Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 61

ರಚನೆಗಾರ: ದಾವೀದ.

61 ದೇವರೇ, ನನ್ನ ಮೊರೆಯನ್ನು ಕೇಳು.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
    ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
ನೀನೇ ನನ್ನ ಆಶ್ರಯಸ್ಥಾನ;
    ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.

ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
    ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
    ಅವನು ಸದಾಕಾಲ ಜೀವಿಸಲಿ!
ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
    ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
    ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.

2 ರಾಜರುಗಳು 5:19-27

19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು.

ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು. 20 ಆದರೆ ದೇವಮನುಷ್ಯನಾದ ಎಲೀಷನ ಸೇವಕನಾದ ಗೇಹಜಿಯು, “ನೋಡು, ಅರಾಮ್ಯನಾದ ನಾಮಾನನು ತಂದಿದ್ದ ಕಾಣಿಕೆಯನ್ನು ಸ್ವೀಕರಿಸದೆ ನನ್ನ ಒಡೆಯನಾದ ಎಲೀಷನು ಅವನನ್ನು ಕಳುಹಿಸಿಬಿಟ್ಟನು! ಯೆಹೋವನಾಣೆಯಾಗಿ, ನಾನು ನಾಮಾನನ ಹಿಂದೆ ಓಡಿಹೋಗಿ ಅವನಿಂದ ಏನನ್ನಾದರೂ ಪಡೆಯುತ್ತೇನೆ!” ಎಂದು ತನ್ನೊಳಗೆ ಅಂದುಕೊಂಡು,

21 ನಾಮಾನನ ಬಳಿಗೆ ಓಡಿದನು. ನಾಮಾನನು ತನ್ನ ಹಿಂದೆ ಓಡಿಬರುತ್ತಿರುವ ಒಬ್ಬನನ್ನು ನೋಡಿ ಗೇಹಜಿಯನ್ನು ಸಂಧಿಸಲು ರಥದಿಂದ ಇಳಿದನು. ನಾಮಾನನು, “ಎಲ್ಲವೂ ಕ್ಷೇಮವೇ?” ಎಂದು ಕೇಳಿದನು.

22 ಗೇಹಜಿಯು, “ಹೌದು, ಎಲ್ಲವೂ ಕ್ಷೇಮವಾಗಿದೆ. ನನ್ನ ಒಡೆಯನಾದ ಎಲೀಷನು ನನಗೆ, ‘ನೋಡು, ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಪ್ರವಾದಿಗಳ ಗುಂಪಿನಿಂದ ನನ್ನ ಬಳಿಗೆ ಇಬ್ಬರು ತರುಣರು ಬಂದಿದ್ದಾರೆ. ದಯವಿಟ್ಟು ಅವರಿಗೆ ಮೂವತ್ತೈದು ಕಿಲೋ.ಗ್ರಾಂ. ಬೆಳ್ಳಿಯನ್ನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ಬಾ’ ಎಂದು ನನ್ನನ್ನು ಕಳುಹಿಸಿದನು” ಎಂದು ಹೇಳಿದನು.

23 ನಾಮಾನನು, “ದಯಮಾಡಿ ಎಪ್ಪತ್ತು ಕಿಲೋಗ್ರಾಂ ತೆಗೆದುಕೊ!” ಎಂದು ಗೇಹಜಿಗೆ ಒತ್ತಾಯಪಡಿಸಿ ಎಪ್ಪತ್ತು ಕಿಲೋಗ್ರಾಂ ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಹಾಕಿದನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ತನ್ನ ಸೇವಕರಿಗೆ ಕೊಟ್ಟನು. ಆ ಸೇವಕರು ಈ ವಸ್ತುಗಳನ್ನು ತೆಗೆದುಕೊಂಡು ಗೇಹಜಿಯೊಡನೆ ಹೋದರು. 24 ಗೇಹಜಿಯು ಬೆಟ್ಟಕ್ಕೆ ಬಂದಾಗ, ಅವುಗಳನ್ನು ಸೇವಕರಿಂದ ತೆಗೆದುಕೊಂಡು ಅವರನ್ನು ಕಳುಹಿಸಿಬಿಟ್ಟನು. ನಂತರ ಗೇಹಜಿಯು ಅವುಗಳನ್ನು ಮನೆಯಲ್ಲಿ ಅಡಗಿಸಿಟ್ಟನು.

25 ಗೇಹಜಿಯು ಒಳಗೆ ಬಂದು ತನ್ನ ಒಡೆಯನಾದ ಎಲೀಷನ ಮುಂದೆ ನಿಂತುಕೊಂಡನು. ಎಲೀಷನು ಗೇಹಜಿಗೆ, “ನೀನು ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದನು.

ಗೇಹಜಿಯು, “ನಾನು ಎಲ್ಲಿಗೂ ಹೋಗಿರಲಿಲ್ಲ” ಎಂದನು.

26 ಎಲೀಷನು ಗೇಹಜಿಗೆ, “ಅದು ನಿಜವಲ್ಲ! ನಾಮಾನನು ನಿನ್ನನ್ನು ಸಂಧಿಸಲು ತನ್ನ ರಥದಿಂದ ಹಿಂದಕ್ಕೆ ತಿರುಗಿದಾಗ ನನ್ನ ಹೃದಯವು ನಿನ್ನ ಹತ್ತಿರದಲ್ಲಿಯೇ ಇತ್ತು. ಹಣವನ್ನು, ಬಟ್ಟೆಗಳನ್ನು, ಆಲೀವನ್ನು, ದ್ರಾಕ್ಷಿಯನ್ನು, ಕುರಿಗಳನ್ನು, ಹಸುಗಳನ್ನು ಅಥವಾ ಸೇವಕಸೇವಕಿಯರನ್ನು ತೆಗೆದುಕೊಳ್ಳುವ ಕಾಲ ಇದಲ್ಲ. 27 ಈಗ, ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ನಾಮಾನನ ರೋಗವು ಹಿಡಿದುಕೊಳ್ಳುವುದು. ನಿನಗೆ ಎಂದೆಂದಿಗೂ ಕುಷ್ಠರೋಗವಿರುವುದು!” ಎಂದು ಹೇಳಿದನು.

ಗೇಹಜಿಯು ಎಲೀಷನನ್ನು ಬಿಟ್ಟುಹೋದಾಗ, ಗೇಹಜಿಯ ಚರ್ಮವು ಮಂಜುಗಡ್ಡೆಯಂತೆ ಬಿಳುಪಾಯಿತು! ಗೇಹಜಿಯು ಕುಷ್ಠರೋಗ ಪೀಡಿತನಾದನು.

ಎಫೆಸದವರಿಗೆ 6:10-20

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ

10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International