Revised Common Lectionary (Complementary)
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
ಅರಾಮ್ಯರೊಂದಿಗೆ ವೈಮನಸ್ಸು
7 ಆಹಾಜನು ಯೋಥಾಮನ ಮಗನು. ಯೋಥಾಮನು ಉಜ್ಜೀಯನ ಮಗನು. ರೆಚೀನ್ ಎಂಬವನು ಅರಾಮ್ಯರ ಅರಸನಾಗಿದ್ದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ಅರಸನಾಗಿದ್ದನು. ಆಗ ಆಹಾಜನು ಯೆಹೂದದ ಅರಸನಾಗಿದ್ದನು. ರೆಚೀನ್ ಮತ್ತು ಪೆಕಹ ಇವರಿಬ್ಬರೂ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ಆದರೆ ಆ ನಗರವನ್ನು ಸೋಲಿಸಲು ಅವರಿಂದಾಗಲಿಲ್ಲ.
2 ದಾವೀದನ ವಂಶದವರಿಗೆ ಒಂದು ಸಂದೇಶವು ಕಳುಹಿಸಲ್ಪಟ್ಟಿತು, “ಅರಾಮ್ಯರ ಸೈನ್ಯ ಮತ್ತು ಎಫ್ರಾಯೀಮ್ಯರ ಸೈನ್ಯ (ಇಸ್ರೇಲ್) ಒಟ್ಟಾಗಿ ಶಿಬಿರ ಹೂಡಿದ್ದಾರೆ” ಎಂಬುದೇ ಆ ಸಂದೇಶ. ಅರಸನಾದ ಆಹಾಜನು ಈ ಸಂದೇಶವನ್ನು ಕೇಳಿದಾಗ, ಅವನೂ ಅವನ ಜನರೂ ಬಹಳವಾಗಿ ಭಯಹಿಡಿದವರಾದರು. ಅಡವಿಯ ಮರಗಳು ಬಿರುಗಾಳಿಗೆ ತತ್ತರಿಸುತ್ತವೋ ಎಂಬಂತೆ ಅವರು ತತ್ತರಿಸಿದರು.
3 ಆಗ ಯೆಹೋವನು ಯೆಶಾಯನಿಗೆ, “ನೀನೂ ನಿನ್ನ ಮಗನಾದ ಶೆಯಾರ್ ಯಾಶೂಬನೂ ಆಹಾಜನ ಬಳಿಗೆ ಹೋಗಿ ಮಾತನಾಡಬೇಕು. ನೀರು ಮೇಲಿನ ಕೊಳಕ್ಕೆ ಸೇರುವ ಸ್ಥಳಕ್ಕೆ ಹೋಗು. ಇದು ಅಗಸನ ಹೊಲಕ್ಕೆ ಹೋಗುವ ಮಾರ್ಗದಲ್ಲಿದೆ.
4 “ಆಹಾಜನಿಗೆ ಹೀಗೆ ಹೇಳು: ‘ಶಾಂತನಾಗಿದ್ದು ಜಾಗ್ರತೆಯಿಂದಿರು. ಭಯಪಡಬೇಡ. ರೆಚೀನ್ ಮತ್ತು ರೆಮಲ್ಯನ ಮಗ ಇವರಿಬ್ಬರೂ ಸೇರಿ ನಿನ್ನನ್ನು ಬೆದರಿಸದಂತೆ ನೋಡಿಕೋ. ಅವರಿಬ್ಬರೂ ಸುಟ್ಟುಹೋದ ಕೋಲಿನಂತಿದ್ದಾರೆ. ಹಿಂದೆ ಅವರು ಬೆಂಕಿಯಿಂದ ಉರಿಯುತ್ತಿದ್ದರು. ಆದರೆ ಈಗ ಅವರು ಕೇವಲ ಹೊಗೆಯಾಡುತ್ತಿದ್ದಾರೆ. ರೆಚೀನ್, ಅರಾಮ್ ಮತ್ತು ರೆಮಲ್ಯನ ಮಗ ಕೋಪಗೊಂಡಿದ್ದಾರೆ. 5 ಅವರು ನಿನ್ನ ವಿರುದ್ಧವಾಗಿ ಕುತಂತ್ರ ನಡಿಸಿದ್ದಾರೆ. 6 ಅವರು, “ನಾವು ಹೋಗಿ ಯೆಹೂದಕ್ಕೆ ವಿರುದ್ಧವಾಗಿ ಯುದ್ಧ ಮಾಡೋಣ. ಯೆಹೂದ ರಾಜ್ಯವನ್ನು ನಾವಿಬ್ಬರೂ ಭಾಗ ಮಾಡಿಕೊಳ್ಳೋಣ ಮತ್ತು ಟಾಬೇಲನ ಮಗನನ್ನು ಯೆಹೂದದ ಹೊಸ ಅರಸನಾಗಿ ಮಾಡೋಣ ಎಂದು ಮಾತಾಡಿಕೊಳ್ಳುತ್ತಿದ್ದಾರೆ.”’”
7 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ಅವರ ಕುತಂತ್ರವು ನಡೆಯದು. ಅದು ನೆರವೇರದು. 8 ದಮಸ್ಕದಲ್ಲಿ ರೆಚೀನನು ಅರಸನಾಗಿರುವಷ್ಟು ಸಮಯ ಅದು ನಡೆಯದು. ಎಫ್ರಾಯೀಮ್ (ಇಸ್ರೇಲ್) ಈಗ ಒಂದು ದೇಶವಾಗಿದೆ. ಆದರೆ ಇನ್ನು ಅರವತ್ತೈದು ವರ್ಷಗಳೊಳಗೆ ಎಫ್ರಾಯೀಮ್ ಒಂದು ದೇಶವಾಗಿರದು. 9 ಸಮಾರ್ಯವು ಎಫ್ರಾಯೀಮಿನ ರಾಜಧಾನಿಯಾಗಿರುವಷ್ಟು ಕಾಲ ಮತ್ತು ರೆಮಲ್ಯನ ಮಗನು ಸಮಾರ್ಯದಲ್ಲಿ ಅರಸನಾಗಿರುವಷ್ಟು ಕಾಲ ಅವರ ಯೋಜನೆಗಳು ಕೈಗೂಡುವುದಿಲ್ಲ. ನೀನು ಈ ವಾರ್ತೆಯನ್ನು ನಂಬದಿದ್ದರೆ ಜನರು ನಿನ್ನ ಮಾತನ್ನು ನಂಬದಿರಲಿ.”
ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ
(ಮಾರ್ಕ 10:46-52; ಲೂಕ 18:35-43)
29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.
31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.
32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.
33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.
34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.
Kannada Holy Bible: Easy-to-Read Version. All rights reserved. © 1997 Bible League International