Revised Common Lectionary (Complementary)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
11 ಐಶ್ವರ್ಯವಂತನು ತಾನೇ ಬುದ್ಧಿವಂತನೆಂದು ಭಾವಿಸುತ್ತಾನೆ. ವಿವೇಕಿಯಾದ ಬಡವನಾದರೋ ಸತ್ಯವನ್ನು ಕಾಣಬಲ್ಲನು.
12 ಒಳ್ಳೆಯವರು ನಾಯಕರಾದಾಗ ಎಲ್ಲರಿಗೂ ಸಂತೋಷ. ಆದರೆ ಕೆಡುಕನು ಅಧಿಪತಿಯಾದಾಗ ಎಲ್ಲರೂ ಅಡಗಿಕೊಳ್ಳುವರು.
13 ಪಾಪಗಳನ್ನು ಅಡಗಿಸಿಕೊಳ್ಳುವವನಿಗೆ ಯಶಸ್ಸು ಇಲ್ಲವೇ ಇಲ್ಲ. ತನ್ನ ಪಾಪವನ್ನು ಅರಿಕೆಮಾಡಿ ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
14 ಕೇಡನ್ನು ಮಾಡಲು ಭಯಪಡುವವನು ಆಶೀರ್ವಾದ ಹೊಂದುವನು. ಆದರೆ ಮೊಂಡನು ಆಪತ್ತಿಗೆ ಸಿಕ್ಕಿಬೀಳುವನು.
15 ಬಲಹೀನರನ್ನು ಆಳುವ ಕೆಡುಕನು ಗರ್ಜಿಸುವ ಸಿಂಹದಂತಿರುವನು; ಮೇಲೆರಗಲಿರುವ ಕರಡಿಯಂತಿರುವನು.
16 ವಿವೇಕವಿಲ್ಲದ ಅಧಿಪತಿ ತನ್ನ ಅಧೀನದಲ್ಲಿರುವವರಿಗೆ ಕೇಡುಮಾಡುವನು. ಅನ್ಯಾಯದ ಹಣವನ್ನು ತೆಗೆದುಕೊಳ್ಳದ ಅಧಿಪತಿ ಬಹುಕಾಲ ಆಳುವನು.
17 ಕೊಲೆಮಾಡಿದ ಅಪರಾಧಿಯು ತನ್ನ ಸಮಾಧಿಗೆ ಓಡಿಹೋಗಲಿ. ಅವನಿಗೆ ಸಹಾಯಮಾಡಬೇಡ.
18 ಒಳ್ಳೆಯವನು ಕ್ಷೇಮವಾಗಿರುವನು; ಕೆಡುಕನಾದರೋ ಇದ್ದಕ್ಕಿದ್ದಂತೆ ಹಾಳಾಗುವನು.
19 ಕಷ್ಟಪಟ್ಟು ದುಡಿಯುವವನಿಗೆ ಬೇಕಾದಷ್ಟು ಆಹಾರವಿರುವುದು. ನನಸಾಗದ ಕನಸುಗಳನ್ನೇ ಆಲೋಚಿಸಿಕೊಂಡಿರುವವನು ಬಡವನಾಗಿಯೇ ಇರುವನು.
20 ನಂಬಿಗಸ್ತನು ಬಹಳವಾಗಿ ಆಶೀರ್ವದಿಸಲ್ಪಡುವನು. ಐಶ್ವರ್ಯವಂತನಾಗುವುದಕ್ಕಾಗಿಯೇ ಪ್ರಯತ್ನಿಸುವವನು ದಂಡನೆ ಹೊಂದುವನು.
21 ಪಕ್ಷಪಾತ ತಪ್ಪು. ಕೆಲವರಾದರೋ ಒಂದು ತುಂಡು ರೊಟ್ಟಿಗಾಗಿಯೂ ತಪ್ಪು ಮಾಡುವರು.
22 ಜಿಪುಣನು ಐಶ್ವರ್ಯವಂತನಾಗಲು ಆತುರಪಡುವನು: ಆದರೆ ತಾನು ಬೇಗನೆ ಬಡವನಾಗಲಿರುವುದನ್ನು ಅವನು ಗ್ರಹಿಸಿಕೊಳ್ಳಲಾರನು.
23 ಗದರಿಸುವವನು ಸ್ವಲ್ಪಕಾಲದ ನಂತರ ಮುಖಸ್ತುತಿ ಮಾಡುವವನಿಗಿಂತಲೂ ಹೆಚ್ಚಾಗಿ ಗೌರವಿಸಲ್ಪಡುವನು.
24 ಕೆಲವರು ತಮ್ಮ ತಂದೆತಾಯಿಗಳಿಂದ ಕದ್ದುಕೊಂಡು, “ಅದು ತಪ್ಪಲ್ಲ” ಎಂದು ಹೇಳುವರು. ಆದರೆ ಆ ವ್ಯಕ್ತಿಯು ಮನೆಯೊಳಗೆ ನುಗ್ಗಿ ಸರ್ವಸ್ವವನ್ನು ನಾಶಮಾಡುವ ವ್ಯಕ್ತಿಯಂತೆಯೇ ಕೆಟ್ಟವನಾಗಿದ್ದಾನೆ.
25 ದುರಾಶೆಯುಳ್ಳವನು ಜಗಳಗಳನ್ನು ಎಬ್ಬಿಸುತ್ತಾನೆ. ಯೆಹೋವನಲ್ಲಿ ಭರವಸೆ ಇಡುವವನಾದರೋ ಅಭಿವೃದ್ಧಿ ಹೊಂದುವನು.
26 ಸ್ವಂತ ಆಲೋಚನೆಯ ಮೇಲೆ ಭರವಸೆ ಇಡುವವನು ಮೂರ್ಖನಾಗಿದ್ದಾನೆ. ಜ್ಞಾನಮಾರ್ಗದಲ್ಲಿ ನಡೆಯುವವನು ಸುರಕ್ಷಿತನಾಗಿರುವನು.
27 ಬಡವರಿಗೆ ಕೊಡುವವನು ತನಗೆ ಅಗತ್ಯವಾದ ಪ್ರತಿಯೊಂದನ್ನೂ ಹೊಂದಿಕೊಳ್ಳುವನು. ಬಡವರಿಗೆ ಸಹಾಯಮಾಡದವನಿಗೆ ಅನೇಕ ಶಾಪಗಳು ಬರುತ್ತವೆ.
28 ಕೆಡುಕನು ಅಧಿಕಾರಕ್ಕೆ ಬಂದರೆ, ಜನರೆಲ್ಲರೂ ಅಡಗಿಕೊಳ್ಳುವರು. ಕೆಡುಕನು ಸೋತುಹೋದಾಗ ಒಳ್ಳೆಯವರು ಮತ್ತೆ ಆಳುವರು.
43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ
(ಮತ್ತಾಯ 17:22-23; ಮಾರ್ಕ 9:30-32)
ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ, 44 “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು. 45 ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.
ಅತ್ಯಂತ ದೊಡ್ಡ ವ್ಯಕ್ತಿ
(ಮತ್ತಾಯ 18:1-5; ಮಾರ್ಕ 9:33-37)
46 ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು. 47 ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು. 48 ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International