Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
ನನಗೆ ಸಹಾಯವು ಎಲ್ಲಿಂದ ಬರುವುದು?
2 ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
ನನಗೆ ಸಹಾಯವು ಬರುವುದು.
3 ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
4 ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
ನಿದ್ರಿಸುವುದೂ ಇಲ್ಲ!
5 ನಿನ್ನನ್ನು ಕಾಯುವವನು ಯೆಹೋವನೇ.
ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
6 ಹಗಲಲ್ಲಿ ಸೂರ್ಯನೂ
ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
7 ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8 ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
ಆತನು ನಿನ್ನನ್ನು ಸದಾಕಾಲ ಕಾಪಾಡುವನು.
ಯಾಕೋಬ ಮತ್ತು ಲಾಬಾನರ ಒಪ್ಪಂದ
43 ಲಾಬಾನನು ಯಾಕೋಬನಿಗೆ, “ಈ ಸ್ತ್ರೀಯರು ನನ್ನ ಮಕ್ಕಳು. ಅವರ ಮಕ್ಕಳು ನನಗೆ ಸೇರಿದವರು; ಈ ಪಶುಗಳು ನನ್ನವು. ನೀನು ಇಲ್ಲಿ ನೋಡುವ ಪ್ರತಿಯೊಂದೂ ನನಗೆ ಸೇರಿದ್ದು. ಆದರೆ ನನ್ನ ಹೆಣ್ಣುಮಕ್ಕಳನ್ನಾಗಲಿ ಅವರ ಮಕ್ಕಳನ್ನಾಗಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. 44 ಆದ್ದರಿಂದ ನಿನ್ನೊಡನೆ ಒಂದು ಒಪ್ಪಂದ ಮಾಡಿಕೊಳ್ಳಲು ಸಿದ್ಧನಾಗಿದ್ದೇನೆ. ನಮ್ಮ ಒಪ್ಪಂದಕ್ಕೆ ಸಾಕ್ಷಿಯಾಗಿ ಕಲ್ಲುಗಳ ಒಂದು ಕುಪ್ಪೆಯನ್ನು ಮಾಡೋಣ” ಎಂದು ಹೇಳಿದನು.
45 ಅಂತೆಯೇ ಯಾಕೋಬನು ಮಾಡಿಕೊಂಡ ಒಪ್ಪಂದಕ್ಕೆ ಸಾಕ್ಷಿಯಾಗಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಬಂದು ಅಲ್ಲಿಟ್ಟನು. 46 ಅವನು ತನ್ನ ಜನರಿಗೆ ಮತ್ತಷ್ಟು ಕಲ್ಲುಗಳನ್ನು ತೆಗೆದುಕೊಂಡು ಬಂದು ಕಲ್ಲಿನ ಕುಪ್ಪೆ ಮಾಡುವಂತೆ ಹೇಳಿದನು. ಬಳಿಕ ಅವರು ಆ ಕುಪ್ಪೆಯ ಬಳಿಯಲ್ಲಿ ಊಟಮಾಡಿದರು. 47 ಲಾಬಾನನು ಆ ಸ್ಥಳಕ್ಕೆ ಯಗರ್‌ಸಾಹದೂತ ಎಂದು ಹೆಸರಿಟ್ಟನು. ಆದರೆ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
48 ಲಾಬಾನನು ಯಾಕೋಬನಿಗೆ, “ಈ ಕಲ್ಲುಗಳ ಕುಪ್ಪೆಯು ನಮ್ಮಿಬ್ಬರಿಗೂ ನಮ್ಮ ಒಪ್ಪಂದವನ್ನು ಜ್ಞಾಪಕಕ್ಕೆ ತರುತ್ತದೆ” ಎಂದು ಹೇಳಿದನು. ಆದಕಾರಣ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
49 ಲಾಬಾನನು, “ನಾವು ಒಬ್ಬರನ್ನೊಬ್ಬರು ಅಗಲಿರುವಾಗ ಯೆಹೋವನೇ ನಮ್ಮನ್ನು ನೋಡಿಕೊಳ್ಳಲಿ” ಎಂದು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಮಿಚ್ಪಾ ಎಂದೂ ಹೆಸರಿಡಲಾಯಿತು.
50 ಆಮೇಲೆ ಲಾಬಾನನು “ನೀನು ನನ್ನ ಹೆಣ್ಣುಮಕ್ಕಳನ್ನು ನೋಯಿಸಿದರೆ, ದೇವರು ನಿನ್ನನ್ನು ದಂಡಿಸುವನು ಎಂಬುದನ್ನು ನೆನಪು ಮಾಡಿಕೊ. ನೀನು ಬೇರೆ ಸ್ತ್ರೀಯರನ್ನು ಮದುವೆ ಮಾಡಿಕೊಂಡರೆ, ದೇವರು ನಿನ್ನನ್ನು ನೋಡುತ್ತಿದ್ದಾನೆ ಎಂಬುದನ್ನು ನೆನಪು ಮಾಡಿಕೊ. 51 ನಮ್ಮಿಬ್ಬರ ಮಧ್ಯದಲ್ಲಿ ನಾನಿಟ್ಟಿರುವ ಈ ಕಲ್ಲುಗಳು ಇಲ್ಲಿವೆ; ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಸೂಚಿಸುವ ವಿಶೇಷವಾದ ಕಲ್ಲೂ ಇಲ್ಲಿದೆ. 52 ಈ ಕಲ್ಲುಗಳ ಕುಪ್ಪೆಯೂ ವಿಶೇಷವಾದ ಈ ಕಲ್ಲೂ ನಮ್ಮ ಒಪ್ಪಂದವನ್ನು ನೆನಪುಮಾಡಿಕೊಳ್ಳಲು ನಮ್ಮಿಬ್ಬರಿಗೂ ಸಹಾಯ ಮಾಡುತ್ತವೆ. ನಾನು ನಿನಗೆ ವಿರೋಧವಾಗಿ ಹೋರಾಡುವುದಕ್ಕಾಗಿ ಈ ಕಲ್ಲುಗಳನ್ನು ದಾಟಿ ಬರುವುದಿಲ್ಲ. ನೀನು ನನಗೆ ವಿರೋಧವಾಗಿ ಈ ಕಲ್ಲುಗಳನ್ನು ದಾಟಿ ನನ್ನ ಕಡೆಗೆ ಬರಕೂಡದು. 53 ನಾವು ಈ ಒಪ್ಪಂದವನ್ನು ಮುರಿದುಹಾಕಿದರೆ, ನಮ್ಮಲ್ಲಿ ಅಪರಾಧಿಯಾದವನಿಗೆ ಅಬ್ರಹಾಮನ ದೇವರು, ನಾಹೋರನ ದೇವರು ಮತ್ತು ಅವರ ಪೂರ್ವಿಕರ ದೇವರು ನ್ಯಾಯತೀರಿಸಲಿ” ಎಂದು ಹೇಳಿದನು.
ಅದೇ ರೀತಿಯಲ್ಲಿ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವೆಮಾಡುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದನು. 54 ಆಮೇಲೆ ಯಾಕೋಬನು ಒಂದು ಪಶುವನ್ನು ಕೊಂದು ಅದನ್ನು ಬೆಟ್ಟದ ಮೇಲೆ ಯಜ್ಞವಾಗಿ ಅರ್ಪಿಸಿದನು; ತನ್ನ ಜನರನ್ನು ಊಟಕ್ಕೆ ಆಹ್ವಾನಿಸಿದನು. ಅವರು ಊಟ ಮಾಡಿದ ಮೇಲೆ, ಆ ರಾತ್ರಿ ಬೆಟ್ಟದ ಮೇಲೆ ಇದ್ದರು. 55 ಮರುದಿನ ಮುಂಜಾನೆ ಲಾಬಾನನು ತನ್ನ ಮೊಮ್ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಮುದ್ದಿಟ್ಟು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿದನು.
ಏಸಾವನೊಂದಿಗೆ ಮತ್ತೆ ಒಂದಾದದ್ದು
32 ಯಾಕೋಬನು ಅಲ್ಲಿಂದ ಹೊರಟು ಪ್ರಯಾಣ ಮಾಡುತ್ತಿರುವಾಗ ದೇವದೂತರನ್ನು ನೋಡಿದನು. 2 ಆದ್ದರಿಂದ ಅವನು, “ಇದು ದೇವರ ಪಾಳೆಯ” ಎಂದು ಹೇಳಿ “ಮಹನಯಿಮ್” ಎಂದು ಹೆಸರಿಟ್ಟನು.
ಯೋಗ್ಯನಾದ ಕೆಲಸಗಾರನು
14 ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತಲೇ ಇರು. ಪದಗಳ ಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳುವ ಜನರು ಅದರಿಂದ ನಾಶವಾಗುತ್ತಾರೆ. 15 ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.
16 ದೇವರಿಂದ ಬಂದಿಲ್ಲದ ನಿರರ್ಥಕ ಸಂಗತಿಗಳನ್ನು ಮಾತನಾಡುವ ಜನರಿಂದ ದೂರವಾಗಿರು. ಆ ರೀತಿಯ ಮಾತುಗಳು ಜನರನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತವೆ. 17 ಅವರ ಕೆಟ್ಟ ಉಪದೇಶಗಳು ದೇಹದಲ್ಲಿ ಹರಡಿಕೊಳ್ಳುವ ಕಾಯಿಲೆಯಂತೆ ವ್ಯಾಪಿಸಿಕೊಳ್ಳುತ್ತವೆ. ಹುಮೆನಾಯನು ಮತ್ತು ಪಿಲೇತನು ಅಂತಹ ಜನರಾಗಿದ್ದಾರೆ. 18 ಅವರು ಸತ್ಯೋಪದೇಶವನ್ನು ತಿರಸ್ಕರಿಸಿದರು. ಎಲ್ಲಾ ಜನರಿಗೆ ಉಂಟಾಗುವ ಪುನರುತ್ಥಾನವು ಈಗಾಗಲೇ ಆಗಿ ಹೋಗಿದೆಯೆಂದು ಅವರು ಹೇಳುತ್ತಾರೆ. ಅವರಿಬ್ಬರು ಕೆಲವು ಜನರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ.
19 ಆದರೆ ದೇವರ ಭದ್ರವಾದ ಬುನಾದಿಯು ಬದಲಾಗುವುದೇ ಇಲ್ಲ. “ಪ್ರಭುವಿಗೆ ತನ್ನವರು ಯಾರೆಂಬುದು ತಿಳಿದಿದೆ”(A) ಎಂತಲೂ “ಪ್ರಭುವಿನಲ್ಲಿ ನಂಬಿಕೆಯಿಟ್ಟಿರುವವರೆಲ್ಲರೂ ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಆ ಬುನಾದಿಯ ಮೇಲೆ ಕೆತ್ತಲಾಗಿದೆ.
20 ದೊಡ್ಡ ಮನೆಯಲ್ಲಿ ಚಿನ್ನಬೆಳ್ಳಿಗಳಿಂದ ಮಾಡಿದ ವಸ್ತುಗಳಿರುತ್ತವೆ. ಅಲ್ಲದೆ ಮರದಿಂದ, ಮಣ್ಣಿನಿಂದ ಮಾಡಿದ ವಸ್ತುಗಳೂ ಇರುತ್ತವೆ. ಕೆಲವನ್ನು ವಿಶೇಷ ಕಾರ್ಯಕ್ಕಾಗಿ ಬಳಸುತ್ತಾರೆ. ಇತರ ವಸ್ತುಗಳನ್ನು ಹೀನವಾದ ಕೃತ್ಯಗಳಿಗೆ ಬಳಸುತ್ತಾರೆ. 21 ಹೀಗಿರಲಾಗಿ ಒಬ್ಬನು ತನ್ನ ದುಷ್ಕೃತ್ಯಗಳನ್ನು ತೊರೆದು ತನ್ನನ್ನು ಶುದ್ಧೀಕರಿಸಿಕೊಂಡರೆ ಅವನನ್ನು ಬಳಸಲಾಗುವುದು. ಅವನು ದೇವರ ಸೇವೆಗೆ ಮೀಸಲಾಗುತ್ತಾನೆ; ಯಜಮಾನನಿಗೆ ಉಪಯುಕ್ತನಾಗುತ್ತಾನೆ; ಸತ್ಕಾರ್ಯಗಳನ್ನು ಕೈಕೊಳ್ಳಲು ಸಿದ್ಧನಾಗಿರುತ್ತಾನೆ.
22 ಯುವಕರು ಇಷ್ಟಪಡುವ ಕೆಟ್ಟಕಾರ್ಯಗಳಿಂದ ನೀನು ದೂರವಾಗಿರು. ಪ್ರೀತಿ, ನಂಬಿಕೆ ಮತ್ತು ಶಾಂತಿಯನ್ನು ಹೊಂದಿದವನಾಗಿದ್ದು ಯೋಗ್ಯವಾದ ರೀತಿಯಲ್ಲಿ ಜೀವಿಸಲು ಬಹಳವಾಗಿ ಪ್ರಯತ್ನಪಡು. ಪ್ರಭುವಿನಲ್ಲಿ ಭರವಸವಿಟ್ಟಿರುವ ಮತ್ತು ಪರಿಶುದ್ಧ ಹೃದಯ ಹೊಂದಿರುವ ಜನರೊಂದಿಗೆ ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡು. 23 ಮೂಢತನದ ಮತ್ತು ಕ್ಷುಲ್ಲಕವಾದ ವಾದವಿವಾದಗಳಿಂದ ದೂರವಾಗಿರು. ಆ ವಾಗ್ವಾದಗಳು ಬೆಳೆದು ದೊಡ್ಡದಾಗುತ್ತವೆ ಎಂಬುದು ನಿನಗೆ ತಿಳಿದಿದೆ. 24 ಪ್ರಭುವಿನ ಸೇವಕನು ವಾಗ್ವಾದ ಮಾಡಲೇಬಾರದು. ಅವನು ಪ್ರತಿಯೊಬ್ಬರಿಗೂ ದಯೆತೋರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; ತಾಳ್ಮೆಯಿಂದಿರಬೇಕು. 25 ಅವನು ತನ್ನೊಂದಿಗೆ ಸಮ್ಮತಿಸದಿರುವ ಜನರಿಗೆ ಸಾತ್ವಿಕ ರೀತಿಯಲ್ಲಿ ಉಪದೇಶ ಮಾಡಬೇಕು. ಅವರು ಸತ್ಯವನ್ನು ಅಂಗೀಕರಿಸಿಕೊಳ್ಳುವಂತೆ ದೇವರು ಅವರ ಹೃದಯಗಳನ್ನು ಪರಿವರ್ತಿಸಬಲ್ಲನು. 26 ಸೈತಾನನು ಆ ಜನರನ್ನು ತನ್ನ ಬಲೆಗೆ ಬೀಳಿಸಿ, ತನ್ನ ಅಪೇಕ್ಷೆಗೆ ತಕ್ಕಂತೆ ಅವರಿಂದ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ. ಆದರೆ ಅವರು ಎಚ್ಚರಗೊಂಡು, ಸೈತಾನನು ತಮ್ಮನ್ನು ವಶಪಡಿಸಿ ಕೊಂಡಿರುವುದನ್ನು ಗುರುತಿಸಬಹುದು ಹಾಗೂ ಸೈತಾನನ ಬಲೆಯಿಂದ ತಪ್ಪಿಸಿಕೊಂಡು ಬಿಡುಗಡೆ ಹೊಂದಬಹುದು.
Kannada Holy Bible: Easy-to-Read Version. All rights reserved. © 1997 Bible League International