Revised Common Lectionary (Complementary)
ರಚನೆಗಾರ: ದಾವೀದ.
62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
ಆತನಿಂದಲೇ ನನಗೆ ರಕ್ಷಣೆಯಾಗುವುದು.
2 ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
ನಾನೆಂದಿಗೂ ಕದಲೆನು.
3 ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
4 ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.
5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆ ದೇವರಲ್ಲಿಯೇ.
6 ಆತನೇ ನನಗೆ ಬಂಡೆಯೂ
ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
7 ನನ್ನ ರಕ್ಷಣೆಯೂ ಮಾನವೂ ದೇವರೇ.
ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
8 ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
ಆತನೇ ನಮ್ಮ ಆಶ್ರಯಸ್ಥಾನ.
9 ಸಾಮಾನ್ಯ ಜನರು ಕೇವಲ ಉಸಿರಷ್ಟೇ.
ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
ಎಂದು ದೇವರು ನುಡಿದಿದ್ದಾನೆ.
12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.
8 ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು:
“ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ.
ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ.
ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ
ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”
ಸ್ವಲ್ಪ ಮಂದಿ ಇಸ್ರೇಲರು ಬದುಕಿಕೊಳ್ಳುವರು
9 ಆ ಸಮಯದಲ್ಲಿ ಒಂದು ಮನೆಯಲ್ಲಿ ಹತ್ತು ಮಂದಿ ಇದ್ದರೂ ಅವರು ಸಾಯುವರು. 10 ಒಬ್ಬ ವ್ಯಕ್ತಿಯು ಸತ್ತಾಗ ಅವನ ಸಂಬಂಧಿಕರಲ್ಲಿ ಒಬ್ಬನು ಬಂದು ಶವವನ್ನು ಸುಡಲು ತೆಗೆದುಕೊಂಡು ಹೋಗುವನು. ಸಂಬಂಧಿಕನು ಬಂದು ಎಲುಬುಗಳನ್ನು ಕೊಂಡೊಯ್ಯುವನು. ಮನೆಯೊಳಗೆ ಅವಿತುಕೊಂಡಿರುವವರನ್ನು ಕರೆಯುವನು. “ಇನ್ನೂ ಸತ್ತ ಹೆಣಗಳು ಒಳಗಿವೆಯೋ?” ಎಂದು ವಿಚಾರಿಸುವನು.
ಒಳಗಿದ್ದವರು “ಇಲ್ಲ” ಎಂದು ಉತ್ತರಿಸುವರು.
ಆಗ ಆ ಸಂಬಂಧಿಕನು ಅವರನ್ನು ತಡೆದು, “ಯೆಹೋವನ ನಾಮವನ್ನು ನಾವು ಉಚ್ಚರಿಸಬಾರದು” ಎಂದು ಹೇಳುವನು.
11 ನೋಡು, ಯೆಹೋವನು ಆಜ್ಞೆಯನ್ನು ಕೊಡುವನು.
ಆಗ ಭವ್ಯಭವನಗಳು ಒಡೆದು ಚೂರುಚೂರಾಗಿ ಬೀಳುವವು.
ಮತ್ತು ಸಣ್ಣ ಮನೆಗಳು ಚಿಂದಿಚಿಂದಿಯಾಗಿ ಚೂರಾಗುವವು.
12 ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ!
ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ!
ಆದರೆ ನೀವು ಎಲ್ಲವನ್ನು ತಿರುವುಮುರುವು ಮಾಡುತ್ತೀರಿ.
ಒಳ್ಳೆಯತನವನ್ನು ನೀವು ವಿಷವಾಗಿ ಮಾಡಿದ್ದೀರಿ.
ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
13 ಲೊ ಡೆಬಾರಿನಲ್ಲಿ ನೀವು ಸಂತೋಷವಾಗಿದ್ದೀರಿ.
“ಕರ್ನಯಿಮನ್ನು ನಾವು ನಮ್ಮ ಬಲದಿಂದಲೇ ಗೆದ್ದಿದ್ದೇವೆ” ಎಂದು ನೀವು ಹೇಳುತ್ತೀರಿ.
14 “ಆದರೆ ಇಸ್ರೇಲೇ, ನಿನಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು. ಆ ಜನಾಂಗವು ನಿನ್ನ ದೇಶದಲ್ಲಿ ಪೂರ್ತಿ ಸಂಕಟವನ್ನುಂಟು ಮಾಡುವದು; ಅದು ಲೆಬೋಹಮಾತಿನಿಂದ ಹಿಡಿದು ಅರಾಬಾ ಹಳ್ಳದ ತನಕ ಸಂಕಟವನ್ನುಂಟು ಮಾಡುವದು.” ಸರ್ವಶಕ್ತನಾದ ಯೆಹೋವನು ಇದನ್ನು ಹೇಳಿದ್ದಾನೆ.
ಲವೊದಿಕೀಯದ ಸಭೆಗೆ ಯೇಸುವಿನ ಪತ್ರ
14 “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ:
“ಆಮೆನ್[a] ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
15 “ನೀನು ಮಾಡುವುದೆಲ್ಲಾ ನನಗೆ ತಿಳಿದದೆ. ನೀನು ಬಿಸಿಯೂ ಇಲ್ಲ, ತಣ್ಣಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು ಅಥವಾ ತಣ್ಣಗಾದರೂ ಇರಬೇಕಿತ್ತು! 16 ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು. 17 ನೀನು ನಿನ್ನನ್ನು ಐಶ್ವರ್ಯವಂತನೆಂದು ಹೇಳಿಕೊಳ್ಳುತ್ತಿರುವೆ. ನೀನು ಐಶ್ವರ್ಯವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಚಿಸಿಕೊಂಡಿರುವೆ. ಆದರೆ ನಿಜವಾಗಿಯೂ ನೀನು ದುರವಸ್ಥೆಗೆ ಒಳಗಾದವನಾಗಿರುವೆ, ದೌರ್ಭಾಗ್ಯನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆತ್ತಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ. 18 ಬೆಂಕಿಯಲ್ಲಿ ಪುಟಹಾಕಿದ ಅಪ್ಪಟ ಚಿನ್ನವನ್ನು ನೀನು ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುವುದೇನೆಂದರೆ: ಬಿಳಿವಸ್ತ್ರಗಳನ್ನು ಕೊಂಡುಕೊ. ಆಗ ನೀನು ನಾಚಿಕೆಕರವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುವುದು. ನೀನು ನಿನ್ನ ಕಣ್ಣುಗಳಿಗೆ ಹಚ್ಚಲು ಔಷಧಿಯನ್ನು ಕೊಂಡುಕೊಳ್ಳಬೇಕೆಂತಲೂ ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು.
19 “ನಾನು ಪ್ರೀತಿಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀವು ಆಸಕ್ತಿಯಿಂದಿರಿ! ದೇವರ ಕಡೆಗೆ ತಿರುಗಿಕೊಳ್ಳಿರಿ. 20 ಇಗೋ, ನಾನು ಬಾಗಿಲ ಬಳಿ ನಿಂತುಕೊಂಡು ತಟ್ಟುತ್ತಿದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೊಂದಿಗೆ ಊಟ ಮಾಡುತ್ತೇನೆ ಮತ್ತು ಅವನು ನನ್ನೊಂದಿಗೆ ಊಟ ಮಾಡುತ್ತಾನೆ.
21 “ನಾನು ಜಯಗಳಿಸಿ ನನ್ನ ತಂದೆಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡೆನು. ಅಂತೆಯೇ ಜಯಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು. 22 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.”
Kannada Holy Bible: Easy-to-Read Version. All rights reserved. © 1997 Bible League International