Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 121

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
    ನನಗೆ ಸಹಾಯವು ಎಲ್ಲಿಂದ ಬರುವುದು?
ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
    ನನಗೆ ಸಹಾಯವು ಬರುವುದು.
ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
    ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
    ನಿದ್ರಿಸುವುದೂ ಇಲ್ಲ!
ನಿನ್ನನ್ನು ಕಾಯುವವನು ಯೆಹೋವನೇ.
    ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
ಹಗಲಲ್ಲಿ ಸೂರ್ಯನೂ
    ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
    ನಿನ್ನ ಪ್ರಾಣವನ್ನು ಕಾಯುವನು.
ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
    ಆತನು ನಿನ್ನನ್ನು ಸದಾಕಾಲ ಕಾಪಾಡುವನು.

ಯೆಶಾಯ 54:11-17

11 “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ
    ಯಾರೂ ನಿನ್ನನ್ನು ಸಂತೈಸಲಿಲ್ಲ.
ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು.
    ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು.
ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು.
12 ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ.
    ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು.
    ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು.
13 ನಿನ್ನ ಮಕ್ಕಳು ದೇವರನ್ನು ಅನುಸರಿಸುವರು.
    ಆತನು ಅವರಿಗೆ ಬೋಧಿಸುವನು.
    ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು.
14 ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ.
    ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ.
ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ.
    ಯಾವುದೂ ನಿನಗೆ ಹಾನಿಮಾಡದು.
15 ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು.
    ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ.

16 “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು.

17 “ನಿನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು.

“ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ.

ಅಪೊಸ್ತಲರ ಕಾರ್ಯಗಳು 17:22-34

22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ. 23 ನಾನು ನಿಮ್ಮ ಪಟ್ಟಣದಲ್ಲಿ ನಡೆದು ಹೋಗುವಾಗ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಕಂಡೆನು. ಒಂದು ಯಜ್ಞವೇದಿಕೆಯ ಮೇಲೆ, ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು. ನಿಮಗೆ ಗೊತ್ತಿಲ್ಲದ ದೇವರನ್ನು ನೀವು ಆರಾಧಿಸುತ್ತಿದ್ದೀರಿ.

24 “ದೇವರ ಬಗ್ಗೆಯೇ ನಾನು ನಿಮಗೆ ಹೇಳುತ್ತಿದ್ದೇನೆ! ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಪ್ರತಿಯೊಂದನ್ನು ಸೃಷ್ಟಿಮಾಡಿದಾತನೇ ಆ ದೇವರು. ಆತನೇ ಭೂಮ್ಯಾಕಾಶಗಳ ಒಡೆಯನು. ಮನುಷ್ಯರು ನಿರ್ಮಿಸುವ ಗುಡಿಗಳಲ್ಲಿ ಆತನು ಜೀವಿಸುವವನಲ್ಲ. 25 ಮನುಷ್ಯರಿಗೆ ಜೀವವನ್ನೂ ಉಸಿರನ್ನೂ ಸಮಸ್ತವನ್ನೂ ಕೊಡುವಾತನು ಆ ದೇವರೇ. ಆತನಿಗೆ ಜನರ ಸೇವೆಯ ಅಗತ್ಯವೇನೂ ಇಲ್ಲ. ಆತನಿಗೆ ಕೊರತೆಯೆಂಬುದೂ ಇಲ್ಲ. 26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.

27 “ಜನರು ತನ್ನನ್ನು ಹುಡುಕಬೇಕೆಂಬುದು ದೇವರ ಉದ್ದೇಶವಾಗಿತ್ತು. ತನಗಾಗಿ ಸುತ್ತಮುತ್ತಲೆಲ್ಲಾ ಹುಡುಕಿ ಕಂಡುಕೊಳ್ಳಬಹುದೆಂದು ದೇವರು ಹಾಗೆ ಮಾಡಿದನು. ಆದರೆ ಆತನು ನಮ್ಮಲ್ಲಿ ಯಾರಿಗೂ ಬಹುದೂರವಾಗಿಲ್ಲ. 28 ನಾವು ಆತನೊಂದಿಗೆ ವಾಸಿಸುತ್ತೇವೆ, ನಡೆಯುತ್ತೇವೆ, ಇರುತ್ತೇವೆ. ನಿಮ್ಮವರೇ ಆದ ಕೆಲವು ಲೇಖಕರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.

29 “ನಾವು ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜನರು ಊಹಿಸಿಕೊಳ್ಳುವ ರೀತಿಯಲ್ಲಾಗಲಿ ನಿರ್ಮಿಸುವ ರೀತಿಯಲ್ಲಾಗಲಿ ದೇವರಿದ್ದಾನೆಂದು ನೀವು ಯೋಚಿಸಕೂಡದು. ಆತನು ಬೆಳ್ಳಿಬಂಗಾರ ಮತ್ತು ಕಲ್ಲುಗಳ ರೂಪದಲ್ಲಿಲ್ಲ. 30 ಹಿಂದಿನ ಕಾಲದಲ್ಲಿ ಜನರು ದೇವರನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ದೇವರು ಅದಕ್ಕೆ ಲಕ್ಷ್ಯಕೊಡಲಿಲ್ಲ. ಈಗಲಾದರೋ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವವರು ಪಶ್ಚಾತ್ತಾಪಪಡಬೇಕೆಂದು ಆತನು ಆಜ್ಞಾಪಿಸುತ್ತಾನೆ. 31 ಪ್ರಪಂಚದ ಜನರೆಲ್ಲರಿಗೂ ನ್ಯಾಯತೀರಿಸುವುದಕ್ಕಾಗಿ ದೇವರು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. ಅಂದು ನ್ಯಾಯತೀರಿಸುವುದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ಬಹುಕಾಲದ ಹಿಂದೆಯೇ ಆರಿಸಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ಖಚಿತಪಡಿಸುವುದಕ್ಕಾಗಿ ಆ ವ್ಯಕ್ತಿಯನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾನೆ.”

32 ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ ಎಂಬ ಸಂಗತಿಯನ್ನು ಕೇಳಿದ ಆ ಜನರಲ್ಲಿ ಕೆಲವರು ಅಪಹಾಸ್ಯಮಾಡಿದರು. ಇತರರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ” ಎಂದು ಹೇಳಿದರು. 33 ಆದ್ದರಿಂದ ಪೌಲನು ಅವರ ಬಳಿಯಿಂದ ಹೊರಟುಹೋದನು. 34 ಆದರೆ ಆ ಜನರಲ್ಲಿ ಕೆಲವರು ಪೌಲನನ್ನು ನಂಬಿ ಅವನನ್ನು ಸೇರಿಕೊಂಡರು. ನಂಬಿದ ಜನರಲ್ಲಿ ಅರಿಯೊಪಾಗ ನ್ಯಾಯಸಭೆಯ ಸದಸ್ಯನಾದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International