Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 62

ರಚನೆಗಾರ: ದಾವೀದ.

62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
    ಆತನಿಂದಲೇ ನನಗೆ ರಕ್ಷಣೆಯಾಗುವುದು.
ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
    ನಾನೆಂದಿಗೂ ಕದಲೆನು.

ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
    ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
    ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
    ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

ಹೋಶೇಯ 10:9-15

ಇಸ್ರೇಲ್ ತನ್ನ ಪಾಪದ ಪ್ರತಿಫಲವನ್ನು ಅನುಭವಿಸುವದು

“ಇಸ್ರೇಲೇ, ನೀನು ಗಿಬ್ಯದವರ ಕಾಲದಿಂದಲೂ ಪಾಪ ಮಾಡುತ್ತಲೇ ಬಂದಿರುವೆ. (ಆ ಜನರು ಅಲ್ಲಿ ಪಾಪವನ್ನು ಮಾಡುತ್ತಲೇ ಇದ್ದಾರೆ.) ಗಿಬ್ಯದ ಆ ದುಷ್ಟ ಜನರನ್ನು ಯುದ್ಧವು ಹಿಡಿದುಕೊಳ್ಳುವುದು. 10 ಅವರನ್ನು ಶಿಕ್ಷಿಸಲು ನಾನು ಬರುವೆನು. ಸೈನ್ಯಗಳು ಒಟ್ಟಾಗಿ ಅವರಿಗೆ ವಿರುದ್ಧವಾಗಿ ಬರುವವು. ಅವರು ಬಂದು ಇಸ್ರೇಲರನ್ನು ಅವರಿಬ್ಬರ ಪಾಪಗಳಿಗಾಗಿ ಶಿಕ್ಷಿಸುವರು.

11 “ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”

12 ನೀನು ಒಳ್ಳೆಯತನವನ್ನು ಬಿತ್ತಿದರೆ ಪ್ರೀತಿಯೆಂಬ ಬೆಳೆಯನ್ನು ಕೊಯ್ಯುವೆ. ನಿನ್ನ ನೆಲವನ್ನು ಉಳುಮೆ ಮಾಡು. ಆಗ ನೀನು ಯೆಹೋವನೊಂದಿಗೆ ಬೆಳೆಯನ್ನು ಕೊಯ್ಯುವೆ. ಆತನು ಬರುವನು. ಮತ್ತು ಆತನ ಒಳ್ಳೆಯತನವು ನಿನ್ನ ಮೇಲೆ ಮಳೆಯಂತೆ ಸುರಿಯುವದು.

13 ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ. 14 ನಿನ್ನ ಸೈನ್ಯಕ್ಕೆ ರಣರಂಗದ ಸ್ವರವು ಕೇಳಿಸುವದು. ನಿನ್ನ ಕೋಟೆಗಳೆಲ್ಲವೂ ಕೆಡವಲ್ಪಡುವದು. ಬೇತ್‌ಅರ್ಬೇಲನ್ನು ಶಲ್ಮಾನನು ಕೆಡವಿದಂತೆ ಆಗುವದು. ಆ ಯುದ್ಧದ ಸಮಯದಲ್ಲಿ ತಾಯಿಯು ತನ್ನ ಮಕ್ಕಳೊಂದಿಗೆ ಕೊಲ್ಲಲ್ಪಡುವಳು. 15 ಆ ದಿನದಲ್ಲಿ ಬೇತೇಲು ನಿನಗೆ ಆ ದುರ್ಗತಿಯನ್ನು ತರುವದು. ಯಾಕೆಂದರೆ ನೀನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ. ಅದು ಪ್ರಾರಂಭವಾದಾಗ ಇಸ್ರೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.

ಯಾಕೋಬನು 5:1-6

ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು

ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International