Revised Common Lectionary (Complementary)
ರಚನೆಗಾರ: ದಾವೀದ.
61 ದೇವರೇ, ನನ್ನ ಮೊರೆಯನ್ನು ಕೇಳು.
ನನ್ನ ಪ್ರಾರ್ಥನೆಗೆ ಕಿವಿಗೊಡು.
2 ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
3 ನೀನೇ ನನ್ನ ಆಶ್ರಯಸ್ಥಾನ;
ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
4 ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.
5 ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
6 ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
ಅವನು ಸದಾಕಾಲ ಜೀವಿಸಲಿ!
7 ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
8 ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.
ಯೆಹೂದದಲ್ಲಿ ಅಜರ್ಯನ ಆಳ್ವಿಕೆ
15 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು. 2 ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ. 3 ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು. 4 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.
5 ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾಮನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.
6 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. 7 ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾಮನು ಹೊಸ ರಾಜನಾದನು.
5 ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. 6 ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, 7 ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. 8 ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ. 9 ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.
11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International