Revised Common Lectionary (Complementary)
ರಚನೆಗಾರ: ದಾವೀದ
37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
2 ದುಷ್ಟರು ಹುಲ್ಲಿನಂತೆಯೂ
ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
3 ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
4 ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
ನಿನಗೆ ಬೇಕಾದುದನ್ನು ಆತನೇ ಕೊಡುವನು.
5 ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
6 ನಿನ್ನ ನೀತಿಯೂ ನ್ಯಾಯವೂ
ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
8 ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
9 ದುಷ್ಟರಾದರೋ ನಾಶವಾಗುವರು.
ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
ಅಶ್ಶೂರದ ರಾಜ ಹಿಜ್ಕೀಯನನ್ನು ಮತ್ತೆ ಎಚ್ಚರಿಸುವನು
8 ಅಶ್ಶೂರದ ರಾಜನು ಲಾಕೀಷನ್ನು ಬಿಟ್ಟುಹೋದನೆಂಬ ಸುದ್ದಿಯನ್ನು ಸೇನಾಧಿಪತಿಯು ಕೇಳಿ ಲಿಬ್ನಕ್ಕೆ ಹೋದಾಗ ರಾಜನು ಲಿಬ್ನದ ವಿರುದ್ಧ ಯುದ್ಧ ಮಾಡುತ್ತಿದ್ದನು. 9 ಇಥಿಯೋಪಿಯದ ರಾಜ ತಿರ್ಹಾಕನ ಬಗ್ಗೆ ಅಶ್ಶೂರದ ರಾಜ ಒಂದು ಗಾಳಿ ಸುದ್ದಿಯನ್ನು ಕೇಳಿದನು. “ತಿರ್ಹಾಕನು ನಿನ್ನ ವಿರುದ್ಧ ಹೋರಾಡಲು ಬಂದಿದ್ದಾನೆ” ಎಂಬುದೇ ಆ ಗಾಳಿಸುದ್ದಿಯಾಗಿತ್ತು.
ಆದ್ದರಿಂದ ಅಶ್ಶೂರದ ರಾಜನು ಹಿಜ್ಕೀಯನ ಬಳಿಗೆ ಮತ್ತೆ ಸಂದೇಶಕರನ್ನು ಕಳುಹಿಸಿದನು. ಅಶ್ಶೂರದ ರಾಜನು ಈ ಸಂದೇಶಕರಿಗೆ ಒಂದು ಸಂದೇಶವನ್ನು ನೀಡಿದನು. 10 ಯೆಹೂದದ ರಾಜನಾದ ಹಿಜ್ಕೀಯನಿಗೆ ಇದನ್ನು ಹೇಳಿ:
“ನೀನು ನಂಬುವ ದೇವರು ನಿನ್ನನ್ನು ಮೋಸಗೊಳಿಸಲು ಅವಕಾಶ ನೀಡಬೇಡ. ಅಶ್ಶೂರದ ರಾಜ ಜೆರುಸಲೇಮನ್ನು ಸೋಲಿಸುವುದಿಲ್ಲ ಎಂಬ ನಿನ್ನ ದೇವರ ಮಾತನ್ನು ನಂಬಬೇಡ. 11 ಅಶ್ಶೂರದ ರಾಜನು ಇತರ ಎಲ್ಲಾ ಜನಾಂಗಗಳಿಗೆ ಮಾಡಿದವುಗಳನ್ನು ನೀನು ಕೇಳಿರುವೆ. ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು! ನೀನು ರಕ್ಷಿಸಲ್ಪಡುವೆಯಾ? ಇಲ್ಲ! 12 ಆ ರಾಜ್ಯಗಳ ದೇವರುಗಳು ತಮ್ಮ ಜನರನ್ನು ರಕ್ಷಿಸಲಾಗಲಿಲ್ಲ. ನನ್ನ ಪೂರ್ವಿಕರು ಅವರನ್ನೆಲ್ಲ ನಾಶಗೊಳಿಸಿದರು. ಅವರು ಗೋಜಾನ್, ಖಾರಾನ್, ರೆಚೆಫ್ ಮತ್ತು ತೆಲಸ್ಸಾರ್‌ನ ಎದೆನಿನ ಜನರನ್ನು ನಾಶಗೊಳಿಸಿದರು! 13 ಹಮಾತಿನ ರಾಜನು ಎಲ್ಲಿದ್ದಾನೆ? ಅರ್ಪಾದ್‌ನ ರಾಜನೆಲ್ಲಿ? ಸೆಫರ್ವಯಿಮ್ ರಾಜನೆಲ್ಲಿ? ಹೇನ ಮತ್ತು ಇವ್ವಾಗಳ ರಾಜರೆಲ್ಲಿ?” (ಅವರೆಲ್ಲರೂ ಹತರಾದರು!)
ಹಿಜ್ಕೀಯನು ಯೆಹೋವನಿಗೆ ಪ್ರಾರ್ಥಿಸುವನು
14 ಹಿಜ್ಕೀಯನು ಸಂದೇಶಕರಿಂದ ಬಂದ ಪತ್ರಗಳನ್ನು ತೆಗೆದುಕೊಂಡು ಓದಿದನು. ನಂತರ ಹಿಜ್ಕೀಯನು ದೇವಾಲಯದವರೆಗೆ ಹೋಗಿ, ಯೆಹೋವನ ಸನ್ನಿಧಿಯಲ್ಲಿ ಆ ಪತ್ರಗಳನ್ನಿರಿಸಿದನು. 15 ಹಿಜ್ಕೀಯನು ಯೆಹೋವನ ಸನ್ನಿಧಿಯಲ್ಲಿ, “ಯೆಹೋವನೇ, ಕೆರೂಬಿಗಳ ಮೇಲೆ ರಾಜನಾಗಿ ಕುಳಿತುಕೊಳ್ಳುವ ಇಸ್ರೇಲರ ದೇವರೇ, ಲೋಕದ ರಾಜ್ಯಗಳಿಗೆಲ್ಲಾ ನೀನೊಬ್ಬನೇ ದೇವರಾಗಿರುವೆ. ನೀನು ಪರಲೋಕವನ್ನು ಮತ್ತು ಈ ಲೋಕವನ್ನು ಸೃಷ್ಟಿಸಿದೆ! 16 ಯೆಹೋವನೇ, ದಯವಿಟ್ಟು ನನ್ನ ಮಾತುಗಳನ್ನು ಆಲಿಸು! ಯೆಹೋವನೇ, ನಿನ್ನ ಕಣ್ಣುಗಳನ್ನು ತೆರೆದು, ಈ ಪತ್ರವನ್ನು ನೋಡು. ಸನ್ಹೇರೀಬನು ಜೀವಸ್ವರೂಪನಾದ ದೇವರನ್ನು ನಿಂದಿಸಿ ಕಳುಹಿಸಿರುವ ಈ ವಾಕ್ಯವನ್ನು ಕೇಳು! 17 ಯೆಹೋವನೇ, ಅಶ್ಶೂರದ ರಾಜರು ಆ ರಾಜ್ಯಗಳನ್ನೆಲ್ಲ ನಾಶಗೊಳಿಸಿದ್ದು ನಿಜ! 18 ಅವರು ಆ ದೇಶಗಳ ದೇವರುಗಳನ್ನು ಬೆಂಕಿಯಲ್ಲಿ ಎಸೆದರು. ಆದರೆ ಅವು ನಿಜವಾದ ದೇವರುಗಳಲ್ಲ. ಅವುಗಳು ಮಾನವರಿಂದ ಮರ ಮತ್ತು ಕಲ್ಲುಗಳಿಂದ ನಿರ್ಮಿತವಾಗಿದ್ದವು. ಆದಕಾರಣವೇ ಅಶ್ಶೂರದ ರಾಜರುಗಳು ಅವುಗಳನ್ನು ನಾಶಗೊಳಿಸಿದರು. 19 ನಮ್ಮ ದೇವರಾದ ಯೆಹೋವನೇ, ಅಶ್ಶೂರದ ರಾಜನಿಂದ ನಮ್ಮನ್ನು ರಕ್ಷಿಸು. ಭೂಲೋಕದ ರಾಜ್ಯಗಳೆಲ್ಲ ನೀನೊಬ್ಬನೇ ದೇವರಾದ ಯೆಹೋವನೆಂದು ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.
20 ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಈ ಸಂದೇಶವನ್ನು ಕಳುಹಿಸಿದನು: “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನಾದ ಸನ್ಹೇರೀಬನ ವಿರುದ್ಧವಾಗಿ ನೀವು ನನ್ನಲ್ಲಿ ಪಾರ್ಥಿಸಿರುವಿರಿ. ನಾನು ನಿಮ್ಮ ಪ್ರಾರ್ಥನೆಯನ್ನು ಕೇಳಿದ್ದೇನೆ.
ಅಶ್ಶೂರದ ಸೇನೆಯು ನಾಶಗೊಳಿಸಲ್ಪಟ್ಟಿತು
35 ಆ ರಾತ್ರಿ ಯೆಹೋವನ ದೂತನು ಹೊರಕ್ಕೆ ಹೋಗಿ, ಅಶ್ಶೂರದ ಶಿಬಿರದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಜನರನ್ನು ಕೊಂದುಹಾಕಿದನು. ಜನರು ಬೆಳಗಿನ ಜಾವದಲ್ಲಿ ಮೇಲಕ್ಕೆದ್ದಾಗ ಸತ್ತ ದೇಹಗಳನ್ನು ನೋಡಿದರು.
36 ಆಗ ಅಶ್ಶೂರದ ರಾಜನಾದ ಸನ್ಹೇರೀಬನು ತಾನು ವಾಸಿಸುತ್ತಿದ್ದ ನಿನವೆಗೆ ಹಿಂದಿರುಗಿಹೋದನು. 37 ಸನ್ಹೇರೀಬನು ಒಂದು ದಿನ ತನ್ನ ದೇವರಾದ ನಿಸ್ರೋಕನನ್ನು ಆಲಯದಲ್ಲಿ ಆರಾಧಿಸುತ್ತಿದ್ದನು. ಅವನ ಮಕ್ಕಳಾದ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅವನನ್ನು ಖಡ್ಗದಿಂದ ಇರಿದುಕೊಂದರು. ನಂತರ ಅದ್ರಮ್ಮೆಲೆಕ್ ಮತ್ತು ಸರೆಚೆರ್ ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಸನ್ಹೇರೀಬನ ಮಗನಾದ ಏಸರ್‌ಹದ್ದೋನನು ಅವನ ನಂತರ ಹೊಸ ರಾಜನಾದನು.
ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ
12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.
14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.
17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು[a] ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.
ಥುವತೈರದಲ್ಲಿರುವ ಸಭೆಗೆ ಯೇಸುವಿನ ಪತ್ರ
18 “ಥುವತೈರದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ದೇವಕುಮಾರನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ ಉರಿಯಂತೆ ಪ್ರಜ್ವಲಿಸುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳೂ ಇರುವಾತನು, ನಿನಗೆ ಇವುಗಳನ್ನು ಹೇಳುತ್ತಾನೆ.
19 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆಗಳು ನನಗೆ ತಿಳಿದಿವೆ. ಈಗ ನೀನು ಮೊದಲಿಗಿಂತ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲೆನು. 20 ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.[b] 21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.
22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ. 23 ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.
24 “ಆದರೆ ಥುವತೈರದಲ್ಲಿರುವ ಇನ್ನಿತರರಿಗೆ ನಾನು ಹೇಳುವುದೇನೆಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ, ‘ಸೈತಾನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತುಕೊಂಡಿಲ್ಲ. ಆದ್ದರಿಂದ ನಾನು ಬೇರೊಂದು ಹೊರೆಯನ್ನು ನಿಮ್ಮ ಮೇಲೆ ಹೊರಿಸುವುದಿಲ್ಲ. 25 ನಾನು ಬರುವ ತನಕ ಈಗ ನೀವಿರುವಂತೆಯೇ ಇರಿ.
26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ: 27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’[c] 28 ನಾನು ನನ್ನ ತಂದೆಯಿಂದ ಪಡೆದುಕೊಂಡ ಶಕ್ತಿ ಇದೇ. ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ನೀಡುತ್ತೇನೆ. 29 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
Kannada Holy Bible: Easy-to-Read Version. All rights reserved. © 1997 Bible League International