Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಆಮೋಸ 8:4-7

ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ

ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
    ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
ವರ್ತಕರಾದ ನೀವು ಹೇಳುವುದೇನೆಂದರೆ,
    “ಅಮಾವಾಸ್ಯೆ ಯಾವಾಗ ಮುಗಿಯುವುದು?
    ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
    ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
    ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
    ಜನರಿಗೆ ಮೋಸ ಮಾಡುವೆವು.
ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
    ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
    ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
    ಒಟ್ಟುಗೂಡಿಸಿ ಮಾರೋಣ.”

ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.

“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.

ಕೀರ್ತನೆಗಳು 113

113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
ಪೂರ್ವದಿಂದಿಡಿದು ಪಶ್ಚಿಮದವರೆಗೂ
    ಯೆಹೋವನ ಹೆಸರು ಸ್ತುತಿಸಲ್ಪಡಲಿ.
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
    ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
    ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
ಆತನು ಆಕಾಶವನ್ನೂ
    ಭೂಮಿಯನ್ನೂ ಬಾಗಿ ನೋಡುವನು.
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
    ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
ಆತನು ಅವರನ್ನು ಪ್ರಮುಖರನ್ನಾಗಿಯೂ
    ನಾಯಕರುಗಳನ್ನಾಗಿಯೂ ಮಾಡುವನು.
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
    ಸಂತೋಷಪಡಿಸುವನು.

ಯೆಹೋವನಿಗೆ ಸ್ತೋತ್ರವಾಗಲಿ!

1 ತಿಮೊಥೆಯನಿಗೆ 2:1-7

ಪ್ರಾರ್ಥನೆ ಮತ್ತು ಸಭಾಕೂಟಗಳ ಬಗ್ಗೆ ಕೆಲವು ಸಲಹೆಗಳು

ಮೊಟ್ಟ ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಎಲ್ಲಾ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ, ವಿಜ್ಞಾಪಿಸಿರಿ, ಅವರ ಅಗತ್ಯಕ್ಕೆ ತಕ್ಕಂತೆ ಬಿನ್ನಹ ಮಾಡಿರಿ ಮತ್ತು ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ. ನಮ್ಮಲ್ಲಿ ಶಾಂತಿ ಸಮಾಧಾನಗಳು ನೆಲಸಿ ನಾವು ದೇವರನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಆರಾಧಿಸಲು ಸಾಧ್ಯವಾಗುವಂತೆ ಅರಸರಿಗಾಗಿಯೂ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಿರಿ. ಇದು ಒಳ್ಳೆಯದೂ ಮತ್ತು ನಮ್ಮ ರಕ್ಷಕನಾದ ದೇವರಿಗೆ ಮೆಚ್ಚಿಕೆಕರವೂ ಆಗಿದೆ.

ಎಲ್ಲಾ ಜನರು ರಕ್ಷಿಸಲ್ಪಡಬೇಕೆಂದು, ಸತ್ಯವನ್ನು ತಿಳಿದು ಕೊಳ್ಳಬೇಕೆಂದು ದೇವರು ಬಯಸುತ್ತಾನೆ. ದೇವರು ಒಬ್ಬನೇ. ದೇವರಿಗೂ ಮನುಷ್ಯರಿಗೂ ಮಧ್ಯಸ್ತನು ಒಬ್ಬನೇ. ಮನುಷ್ಯನಾಗಿರುವ ಯೇಸುಕ್ರಿಸ್ತನೇ ಆತನು. ಯೇಸುವು ಜನರೆಲ್ಲರ ಪಾಪಗಳಿಗೆ ತನ್ನನ್ನೇ ಉಚಿತವಾಗಿ ಒಪ್ಪಿಸಿಕೊಟ್ಟನು. ಜನರೆಲ್ಲರೂ ರಕ್ಷಣೆ ಹೊಂದಬೇಕೆಂಬ ದೇವರ ಅಪೇಕ್ಷೆಗೆ ಯೇಸುವು ತಕ್ಕಕಾಲದಲ್ಲಿ ಸಾಕ್ಷಿನೀಡಿದನು. ಆದ ಕಾರಣವೇ ಸುವಾರ್ತೆಯನ್ನು ಸಾರುವುದಕ್ಕಾಗಿಯೂ ಅಪೊಸ್ತಲನಾಗುವುದಕ್ಕಾಗಿಯೂ ಯೆಹೂದ್ಯರಲ್ಲದ ಜನರಿಗೆ ಬೋಧಿಸುವುದಕ್ಕಾಗಿಯೂ ನನ್ನನ್ನು ಆರಿಸಿಕೊಳ್ಳಲಾಯಿತು. (ಇದು ಸತ್ಯ, ಖಂಡಿತವಾಗಿಯೂ ಸುಳ್ಳಲ್ಲ.) ಸತ್ಯವನ್ನು ತಿಳಿದುಕೊಳ್ಳಬೇಕೆಂತಲೂ ನಂಬಬೇಕೆಂತಲೂ ನಾನು ಅವರಿಗೆ ಬೋಧಿಸುತ್ತೇನೆ.

ಲೂಕ 16:1-13

ನಿಜವಾದ ಐಶ್ವರ್ಯ

16 ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು. ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.

“ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ. ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.

“ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು. ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.

“ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.

“ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.

“ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು. 11 ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ. 12 ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.

13 “ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International