೆ ಕಳುಹಿಸಿರುವ ಉಡುಗೊರೆ. ಅಲ್ಲದೆ ನಿನ್ನ ಸೇವಕನಾದ ಯಾಕೋಬನು ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ಹೇಳಬೇಕು” ಎಂದು ತಿಳಿಸಿದನು.
“ನಾನು ಈ ಜನರನ್ನು ಉಡುಗೊರೆಗಳೊಡನೆ ಮುಂದೆ ಕಳುಹಿಸಿದರೆ, ಒಂದುವೇಳೆ ಏಸಾವನು ನನ್ನನ್ನು ಕ್ಷಮಿಸಿ ನನ್ನನ್ನು ಸ್ವೀಕರಿಸಿಕೊಳ್ಳಬಹುದು” ಎಂಬುದು ಯಾಕೋಬನ ಆಲೋಚನೆಯಾಗಿತ್ತು. 21 ಯಾಕೋಬನು ಏಸಾವನಿಗೆ ಉಡುಗೊರೆಗಳನ್ನು ಕಳುಹಿಸಿ ಆ ರಾತ್ರಿ ಪಾಳೆಯದಲ್ಲಿ ಉಳಿದುಕೊಂಡನು.
ಕುರುಡನಿಗೆ ದೃಷ್ಟಿದಾನ
(ಮತ್ತಾಯ 20:29-34; ಲೂಕ 18:35-43)
46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.
48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.
49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.
ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.
51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.
ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.
Kannada Holy Bible: Easy-to-Read Version. All rights reserved. © 1997 Bible League International