Revised Common Lectionary (Complementary)
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
ಬೂಷ್ಟು ಮನೆಯಲ್ಲಿದ್ದರೆ ಅನುಸರಿಸಬೇಕಾದ ನಿಯಮಗಳು
33 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ; 34 “ನಾನು ನಿಮ್ಮ ಜನರಿಗೆ ಕಾನಾನ್ ದೇಶವನ್ನು ಕೊಡುತ್ತಿದ್ದೇನೆ. ನಿಮ್ಮ ಜನರು ಆ ದೇಶದಲ್ಲಿ ಪ್ರವೇಶಿಸಿ ನೆಲೆಸುವರು. ಆಗ ಯಾರ ಮನೆಯಲ್ಲಾದರೂ ಬೂಷ್ಟು ಉಂಟಾದರೆ, 35 ಆ ಮನೆಯ ಯಾಜಮಾನನು ಬಂದು, ‘ನನ್ನ ಮನೆಯಲ್ಲಿ ಬೂಷ್ಟು ಬಂದಿದೆ’ ಎಂದು ಯಾಜಕನಿಗೆ ಹೇಳಬೇಕು.
36 “ಆಗ ಯಾಜಕನು ಬೂಷ್ಟನ್ನು ನೋಡಲು ಮನೆಯ ಒಳಗೆ ಹೋಗುವುದಕ್ಕಿಂತ ಮೊದಲು ಆ ಮನೆಯಿಂದ ಪ್ರತಿಯೊಂದು ವಸ್ತುವನ್ನು ಹೊರತೆಗೆಯಲು ಜನರಿಗೆ ಆಜ್ಞಾಪಿಸಬೇಕು. ಆಗ ಯಾಜಕನು ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ಅಶುದ್ಧವೆಂದು ಹೇಳಬೇಕಾಗಿರುವುದಿಲ್ಲ. ಜನರು ಮನೆಯಿಂದ ಪ್ರತಿಯೊಂದು ವಸ್ತುವನ್ನು ಹೊರಗೆ ತೆಗೆದ ನಂತರ ಯಾಜಕನು ಮನೆಯೊಳಗೆ ಹೋಗುವನು. 37 ಯಾಜಕನು ಬೂಷ್ಟನ್ನು ನೋಡುವನು. ಗೋಡೆಗಳಲ್ಲಿರುವ ಬೂಷ್ಟಿನಲ್ಲಿ ರಂಧ್ರಗಳಿದ್ದು ಅದು ಹಸಿರು ಅಥವಾ ಕೆಂಪು ಬಣ್ಣದ್ದಾಗಿದ್ದರೆ ಮತ್ತು ಬೂಷ್ಟು ಗೋಡೆಗಿಂತ ತಗ್ಗಾಗಿದ್ದರೆ, 38 ಆಗ ಯಾಜಕನು ಹೊರಗೆ ಹೋಗಿ ಮನೆಗೆ ಏಳು ದಿನಗಳವರೆಗೆ ಬೀಗ ಹಾಕಿಸಬೇಕು.
39 “ಏಳನೆಯ ದಿನದಲ್ಲಿ ಯಾಜಕನು ಹಿಂತಿರುಗಿ ಬಂದು ಮನೆಯನ್ನು ಪರೀಕ್ಷಿಸಬೇಕು. ಬೂಷ್ಟು ಮನೆಯ ಗೋಡೆಗಳಲ್ಲಿ ಹರಡಿದ್ದರೆ, 40 ಆಗ ಯಾಜಕನು ಬೂಷ್ಟು ಇರುವ ಕಲ್ಲುಗಳನ್ನು ಒಡೆದುಹಾಕಿ ಬಿಸಾಡಬೇಕೆಂದು ಆಜ್ಞಾಪಿಸಬೇಕು. ಅವರು ಆ ಕಲ್ಲುಗಳನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳದಲ್ಲಿ ಹಾಕಬೇಕು. 41 ತರುವಾಯ ಯಾಜಕನು ಮನೆಯ ಒಳಗಿನ ಗೋಡೆಯನ್ನೆಲ್ಲಾ ಕೆರೆಯಿಸಬೇಕು. ಜನರು ಕೆರೆದುಹಾಕುವ ಮಣ್ಣನ್ನು ಪಟ್ಟಣದ ಹೊರಗೆ ಎಸೆದುಬಿಡಬೇಕು. ಅವರು ಅದನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳದಲ್ಲಿ ಹಾಕಬೇಕು. 42 ಬಳಿಕ ಆ ವ್ಯಕ್ತಿಯು ಗೋಡೆಗಳಲ್ಲಿ ಹೊಸ ಕಲ್ಲುಗಳನ್ನು ಇಡಿಸಿ ಹೊಸ ಮಡ್ಡಿ ಮಾಡಿಸಬೇಕು.
43 “ಒಂದುವೇಳೆ ಒಬ್ಬನು ಹಳೆಯ ಕಲ್ಲುಗಳನ್ನು ಮತ್ತು ಮಣ್ಣನ್ನು ತೆಗೆಸಿ ಹೊಸ ಕಲ್ಲುಗಳನ್ನು, ಮಣ್ಣನ್ನು ಮತ್ತು ಹೊಸ ಮಡ್ಡಿಯನ್ನು ಹಾಕಿಸಿದ್ದರೂ ಬೂಷ್ಟು ಮತ್ತೆ ಆ ಮನೆಯಲ್ಲಿ ಕಾಣಿಸಿಕೊಂಡರೆ, 44 ಯಾಜಕನು ಬಂದು ಆ ಮನೆಯನ್ನು ಪರೀಕ್ಷಿಸಬೇಕು. ರೋಗದ ಗುರುತು ಮನೆಯಲ್ಲಿ ಹರಡಿದ್ದರೆ, ಆಗ ಅದು ಬಹುಬೇಗನೆ ಇತರ ಸ್ಥಳಗಳಿಗೆ ಹರಡುವ ರೋಗವಾಗಿದೆ. ಆದ್ದರಿಂದ ಆ ಮನೆಯು ಅಶುದ್ಧವಾಗಿದೆ. 45 ಆ ವ್ಯಕ್ತಿಯು ಆ ಮನೆಯನ್ನು ಕೆಡವಿಹಾಕಿಸಬೇಕು. ಅವರು ಅದರ ಎಲ್ಲಾ ಕಲ್ಲುಗಳನ್ನು, ಮಣ್ಣನ್ನು ಮತ್ತು ಮರದ ತುಂಡುಗಳನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 46 ಮುಚ್ಚಲ್ಪಟ್ಟಿರುವ ಆ ಮನೆಯೊಳಗೆ ಯಾವನಾದರೂ ಹೋದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 47 ಯಾವನಾದರೂ ಆ ಮನೆಯಲ್ಲಿ ಆಹಾರ ತಿಂದರೆ ಅಥವಾ ಅಲ್ಲಿ ಮಲಗಿಕೊಂಡರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
48 “ಒಂದು ಮನೆಯಲ್ಲಿ ಹೊಸ ಕಲ್ಲುಗಳನ್ನು ಮತ್ತು ಮಣ್ಣನ್ನು ಹಾಕಿಸಿದ ನಂತರ ಯಾಜಕನು ಅದನ್ನು ಪರೀಕ್ಷಿಸಬೇಕು. ಬೂಷ್ಟು ಮನೆಯಲ್ಲಿ ಹರಡದಿದ್ದರೆ, ಯಾಜಕನು ಮನೆಯನ್ನು ಶುದ್ಧವೆಂದು ಪ್ರಕಟಿಸುವನು.
49 “ಬಳಿಕ ಮನೆಯನ್ನು ಶುದ್ಧೀಕರಿಸುವುದಕ್ಕೆ ಅವನು ಎರಡು ಪಕ್ಷಿಗಳನ್ನು ದೇವದಾರು ಮರದ ಒಂದು ತುಂಡನ್ನು, ಕೆಂಪು ಬಟ್ಟೆಯನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ಬರಬೇಕು. 50 ಯಾಜಕನು ಒಂದು ಪಕ್ಷಿಯನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಬಟ್ಟಲಲ್ಲಿ ವಧಿಸಬೇಕು. 51 ಬಳಿಕ ಯಾಜಕನು ದೇವದಾರಿನ ಕಟ್ಟಿಗೆಯನ್ನು, ಹಿಸ್ಸೋಪನ್ನು, ಕೆಂಪು ಬಟ್ಟೆಯನ್ನು ಮತ್ತು ಸಜೀವವಾದ ಪಕ್ಷಿಯನ್ನು ತೆಗೆದುಕೊಳ್ಳುವನು. ಯಾಜಕನು ಹರಿಯುವ ನೀರಿನ ಮೇಲೆ ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಅವುಗಳನ್ನು ಅದ್ದುವನು. ಬಳಿಕ ಯಾಜಕನು ರಕ್ತವನ್ನು ಆ ಮನೆಯ ಮೇಲೆ ಏಳು ಸಲ ಚಿಮಿಕಿಸುವನು. 52 ಮನೆಯನ್ನು ಶುದ್ಧೀಕರಿಸುವುದಕ್ಕೆ ಯಾಜಕನು ಅವುಗಳನ್ನು ಆ ರೀತಿಯಲ್ಲಿ ಉಪಯೋಗಿಸುವನು. 53 ಯಾಜಕನು ಪಟ್ಟಣದ ಹೊರಗಿರುವ ಬಯಲಿಗೆ ಹೋಗಿ, ಸಜೀವವಾದ ಪಕ್ಷಿಯನ್ನು ಸ್ವತಂತ್ರವಾಗಿ ಬಿಟ್ಟುಬಿಡಬೇಕು. ಹೀಗೆ ಯಾಜಕನು ಆ ಮನೆಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಆ ಮನೆಯು ಶುದ್ಧವಾಗುವುದು.”
13 ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ. 14 ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮನ ಸಹಾಯದಿಂದ ಸಂರಕ್ಷಿಸು. ಆತನು ನಮ್ಮೊಳಗೆ ವಾಸ ಮಾಡುತ್ತಿದ್ದಾನೆ.
15 ಏಷ್ಯಾ ದೇಶದಲ್ಲಿರುವವರೆಲ್ಲರೂ ನನ್ನನ್ನು ತೊರೆದಿರುವರೆಂಬುದು ನಿನಗೆ ತಿಳಿದಿದೆ. ಪುಗೇಲನೂ, ಹೆರ್ಮೊಗೇನನೂ ನನ್ನನ್ನು ತೊರೆದಿದ್ದಾರೆ. 16 ಪ್ರಭುವು ಒನೇಸಿಫ್ರೋರನ ಕುಟುಂಬಕ್ಕೆ ಕರುಣೆಯನ್ನು ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವನು ಅನೇಕ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಾನೆ. ನಾನು ಸೆರೆಮನೆಯಲ್ಲಿದ್ದರೂ ಅವನು ನಾಚಿಕೆಪಟ್ಟುಕೊಳ್ಳಲಿಲ್ಲ. 17 ಅವನು ರೋಮಿಗೆ ಬಂದಾಗ, ಬಹಳ ಹುಡುಕಾಡಿ ನನ್ನನ್ನು ಸಂಧಿಸಿದನು. 18 ಆ ದಿನದಂದು ಒನೇಸಿಫೋರನು ಪ್ರಭುವಿನಿಂದ ಕರುಣೆಯನ್ನು ಪಡೆಯಲಿ ಎಂದು ನಾನು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇನೆ. ಎಫೆಸದಲ್ಲಿ ಅವನು ನನಗೆ ಎಷ್ಟು ವಿಧದಲ್ಲಿ ಸಹಾಯ ಮಾಡಿದನೆಂಬುದು ನಿನಗೆ ತಿಳಿದಿದೆ.
Kannada Holy Bible: Easy-to-Read Version. All rights reserved. © 1997 Bible League International