Revised Common Lectionary (Complementary)
ನಾಮಾನನ ಸಮಸ್ಯೆ
5 ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.
2 ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. 3 ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.
7 ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.
8 ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”
9 ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.
11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!
13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.
14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.
15 ನಾಮಾನನು ತನ್ನ ಗುಂಪಿನೊಂದಿಗೆ ದೇವಮನುಷ್ಯನ ಹತ್ತಿರಕ್ಕೆ ಹಿಂದಿರುಗಿ ಬಂದನು. ಅವನು ಎಲೀಷನ ಮುಂದೆ ನಿಂತು, “ನೋಡಿ, ಇಸ್ರೇಲಿನಲ್ಲಿಯೇ ಹೊರತು ಭೂಮಂಡಲದ ಬೇರೆಲ್ಲಿಯೂ ದೇವರು ಇಲ್ಲವೇ ಇಲ್ಲ ಎಂಬುದು ಈಗ ತಾನೇ ನನಗೆ ತಿಳಿಯಿತು! ಈಗ ದಯಮಾಡಿ ನನ್ನ ಕಾಣಿಕೆಯನ್ನು ಸ್ವೀಕರಿಸಿ!” ಎಂದು ಹೇಳಿದನು.
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
8 ಯೇಸು ಕ್ರಿಸ್ತನನ್ನು ನೆನಪು ಮಾಡಿಕೊ. ಆತನು ದಾವೀದನ ವಂಶದವನು. ಯೇಸು ಸತ್ತನಂತರ ಜೀವಂತವಾಗಿ ಮೇಲೆದ್ದು ಬಂದನು. ಈ ಸುವಾರ್ತೆಯನ್ನೇ ನಾನು ಜನರಿಗೆ ತಿಳಿಸುತ್ತೇನೆ. 9 ಈ ಕಾರಣದಿಂದಲೇ ಸಂಕಟವನ್ನು ಅನುಭವಿಸುತ್ತಿದ್ದೇನೆ. ದುಷ್ಕರ್ಮಿಯಂತೆ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇನೆ. ಆದರೆ ದೇವರ ಉಪದೇಶಕ್ಕೆ ಬಂಧನವಿಲ್ಲ. 10 ಆದ್ದರಿಂದ ನಾನು ತಾಳ್ಮೆಯಿಂದಲೇ ಈ ತೊಂದರೆಗಳನ್ನು ಅಂಗೀಕರಿಸಿದ್ದೇನೆ. ಏಕೆಂದರೆ ದೇವರು ಆರಿಸಿರುವ ಜನರೆಲ್ಲರಿಗೂ ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಆ ಜನರು ಕ್ರಿಸ್ತ ಯೇಸುವಿನಲ್ಲಿ ರಕ್ಷಣೆ ಪಡೆಯಲೆಂದು ನಾನು ಈ ತೊಂದರೆಗಳನ್ನೆಲ್ಲ ಸ್ವೀಕರಿಸಿಕೊಂಡಿದ್ದೇನೆ. ಈ ರಕ್ಷಣೆಯೊಂದಿಗೆ ನಿತ್ಯಪ್ರಭಾವವು ದೊರೆಯುತ್ತದೆ.
11 ಈ ಉಪದೇಶವು ಸತ್ಯವಾದದ್ದು:
ನಾವು ಆತನೊಂದಿಗೆ (ಯೇಸು) ಸತ್ತಿದ್ದರೆ, ಆತನೊಡನೆ ಜೀವಿಸುವೆವು.
12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತನೊಡನೆ ಆಳುವೆವು.
ನಾವು ಆತನನ್ನು ಸ್ವೀಕರಿಸಿಕೊಳ್ಳದಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ.
13 ನಾವು ನಂಬಿಗಸ್ತರಾಗಿಲ್ಲದಿದ್ದರೂ, ಆತನು ಇನ್ನೂ ನಂಬಿಗಸ್ತನಾಗಿರುವನು;
ಏಕೆಂದರೆ ಆತನು ತನ್ನ ಸ್ವಭಾವಕ್ಕೆ ವಿರುದ್ಧನಾಗಲಾರನು.
ಯೋಗ್ಯನಾದ ಕೆಲಸಗಾರನು
14 ಜನರಿಗೆ ಈ ಸಂಗತಿಗಳನ್ನು ತಿಳಿಸುತ್ತಲೇ ಇರು. ಪದಗಳ ಬಗ್ಗೆ ವಾಗ್ವಾದ ಮಾಡಬಾರದೆಂದು ಅವರಿಗೆ ದೇವರ ಸನ್ನಿಧಿಯಲ್ಲಿ ಎಚ್ಚರಿಕೆ ನೀಡು. ವಾಗ್ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ. ವಾಗ್ವಾದವನ್ನು ಕೇಳುವ ಜನರು ಅದರಿಂದ ನಾಶವಾಗುತ್ತಾರೆ. 15 ದೇವರ ದೃಷ್ಟಿಯಲ್ಲಿ ಯೋಗ್ಯ ವ್ಯಕ್ತಿಯಾಗಲು ನಿನ್ನಿಂದಾದಷ್ಟು ಪ್ರಯಾಸಪಡು ಮತ್ತು ನಿನ್ನನ್ನೇ ಒಪ್ಪಿಸಿಕೊಡು. ತನ್ನ ಕೆಲಸದಲ್ಲಿ ನಾಚಿಕೆಪಡದಿರುವ ಕೆಲಸಗಾರನಾಗು, ಅಂದರೆ ಸತ್ಯೋಪದೇಶವನ್ನು ಯೋಗ್ಯವಾದ ರೀತಿಯಲ್ಲಿ ತಿಳಿಸುವವನಾಗು.
ಕೃತಜ್ಞತೆಯುಳ್ಳವರಾಗಿರಿ
11 ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು. 12 ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು. 13 ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು.
14 ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು.
ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು. 15 ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು. 16 ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.) 17 ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ? 18 ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು. 19 ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು.
Kannada Holy Bible: Easy-to-Read Version. All rights reserved. © 1997 Bible League International