Revised Common Lectionary (Complementary)
ರಚನೆಗಾರ: ದಾವೀದ.
61 ದೇವರೇ, ನನ್ನ ಮೊರೆಯನ್ನು ಕೇಳು.
ನನ್ನ ಪ್ರಾರ್ಥನೆಗೆ ಕಿವಿಗೊಡು.
2 ನಾನೆಲ್ಲೇ ಇದ್ದರೂ, ಎಷ್ಟೇ ಬಲಹೀನನಾಗಿದ್ದರೂ
ಸಹಾಯಕ್ಕಾಗಿ ನಿನಗೇ ಮೊರೆಯಿಡುವೆನು!
ಅತ್ಯುನ್ನತವಾದ ಆಶ್ರಯಗಿರಿಗೆ ನನ್ನನ್ನು ಹತ್ತಿಸು.
3 ನೀನೇ ನನ್ನ ಆಶ್ರಯಸ್ಥಾನ;
ಶತ್ರುಗಳಿಂದ ಕಾಪಾಡುವ ಭದ್ರವಾದ ಬುರುಜು.
4 ನಿನ್ನ ಗುಡಾರದಲ್ಲಿ ಸದಾಕಾಲ ವಾಸಿಸುವುದಕ್ಕೂ,
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವುದಕ್ಕೂ ತವಕಪಡುತ್ತಿರುವೆ.
5 ದೇವರೇ, ನನ್ನ ಹರಕೆಗಳನ್ನೆಲ್ಲಾ ನೀನು ಕೇಳಿರುವೆ.
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಬರುವ ಸ್ವಾಸ್ತ್ಯವನ್ನು ನೀನು ನನಗೆ ಕೊಟ್ಟಿರುವೆ.
6 ರಾಜನಿಗೆ ದೀರ್ಘಾಯುಷ್ಯವನ್ನು ದಯಪಾಲಿಸು.
ಅವನು ಸದಾಕಾಲ ಜೀವಿಸಲಿ!
7 ಅವನು ನಿನ್ನ ಸಾನಿಧ್ಯವನ್ನು ಪಡೆದು ಸದಾಕಾಲವೂ ರಾಜನಾಗಿರಲಿ!
ನಿನ್ನ ನಿಜಪ್ರೀತಿಯಿಂದ ಅವನನ್ನು ಸಂರಕ್ಷಿಸು.
8 ಆಗ ನಾನು ನಿನ್ನ ಹೆಸರನ್ನು ಸದಾಕಾಲ ಕೊಂಡಾಡುವೆನು.
ನನ್ನ ಹರಕೆಗಳನ್ನು ಪ್ರತಿದಿನವೂ ಸಲ್ಲಿಸುವೆನು.
15 ನಾಮಾನನು ತನ್ನ ಗುಂಪಿನೊಂದಿಗೆ ದೇವಮನುಷ್ಯನ ಹತ್ತಿರಕ್ಕೆ ಹಿಂದಿರುಗಿ ಬಂದನು. ಅವನು ಎಲೀಷನ ಮುಂದೆ ನಿಂತು, “ನೋಡಿ, ಇಸ್ರೇಲಿನಲ್ಲಿಯೇ ಹೊರತು ಭೂಮಂಡಲದ ಬೇರೆಲ್ಲಿಯೂ ದೇವರು ಇಲ್ಲವೇ ಇಲ್ಲ ಎಂಬುದು ಈಗ ತಾನೇ ನನಗೆ ತಿಳಿಯಿತು! ಈಗ ದಯಮಾಡಿ ನನ್ನ ಕಾಣಿಕೆಯನ್ನು ಸ್ವೀಕರಿಸಿ!” ಎಂದು ಹೇಳಿದನು.
16 ಆದರೆ ಎಲೀಷನು, “ನಾನು ಯೆಹೋವನ ಸೇವೆ ಮಾಡುತ್ತೇನೆ. ಯೆಹೋವನಾಣೆಯಾಗಿ ಪ್ರಮಾಣ ಮಾಡುತ್ತೇನೆ, ನಾನು ಯಾವ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದನು.
ಎಲೀಷನು ಕಾಣಿಕೆಯನ್ನು ಸ್ವೀಕರಿಸುವಂತೆ ನಾಮಾನನು ಬಹಳ ಪ್ರಯತ್ನಿಸಿದನು. ಆದರೆ ಎಲೀಷನು ನಿರಾಕರಿಸಿದನು. 17 ಆಗ ನಾಮಾನನು, “ನೀನು ಈ ಕಾಣಿಕೆಯನ್ನು ಸ್ವೀಕರಿಸದಿದ್ದರೆ, ಕೊನೆಯಪಕ್ಷ ನನಗಾಗಿ ಈ ಕಾರ್ಯವನ್ನು ಮಾಡು. ನನ್ನ ಎರಡು ಹೇಸರಕತ್ತೆಗಳ ಮೇಲಿನ ಬುಟ್ಟಿಗಳು ತುಂಬುವಷ್ಟು ಇಸ್ರೇಲಿನ ಮಣ್ಣನ್ನು ನನಗೆ ಕೊಡಿಸಬೇಕೆಂದು ಬೇಡುತ್ತೇನೆ. ಏಕೆಂದರೆ ಇತರ ದೇವರುಗಳಿಗೆ ನಾನು ಮತ್ತೆ ಎಂದೆಂದಿಗೂ ಸರ್ವಾಂಗಹೋಮವನ್ನಾಗಲಿ ಯಜ್ಞಗಳನ್ನಾಗಲಿ ಅರ್ಪಿಸುವುದಿಲ್ಲ. ನಾನು ಯೆಹೋವನಿಗೆ ಮಾತ್ರ ಯಜ್ಞಗಳನ್ನು ಅರ್ಪಿಸುತ್ತೇನೆ! 18 ಆದರೆ ಈ ವಿಷಯದಲ್ಲಿ ಯೆಹೋವನು ನನ್ನನ್ನು ಕ್ಷಮಿಸಲಿ. ನನ್ನ ಒಡೆಯನಾದ ಅರಾಮ್ಯರ ರಾಜನು ಸುಳ್ಳುದೇವರಾದ ರಿಮ್ಮೋನನನ್ನು ಪೂಜಿಸಲು ಅವನ ಆಲಯಕ್ಕೆ ಹೋಗಿ ನನ್ನ ಕೈಹಿಡಿದು ಆ ದೇವರಿಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು” ಎಂದು ಹೇಳಿದನು.
19 ಆಗ ಎಲೀಷನು, “ಸಮಾಧಾನದಿಂದ ಹೋಗು” ಎಂದನು.
ನಾಮಾನನು ಎಲೀಷನ ಬಳಿಯಿಂದ ಸ್ವಲ್ಪದೂರ ಹೋದನು.
ಅಗ್ರಿಪ್ಪನನ್ನು ಒಡಂಬಡಿಸಲು ಪೌಲನ ಪ್ರಯತ್ನ
24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.
25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ. 26 ರಾಜನಾದ ಅಗ್ರಿಪ್ಪನಿಗೆ ಈ ಸಂಗತಿಗಳು ತಿಳಿದಿವೆ. ನಾನು ಅವನೊಂದಿಗೆ ಸ್ವತಂತ್ರವಾಗಿ ಮಾತಾಡಬಲ್ಲೆನು. ಈ ಎಲ್ಲಾ ಸಂಗತಿಗಳ ಬಗ್ಗೆ ಅವನು ಕೇಳಿದ್ದಾನೆಂದು ನನಗೆ ಗೊತ್ತಿದೆ. ಯಾಕೆಂದರೆ ಎಲ್ಲಾ ಜನರು ನೋಡಬಹುದಾದ ಸ್ಥಳದಲ್ಲಿ ಈ ಸಂಗತಿಗಳು ನೆರವೇರಿದವು. 27 ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.
28 ರಾಜ ಅಗ್ರಿಪ್ಪನು ಪೌಲನಿಗೆ, “ಬಹು ಸುಲಭವಾಗಿ ನನ್ನನ್ನು ಒಪ್ಪಿಸಿ ಕ್ರೈಸ್ತನನ್ನಾಗಿ ಮಾಡಬಹುದೆಂದು ನೀನು ಯೋಚಿಸಿಕೊಂಡಿರುವಿಯಾ?” ಎಂದು ಕೇಳಿದನು.
29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International