Revised Common Lectionary (Complementary)
ಯೆಹೋವನಿಗೆ ಹಬಕ್ಕೂಕನ ದೂರು
1 ಪ್ರವಾದಿಯಾದ ಹಬಕ್ಕೂಕನಿಗೆ ಕೊಡಲ್ಪಟ್ಟ ಸಂದೇಶ.
2 ಯೆಹೋವನೇ, ನಾನು ನಿನ್ನಿಂದ ಸಹಾಯವನ್ನು ಕೇಳುತ್ತಲೇ ಇದ್ದೇನೆ. ನನ್ನ ಮೊರೆಯನ್ನು ಯಾವಾಗ ಕೇಳುವೆ? ನಾನು ಹಿಂಸೆಯ ವಿಷಯವಾಗಿ ನಿನ್ನನ್ನು ಕೂಗಿದರೂ ನೀನು ಏನೂ ಮಾಡಲಿಲ್ಲ. 3 ಜನರು ವಸ್ತುಗಳನ್ನು ಕದ್ದುಕೊಂಡು ಇತರರನ್ನು ಗಾಯಗೊಳಿಸುತ್ತಿದ್ದಾರೆ. ಜನರು ಜಗಳ ಮಾಡುತ್ತಾ ಕಾದಾಡುತ್ತಿದ್ದಾರೆ. ಇಂಥಾ ಭಯಂಕರ ಸಂಗತಿಗಳನ್ನು ನೋಡುವಂತೆ ಯಾಕೆ ಮಾಡುವೆ. 4 ಕಾನೂನು ಬಲಹೀನವಾಗಿದೆ. ಅದು ಸರಿಯಾದ ನ್ಯಾಯಕೊಡುವದಿಲ್ಲ. ದುಷ್ಚರು ಶಿಷ್ಟರ ಮೇಲೆ ವ್ಯಾಜ್ಯವಾಡಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಕಾನೂನು ನ್ಯಾಯವಾಗಿಯೇ ಇಲ್ಲ. ನ್ಯಾಯಕ್ಕೆ ಜಯವಿಲ್ಲ.
2 “ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”
ಹಬಕ್ಕೂಕನಿಗೆ ದೇವರ ಉತ್ತರ
2 ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. 3 ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. 4 ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ದೇವರ ಚಿತ್ತಾನುಸಾರವಾಗಿ ನಾನು ಅಪೊಸ್ತಲನಾದೆನು. ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನವನ್ನು ಜನರಿಗೆ ತಿಳಿಯಪಡಿಸಲು ದೇವರು ನಮ್ಮನ್ನು ಕಳುಹಿಸಿದನು.
2 ತಿಮೊಥೆಯನೇ, ನೀನು ನನಗೆ ಪ್ರಿಯ ಮಗನಂತಿರುವೆ.
ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಲಭಿಸಲಿ.
ಕೃತಜ್ಞತಾಸ್ತುತಿ ಮತ್ತು ಪ್ರೋತ್ಸಾಹ
3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ತಪ್ಪದೆ ನಿನ್ನನ್ನು ಜ್ಞಾಪಿಸಿಕೊಂಡು ನಿನ್ನ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇನೆ. ನನ್ನ ಪೂರ್ವಿಕರು ಸೇವೆ ಸಲ್ಲಿಸಿದ್ದು ಆತನಿಗೇ. ಯೋಗ್ಯವಾದದ್ದೆಂದು ನನಗೆ ತಿಳಿದಿರುವುದನ್ನೇ ಮಾಡುತ್ತಾ ಆತನ ಸೇವೆ ಮಾಡುತ್ತಿದ್ದೇನೆ. 4 ನೀನು ನನಗಾಗಿ ಕಣ್ಣೀರು ಸುರಿಸಿದ್ದು ನನ್ನ ನೆನಪಿನಲ್ಲಿದೆ. ನಿನ್ನನ್ನು ನೋಡಬೇಕೆಂದು ಬಹಳ ಆಸೆಯಾಗಿದೆ. ನಿನ್ನನ್ನು ನೋಡಿದಾಗ ನನ್ನಲ್ಲಿ ಆನಂದವು ತುಂಬಿಹೋಗುವುದು. 5 ನಿನ್ನ ನಿಜವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ಆ ವಿಧವಾದ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲೂ ನಿನ್ನ ತಾಯಿಯಾದ ಯೂನಿಕೆಯಲ್ಲೂ ಇತ್ತು. ಈಗ ಅದೇ ನಂಬಿಕೆಯು ನಿನ್ನಲ್ಲಿಯೂ ಇದೆಯೆಂದು ನನಗೆ ತಿಳಿದಿದೆ. 6 ದೇವರು ನಿನಗೆ ದಯಪಾಲಿಸಿರುವ ವರವನ್ನು ನೀನು ನೆನಪು ಮಾಡಿಕೊಳ್ಳಬೇಕೆಂದು ನಾನು ಅಪೇಕ್ಷಿಸುವುದು ಈ ಕಾರಣದಿಂದಲೇ. ನಾನು ನನ್ನ ಕೈಗಳನ್ನು ನಿನ್ನ ಮೇಲಿಟ್ಟಾಗ ಆತನು ನಿನಗೆ ಆ ವರವನ್ನು ದಯಪಾಲಿಸಿದನು. ಬೆಂಕಿಯ ಕಿಡಿಯು ಪ್ರಜ್ವಲವಾಗಿ ದಟ್ಟವಾದ ಬೆಂಕಿಯಾಗುವಂತೆ ನಿನ್ನ ವರವನ್ನು ಉಪಯೋಗಿಸುತ್ತಾ ಅದನ್ನು ಅಧಿಕಗೊಳಿಸಬೇಕೆಂಬುದು ನನ್ನ ಅಪೇಕ್ಷೆ. 7 ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಿಂದ ಮತ್ತು ಸ್ವಶಿಕ್ಷಣದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು.
8 ನಮ್ಮ ಪ್ರಭುವಾದ ಯೇಸುವನ್ನು ಕುರಿತು ಜನರಿಗೆ ತಿಳಿಸುವುದಕ್ಕಾಗಲಿ ಪ್ರಭುವಿಗಾಗಿ ಸೆರೆಯಲ್ಲಿರುವ ನನ್ನ ವಿಷಯದಲ್ಲಾಗಲಿ ನಾಚಿಕೆಪಟ್ಟುಕೊಳ್ಳಬೇಡ. ಅದಕ್ಕೆ ಬದಲಾಗಿ ಸುವಾರ್ತೆಗೋಸ್ಕರ ನನ್ನೊಡನೆ ಸಂಕಟವನ್ನು ಅನುಭವಿಸು. ಅದಕ್ಕೆ ಬೇಕಾದ ಶಕ್ತಿಯನ್ನು ದೇವರೇ ನಮಗೆ ದಯಪಾಲಿಸುತ್ತಾನೆ.
9 ಆತನು ನಮ್ಮನ್ನು ರಕ್ಷಿಸಿ, ತನ್ನ ಪವಿತ್ರ ಜನರಾಗಿರುವುದಕ್ಕಾಗಿ ನಮ್ಮನ್ನು ಕರೆದನು. ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಹೀಗಾಯಿತು ಎಂದಲ್ಲ. ಆತನು ತನ್ನ ಸಂಕಲ್ಪಕ್ಕನುಸಾರವಾಗಿ ಮತ್ತು ಕೃಪೆಗನುಸಾರವಾಗಿ ನಮ್ಮನ್ನು ರಕ್ಷಿಸಿ ತನ್ನವರನ್ನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕ್ರಿಸ್ತ ಯೇಸುವಿನ ಮೂಲಕ ನಮಗೆ ದೊರೆಯಿತು. 10 ಆ ಕೃಪೆಯನ್ನು ಈವರೆಗೆ ನಮಗೆ ತೋರ್ಪಡಿಸಿರಲಿಲ್ಲ. ನಮ್ಮ ರಕ್ಷಕನಾದ ಕ್ರಿಸ್ತ ಯೇಸು ಪ್ರತ್ಯಕ್ಷನಾದಾಗ ಅದನ್ನು ನಮಗೆ ತೋರಿಸಲಾಯಿತು. ಯೇಸು ಮರಣವನ್ನು ನಾಶಪಡಿಸಿ, ನಮಗೆ ಜೀವಮಾರ್ಗವನ್ನು ಸುವಾರ್ತೆಯ ಮೂಲಕ ತೋರಿದನು.
11 ಆ ಸುವಾರ್ತೆಗೋಸ್ಕರ ನನ್ನನ್ನು ಪ್ರಚಾರಕನನ್ನಾಗಿಯೂ ಅಪೊಸ್ತಲನನ್ನಾಗಿಯೂ ಉಪದೇಶಕನನ್ನಾಗಿಯೂ ಆರಿಸಿಕೊಳ್ಳಲಾಯಿತು. 12 ಸುವಾರ್ತೆಯನ್ನು ತಿಳಿಸಿದ್ದರಿಂದಲೇ ನಾನೀಗ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನವು ಬರುವತನಕ ಸಂರಕ್ಷಿಸಲು ಆತನು ಸಮರ್ಥನೆಂಬುದನ್ನು ಖಚಿತವಾಗಿ ಬಲ್ಲೆನು.
13 ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ. 14 ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮನ ಸಹಾಯದಿಂದ ಸಂರಕ್ಷಿಸು. ಆತನು ನಮ್ಮೊಳಗೆ ವಾಸ ಮಾಡುತ್ತಿದ್ದಾನೆ.
ನಿಮ್ಮ ನಂಬಿಕೆ ಎಷ್ಟು ದೊಡ್ಡದು?
5 ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.
6 ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಈ ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ.
ಒಳ್ಳೆಯ ಸೇವಕರಾಗಿರಿ
7 “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ? 8 ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ. 9 ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ. 10 ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.”
Kannada Holy Bible: Easy-to-Read Version. All rights reserved. © 1997 Bible League International