Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 12

ರಚನೆಗಾರ: ದಾವೀದ.

12 ಯೆಹೋವನೇ, ನನ್ನನ್ನು ರಕ್ಷಿಸು!
    ಒಳ್ಳೆಯವರೆಲ್ಲಾ ಕೊನೆಗೊಂಡರು.
    ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ.
ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು.
    ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು.
ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ
    ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ.
“ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ.
    ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ.

ಆದರೆ ಯೆಹೋವನು ಹೇಳುವುದೇನೆಂದರೆ:
    “ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ.
ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ.
    ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.”

ಯೆಹೋವನ ಮಾತುಗಳು
    ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ.

ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು.
    ಅವರನ್ನು ಶಾಶ್ವತವಾಗಿ ಸಂರಕ್ಷಿಸು.
ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ
    ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ.

ಜ್ಞಾನೋಕ್ತಿಗಳು 14:12-31

12 ಒಳ್ಳೆಯದೆಂದು ಜನರು ಭಾವಿಸಿಕೊಂಡಿರುವ ಮಾರ್ಗವೊಂದುಂಟು. ಆದರೆ ಅದರ ಅಂತ್ಯ ಮರಣವೇ.

13 ಒಬ್ಬನು ನಗುತ್ತಿರುವಾಗಲೂ ವ್ಯಸನದಿಂದಿರಲು ಸಾಧ್ಯ. ಅಂತೆಯೇ ಆನಂದವೂ ದುಃಖದಲ್ಲಿ ಅಂತ್ಯವಾಗಬಹುದು.

14 ದುಷ್ಟರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ಸಂಪೂರ್ಣವಾಗಿ ದಂಡನೆ ಅನುಭವಿಸುವರು. ಆದರೆ ಸಜ್ಜನರು ತಮ್ಮ ಒಳ್ಳೆಯಕಾರ್ಯಗಳಿಗೆ ಸಂಪೂರ್ಣವಾಗಿ ಪ್ರತಿಫಲ ಪಡೆಯುವರು.

15 ಮೂಢನು ತಾನು ಕೇಳಿದ್ದನ್ನೆಲ್ಲ ನಂಬುವನು. ಆದರೆ ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.

16 ಜ್ಞಾನಿಯು ಎಚ್ಚರವಾಗಿದ್ದು ಆಪತ್ತಿನಿಂದ ದೂರವಿರುತ್ತಾನೆ. ಜ್ಞಾನಹೀನನಾದರೋ ಸೊಕ್ಕಿನಿಂದ ಯೋಚಿಸದೆ ಕಾರ್ಯಗಳನ್ನು ಮಾಡುತ್ತಾನೆ.

17 ಮುಂಗೋಪಿಯು ಮೂಢಕಾರ್ಯಗಳನ್ನು ಮಾಡುವನು. ಕುತಂತ್ರಿಗಳನ್ನು ಜನರು ದ್ವೇಷಿಸುವರು.

18 ದಡ್ಡರಿಗೆ ಮೂಢತನವೇ ಪ್ರತಿಫಲ. ಜಾಣರಾದರೋ ಜ್ಞಾನವೆಂಬ ಕಿರೀಟವನ್ನು ಹೊಂದುವರು.

19 ಕೊನೆಯಲ್ಲಿ ಕೆಟ್ಟವರ ಮೇಲೆ ಒಳ್ಳೆಯವರು ಜಯಗಳಿಸುವರು. ಕೆಟ್ಟವರು ಬಲವಂತದಿಂದ ಒಳ್ಳೆಯವರ ಮುಂದೆ ತಲೆಬಾಗುವರು.

20 ಬಡವನು ತನ್ನ ನೆರೆಯವನಿಂದಲೂ ತಿರಸ್ಕರಿಸಲ್ಪಡುವನು. ಐಶ್ವರ್ಯವಂತನಿಗಾದರೋ ಅನೇಕ ಮಂದಿ ಸ್ನೇಹಿತರು.

21 ನೆರೆಯವರನ್ನು ತಿರಸ್ಕರಿಸುವುದು ತಪ್ಪು. ನೀವು ಸಂತೋಷದಿಂದ ಇರಬೇಕಾದರೆ ಬಡವರಿಗೆ ದಯೆತೋರಿಸಿ.

22 ದುರ್ಮಾರ್ಗಿಯು ದಾರಿ ತಪ್ಪುವನು. ಒಳ್ಳೆಯದನ್ನು ಮಾಡಲು ಪ್ರಯತ್ನಿಸುವವನು ಪ್ರೀತಿಗೂ ಭರವಸೆಗೂ ಪಾತ್ರನಾಗುವನು.

23 ಕಷ್ಟಪಟ್ಟು ದುಡಿದರೆ, ಸಮೃದ್ಧಿಯಿರುವುದು. ಕೇವಲ ಮಾತಾಡಿದರೆ ಬಡತನ ಬರುವುದು.

24 ಜ್ಞಾನಿಗಳಿಗೆ ದೊರೆಯುವ ಪ್ರತಿಫಲ ಐಶ್ವರ್ಯ. ಜ್ಞಾನಹೀನರಿಗೆ ದೊರೆಯುವ ಪ್ರತಿಫಲ ಮೂಢತನ.

25 ಸತ್ಯವನ್ನಾಡುವವನು ಬೇರೆಯವರಿಗೆ ಸಹಾಯಿಸುತ್ತಾನೆ. ಸುಳ್ಳುಗಾರನಾದರೋ ಮತ್ತೊಬ್ಬನಿಗೆ ನೋವನ್ನುಂಟು ಮಾಡುತ್ತಾನೆ.

26 ಯೆಹೋವನಲ್ಲಿ ಭಯಭಕ್ತಿಯುಳ್ಳವನು ಕ್ಷೇಮವಾಗಿರುವನು; ಅವನ ಮಕ್ಕಳು ಸಹ ಕ್ಷೇಮವಾಗಿರುವರು.

27 ಯೆಹೋವನಲ್ಲಿರುವ ಭಯಭಕ್ತಿ ಜೀವದ ಬುಗ್ಗೆ. ಅದು ಮನುಷ್ಯನನ್ನು ಮರಣದ ಬಲೆಯಿಂದ ಕಾಪಾಡುತ್ತದೆ.

28 ಅಧಿಕ ಜನಸಂಖ್ಯೆಯು ರಾಜನಿಗೆ ಗೌರವ. ಪ್ರಜೆಗಳೇ ಇಲ್ಲದಿದ್ದರೆ ರಾಜನಿಗೆ ಬೆಲೆಯೇ ಇಲ್ಲ.

29 ತಾಳ್ಮೆಯುಳ್ಳವನು ತುಂಬಾ ಜಾಣ. ಮುಂಗೋಪಿಯು ತಾನು ಮೂಢ ಎಂಬುದನ್ನು ತೋರಿಸಿಕೊಳ್ಳುತ್ತಾನೆ.

30 ಮನಶ್ಯಾಂತಿಯುಳ್ಳವನ ದೇಹವು ಆರೋಗ್ಯದಿಂದಿರುವುದು. ಹೊಟ್ಟೆಕಿಚ್ಚು ದೇಹಕ್ಕೆ ಕಾಯಿಲೆಯನ್ನು ಬರಮಾಡುವುದು.

31 ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನಿಗೇ ಅವಮಾನ ಮಾಡುತ್ತಾನೆ. ಬಡವರಿಗೆ ಕರುಣೆ ತೋರುವವನು ತನ್ನ ಸೃಷ್ಟಿಕರ್ತನನ್ನೇ ಸನ್ಮಾನಿಸುತ್ತಾನೆ.

ಅಪೊಸ್ತಲರ ಕಾರ್ಯಗಳು 4:1-12

ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ

ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.

ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.

ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!

11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
    ಮುಖ್ಯವಾದ ಮೂಲೆಗಲ್ಲಾಯಿತು.’(A)

12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International