Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 3

ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ.
    ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ.
ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.

ಆದರೆ ಯೆಹೋವನೇ, ನೀನೇ ನನ್ನ ಗುರಾಣಿ.
    ನೀನೇ ನನ್ನ ಗೌರವಕ್ಕೆ ಆಧಾರ.
    ನನ್ನನ್ನು ಜಯವೀರನನ್ನಾಗಿ ಮಾಡು.

ನಾನು ಯೆಹೋವನಿಗೆ ಪ್ರಾರ್ಥಿಸಲು,
    ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.

ಯೆಹೋವನು ನನ್ನನ್ನು ಕಾಪಾಡುವುದರಿಂದ
    ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು.
ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ
    ನನಗೆ ಭಯವಿಲ್ಲ.

ಯೆಹೋವನೇ, ಎದ್ದೇಳು!
    ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು!
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ
    ಅವರ ಹಲ್ಲುಗಳು ಉದುರಿಹೋಗುತ್ತವೆ.

ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು.
    ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.

ಹಬಕ್ಕೂಕ 1:5-17

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ಉತ್ತರಿಸುತ್ತಾ, “ಇತರ ದೇಶಗಳನ್ನು ನೋಡು, ಅವರನ್ನು ಗಮನಿಸು. ನೀನು ಆಶ್ಚರ್ಯಪಡುವೆ. ನೀನು ನಿನ್ನ ಜೀವಮಾನದಲ್ಲಿಯೇ ಅಚ್ಚರಿಪಡುವಂಥ ವಿಷಯವನ್ನು ನಾನು ನಡಿಸುತ್ತೇನೆ. ನೀನು ಅದನ್ನು ನೋಡಿ ನಂಬುವೆ. ನಿನಗೆ ಅದರ ವಿಷಯವಾಗಿ ತಿಳಿಸಲ್ಪಟ್ಟರೂ ನೀನು ನಂಬುವದಿಲ್ಲ. ನಾನು ಬಾಬಿಲೋನಿನವರನ್ನು ಬಲಾಢ್ಯ ಜನಾಂಗವಾಗಿ ಮಾಡುವೆನು. ಅವರು ಬಲಶಾಲಿಗಳೂ ನಿರ್ದಯಿಗಳೂ ಆಗಿದ್ದಾರೆ. ಅವರು ಲೋಕದಲ್ಲೆಲ್ಲಾ ಸಂಚರಿಸುವರು. ತಮ್ಮದಲ್ಲದ ಮನೆಗಳನ್ನು ಮತ್ತು ನಗರಗಳನ್ನು ತಮ್ಮ ವಶಮಾಡಿಕೊಳ್ಳುವರು. ಬಾಬಿಲೋನಿನ ಜನರು ಇತರರಲ್ಲಿ ಭಯ ಹುಟ್ಟಿಸುವರು. ಅವರು ತಮ್ಮ ಇಷ್ಟಬಂದ ಹಾಗೆ ಮಾಡುವರು; ಇಷ್ಟಬಂದ ಕಡೆಗೆ ಹೋಗುವರು. ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿವೆ; ಸೂರ್ಯಸ್ತಮಾನ ಕಾಲದಲ್ಲಿ ತೋಳಗಳಿಗಿಂತ ಭಯಂಕರವಾಗಿವೆ. ಅವರ ರಾಹುತರು ಬಹುದೂರ ದೇಶದಿಂದ ಬಂದರು. ಹಸಿದ ಗಿಡುಗ ಹೇಗೆ ಆಕಾಶದಿಂದ ನೆಲದ ಮೇಲಿರುವ ಆಹಾರದ ಮೇಲೆ ಬೀಳುತ್ತದೋ ಅದೇ ರೀತಿಯಲ್ಲಿ ಅವರ ರಾಹುತರು ವೈರಿಗಳ ಮೇಲೆ ಬೀಳುವರು. ಅವರು ಬಯಸುವುದು ಯುದ್ಧವೊಂದನ್ನೇ. ಅವರ ಸೈನ್ಯವು ಮರುಭೂಮಿಯ ಮೇಲೆ ಬೀಸುವ ಗಾಳಿಯ ತರಹ ವೇಗವಾಗಿ ಸಂಚರಿಸುವದು. ಮತ್ತು ಬಾಬಿಲೋನಿನ ಸೈನಿಕರು ಮರಳಿನಷ್ಟು ಅಸಂಖ್ಯಾತ ಜನರನ್ನು ಸೆರೆಹಿಡಿಯುತ್ತಾರೆ.

10 “ಇತರ ಜನಾಂಗದ ಅರಸರನ್ನು ಬಾಬಿಲೋನಿನ ಸೈನಿಕರು ಗೇಲಿ ಮಾಡುತ್ತಾರೆ. ಪರದೇಶದ ಅರಸರು ಅವರಿಗೆ ಹಾಸ್ಯಾಸ್ಪದವಾಗಿರುತ್ತಾರೆ. ಕೋಟೆಕೊತ್ತಲುಗಳಿರುವ ನಗರವನ್ನು ನೋಡಿ ಅವರು ನಗಾಡುವರು. ಆ ಸೈನಿಕರು ಕೋಟೆಯ ಗೋಡೆಯ ತನಕ ಮಣ್ಣಿನದಿಬ್ಬವನ್ನೇರಿಸಿ, ಸುಲಭವಾಗಿ ಪಟ್ಟಣಗಳನ್ನು ವಶಮಾಡಿಕೊಳ್ಳುವರು. 11 ಆ ಬಳಿಕ ಅವರು ಗಾಳಿಯಂತೆ ಅಲ್ಲಿಂದ ಬೇರೆ ಸ್ಥಳಗಳ ಮೇಲೆ ದಾಳಿಮಾಡಲು ಹೊರಟುಹೋಗುವರು. ಬಾಬಿಲೋನಿನವರು ಆರಾಧಿಸುವ ಒಂದೇ ವಿಷಯ ಯಾವದೆಂದರೆ ಅವರ ಸ್ವಂತ ಶಕ್ತಿಯನ್ನೇ.”

ಹಬಕ್ಕೂಕನ ಎರಡನೇ ದೂರು

12 ಆಗ ಹಬಕ್ಕೂಕನು ಹೇಳಿದ್ದೇನೆಂದರೆ,
ಯೆಹೋವನೇ, ನೀನು ನಿತ್ಯಕಾಲಕ್ಕೂ ಜೀವಿಸುವ ದೇವರು.
    ನೀನು ಎಂದಿಗೂ ಸಾಯದ ನನ್ನ ಪರಿಶುದ್ಧ ದೇವರು.
ನೀನು ಯೋಚಿಸುವದನ್ನು ನೆರವೇರಿಸಲು ಬಾಬಿಲೋನಿನವರನ್ನು ಸೃಷ್ಟಿಸಿರುವೆ.
    ನಮ್ಮ ಬಂಡೆಯಾದ ನೀನು ಯೆಹೂದದ ಜನರನ್ನು ಶಿಕ್ಷಿಸುವುದಕ್ಕಾಗಿಯೇ ಅವರನ್ನು ಸೃಷ್ಟಿಸಿರುವೆ.
13 ಕೆಡುಕನ್ನು ದೃಷ್ಟಿಸಲಾರದಷ್ಟು ನಿನ್ನ ಕಣ್ಣುಗಳು ಶುದ್ಧವಾಗಿವೆ.
    ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ.
ಹೀಗಿರಲು ಆ ಕೆಡುಕರು ಜಯಗಳಿಸುವದನ್ನು ನೀನು ಹೇಗೆ ವೀಕ್ಷಿಸಬಲ್ಲೆ?
    ದುಷ್ಟರು ಒಳ್ಳೆಯವರನ್ನು ಸೋಲಿಸಿದಾಗ ನೀನು ನಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಾರದೇಕೆ?
    ಒಳ್ಳೆಯ ಜನರನ್ನು ಕೆಟ್ಟ ಜನರು ಸೋಲಿಸುವುದನ್ನು ನೀನು ಹೇಗೆ ನೋಡುವೆ?

14 ಸಮುದ್ರದಲ್ಲಿರುವ ಮೀನುಗಳಂತೆ ನೀನು ಜನರನ್ನು ಸೃಷ್ಟಿಸಿರುವೆ.
    ಅವರು ಒಬ್ಬ ನಾಯಕನಿಂದ ಸಮುದ್ರಪ್ರಾಣಿಗಳಂತಿದ್ದಾರೆ,
15 ಅವೆಲ್ಲವನ್ನು ಗಾಳ, ಬಲೆಗಳಿಂದ ವೈರಿಯು ಹಿಡಿಯುತ್ತಾನೆ.
    ಬಲೆಯಲ್ಲಿ ಅವುಗಳನ್ನು ವೈರಿಯು ಹಿಡಿದು ಎಳೆಯುವನು.
    ತಾನು ಹಿಡಿದನೆಂದು ವೈರಿಯು ಹರ್ಷಿಸುವನು.
16 ಅವನ ಬಲೆಗಳು ಅವನು ಧನಿಕನಂತೆ ಜೀವಿಸಲು ಸಹಾಯ ಮಾಡುವವು.
    ಅವನು ಒಳ್ಳೆಯ ಆಹಾರವನ್ನು ಉಣ್ಣುವನು.
ಅದಕ್ಕೆ ವೈರಿಯು ತನ್ನ ಬಲೆಯನ್ನು ಆರಾಧಿಸುವನು.
    ಅವನು ಯಜ್ಞವನ್ನರ್ಪಿಸಿ ಧೂಪ ಹಾಕುವನು.
    ಬಲೆಯನ್ನು ಗೌರವಿಸುವನು.
17 ಅವನು ತನ್ನ ಬಲೆಯಿಂದ ಐಶ್ವರ್ಯವನ್ನು ಹೊಂದುತ್ತಾ ಮುಂದರಿಯುವನೋ?
    ನಿರ್ದಯೆಯಿಂದ ಜನರನ್ನು ನಾಶಮಾಡುತ್ತಲೇ ಇರುವನೋ?

ಯಾಕೋಬನು 1:2-11

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

ನಿಜ ಶ್ರೀಮಂತಿಕೆ

ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International