Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಆಮೋಸ 6:1

ಇಸ್ರೇಲರ ಸುಭಿಕ್ಷೆ ತೆಗೆಯಲ್ಪಡುವದು

ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ
    ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು.
ನೀವು ವಿಶೇಷವಾದ ದೇಶದ ವಿಶೇಷ ನಾಯಕರು.
    ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.

ಆಮೋಸ 6:4-7

ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ,
    ದಂತದ ಮಂಚದಲ್ಲಿ ಮಲಗುವಿರಿ;
ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ.
    ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ;
    ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.
ಅಂದವಾದ ಪಾತ್ರೆಗಳಲ್ಲಿ ದ್ರಾಕ್ಷಾರಸ ಕುಡಿಯುವಿರಿ.
    ಉತ್ತಮವಾದ ಸುಗಂಧತೈಲವನ್ನು ಉಪಯೋಗಿಸುವಿರಿ.
ಯೋಸೇಫನ ಕುಟುಂಬದ
    ನಾಶನದ ಬಗ್ಗೆಯೂ ನೀವು ಬೇಸರಗೊಳ್ಳಲಿಲ್ಲ.

ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆ ಒಯ್ಯಲ್ಪಡುವವರಲ್ಲಿ ಮೊದಲಿಗರಾಗುವರು.

ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

1 ತಿಮೊಥೆಯನಿಗೆ 6:6-19

ದೇವರ ಸೇವೆ ಮಾಡುವವನು ತನ್ನಲ್ಲಿರುವುದರಲ್ಲಿ ಸಂತುಷ್ಟನಾಗಿದ್ದರೆ, ಅವನು ದೊಡ್ಡ ಶ್ರೀಮಂತನೇ ಸರಿ. ನಾವು ಲೋಕಕ್ಕೆ ಬಂದಾಗ ಏನನ್ನೂ ತೆಗೆದುಕೊಂಡು ಬರಲಿಲ್ಲ. ನಾವು ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಊಟ ಬಟ್ಟೆಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತೇವೆ. ಶ್ರೀಮಂತರಾಗಬೇಕೆನ್ನುವವರು ತಮ್ಮನ್ನು ತಾವೇ ಶೋಧನೆಗೆ ಗುರಿಪಡಿಸಿಕೊಳ್ಳುವರು. ಅವರು ಉರ್ಲಿನಲ್ಲಿ ಸಿಕ್ಕಿಹಾಕಿಕೊಂಡವರಾಗಿದ್ದಾರೆ. ಅವರು ಹಾನಿಕರವಾದ ಅನೇಕ ಮೂರ್ಖ ಆಸೆಗಳಲ್ಲಿ ಸಿಕ್ಕಿಬೀಳುವರು. ಅವು ಜನರನ್ನು ಹಾಳುಮಾಡಿ, ನಾಶಗೊಳಿಸುತ್ತವೆ. 10 ಹಣದಾಸೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲವಾಗುತ್ತದೆ. ಕೆಲವು ಜನರು ಹೆಚ್ಚುಹೆಚ್ಚು ಹಣವನ್ನು ಗಳಿಸಿಕೊಳ್ಳುವುದಕ್ಕಾಗಿ ಸತ್ಯೋಪದೇಶವನ್ನು ತೊರೆದುಬಿಟ್ಟಿದ್ದಾರೆ. ಆದರೆ ಅವರು ತಮ್ಮನ್ನು ತಾವೇ ಹೆಚ್ಚು ವೇದನೆಗೆ ಗುರಿಪಡಿಸಿಕೊಂಡಿದ್ದಾರೆ.

ನೀವು ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು

11 ಆದರೆ ನೀನು ದೇವರ ಮನುಷ್ಯ. ಆದ್ದರಿಂದ ಈ ಎಲ್ಲಾ ಸಂಗತಿಗಳಿಂದ ದೂರವಾಗಿರು. ದೇವರ ಸೇವೆಯನ್ನು ಮಾಡುತ್ತಾ ಉತ್ತಮಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸು; ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತೆಗಳನ್ನು ಹೊಂದಿದವನಾಗಿರು. 12 ನಂಬಿಕೆಯಲ್ಲಿ ದೃಢವಾಗಿರುವುದು ಓಟದ ಸ್ಪರ್ಧೆಗೆ ಹೋಲಿಕೆಯಾಗಿದೆ. ಓಟದ ಸ್ಪರ್ಧೆಯಲ್ಲಿ ಗೆಲ್ಲಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು. ನಿತ್ಯಜೀವವನ್ನು ಪಡೆದುಕೊಳ್ಳಲು ಪ್ರಯಾಸಪಡು. ಅದನ್ನು ಹೊಂದಿಕೊಳ್ಳುವುದಕ್ಕಾಗಿ ನೀನು ಕರೆಯಲ್ಪಟ್ಟಿರುವೆ. ಕ್ರಿಸ್ತನಂಬಿಕೆಯ ಕುರಿತಾದ ಸತ್ಯವನ್ನು ನೀನು ಅನೇಕ ಜನರ ಎದುರಿನಲ್ಲಿ ಒಪ್ಪಿಕೊಂಡೆಯಲ್ಲಾ. 13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.

17 ಇಹಲೋಕದ ವಿಷಯಗಳಲ್ಲಿ ಶ್ರೀಮಂತರಾಗಿರುವ ಜನರಿಗೆ ಈ ಆಜ್ಞೆಗಳನ್ನು ತಿಳಿಸು. ಗರ್ವಪಡದಂತೆಯೂ ಹಣವನ್ನು ಅವಲಂಬಿಸಿಕೊಳ್ಳದೆ ದೇವರಲ್ಲೇ ನಿರೀಕ್ಷೆಯಿಡುವಂತೆಯೂ ಅವರಿಗೆ ತಿಳಿಸು. ಹಣವು ಭರವಸೆಗೆ ಯೋಗ್ಯವಲ್ಲ. ದೇವರಾದರೋ ನಮ್ಮ ಸಂತೋಷಕ್ಕಾಗಿ ಸಮಸ್ತವನ್ನು ನಮಗೆ ಧಾರಾಳವಾಗಿ ದಯಪಾಲಿಸುತ್ತಾನೆ. 18 ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಶ್ರೀಮಂತರಿಗೆ ತಿಳಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲೇ ಶ್ರೀಮಂತರಾಗಿರಬೇಕೆಂದು ಅವರಿಗೆ ತಿಳಿಸು. ಪರೋಪಕಾರದಲ್ಲೂ ಹಂಚಿಕೊಳ್ಳುವುದರಲ್ಲೂ ಸಂತಸಪಡಲು ಅವರಿಗೆ ತಿಳಿಸು. 19 ಆಗ ಪರಲೋಕದಲ್ಲಿ ಒಂದು ನಿಧಿಯನ್ನು ಅವರು ಕೂಡಿಟ್ಟು ಕೊಂಡಂತಾಗುತ್ತದೆ. ಆ ನಿಧಿಯೇ ಅವರ ಮುಂದಿನ ಜೀವಿತಕ್ಕೆ ಭದ್ರವಾದ ಅಸ್ತಿವಾರವಾಗಿದೆ. ಹೀಗೆ ಅವರು ನಿಜವಾದ ಜೀವಿತವನ್ನು ಹೊಂದಿಕೊಳ್ಳುವರು.

ಲೂಕ 16:19-31

ಐಶ್ವರ್ಯವಂತನು ಮತ್ತು ಲಾಜರನು

19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.

25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.

27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.

29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.

30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.

31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International