Revised Common Lectionary (Complementary)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
3 ಬಡಜನರನ್ನು ದರೋಡೆಮಾಡುವ ಬಡವನು ಬೆಳೆಯನ್ನು ನಾಶಮಾಡುವ ಬಿರುಸಾದ ಮಳೆಯಂತಿರುವನು.
4 ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗದಿದ್ದರೆ ಕೆಡುಕರ ಪರವಾಗಿರುವೆ. ನೀನು ನ್ಯಾಯಪ್ರಮಾಣಕ್ಕೆ ವಿಧೇಯನಾಗಿದ್ದರೆ ಕೆಡುಕರಿಗೆ ವಿರೋಧವಾಗಿರುವೆ.
5 ಕೆಡುಕರು ನ್ಯಾಯವನ್ನು ಅರ್ಥಮಾಡಿಕೊಳ್ಳಲಾರರು; ಯೆಹೋವನನ್ನು ಪ್ರೀತಿಸುವ ಜನರಾದರೋ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವರು.
6 ಮೋಸದಿಂದ ಐಶ್ವರ್ಯವಂತರಾಗುವುದಕ್ಕಿಂತ ಯಥಾರ್ಥವಾಗಿದ್ದು ಬಡವರಾಗಿರುವುದೇ ಮೇಲು.
7 ನ್ಯಾಯಪ್ರಮಾಣಕ್ಕೆ ವಿಧೇಯನಾಗುವವನು ಜಾಣ. ಅಯೋಗ್ಯರ ಸ್ನೇಹಿತನು ತನ್ನ ತಂದೆಗೇ ಅವಮಾನ ತರುವನು.
8 ಬಡವರಿಗೆ ಮೋಸಮಾಡಿ ಗಳಿಸಿದ ಐಶ್ವರ್ಯ ಕಳೆದುಹೋಗುವುದು; ಬಡವರಿಗೆ ದಯೆ ತೋರುವವನಿಗೆ ಅದು ದೊರೆಯುವುದು.
9 ದೇವರ ಉಪದೇಶವನ್ನು ತಿರಸ್ಕರಿಸುವವನ ಪ್ರಾರ್ಥನೆಯನ್ನು ದೇವರೂ ತಿರಸ್ಕರಿಸುವನು.
10 ಯಥಾರ್ಥವಂತರನ್ನು ದಾರಿತಪ್ಪಿಸಿ ಅಪಾಯದ ಮಾರ್ಗದಲ್ಲಿ ನಡೆಸುವವನು ತಾನು ತೋಡಿದ ಗುಂಡಿಗೆ ತಾನೇ ಬೀಳುವನು.
ಮರಣದಿಂದ ಜೀವಕ್ಕೆ
2 ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. 2 ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. 3 ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. 5 ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. 6 ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. 7 ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. 9 ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International