Revised Common Lectionary (Complementary)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
8 ನೀವು ಒಬ್ಬರಿಗೊಬ್ಬರು ಸಮೀಪದಲ್ಲಿ ವಾಸಿಸುತ್ತೀರಿ. ಬೇರೆ ಯಾವುದಕ್ಕೂ ಸ್ಧಳ ಸಿಗದಂತೆ ನೀವು ಹತ್ತಿರಹತ್ತಿರವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತೀರಿ. ಆದರೆ ಯೆಹೋವನು ನಿಮ್ಮನ್ನು ಶಿಕ್ಷಿಸಿ ಇಡೀ ದೇಶದಲ್ಲಿಯೇ ನೀವು ಒಬ್ಬಂಟಿಗರಾಗಿ ವಾಸಿಸುವಂತೆ ಮಾಡುವನು. 9 ಸರ್ವಶಕ್ತನಾದ ಯೆಹೋವನ ನುಡಿಗಳಿವು. ನಾನು ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ಈಗ ಅನೇಕ ಮನೆಗಳಿವೆ, ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಎಲ್ಲಾ ಮನೆಗಳು ಕೆಡವಲ್ಪಡುವವು. ಈಗ ಭವ್ಯವಾದ ಬಂಗಲೆಗಳಿವೆ, ಆದರೆ ಅವುಗಳೆಲ್ಲಾ ಬರಿದಾಗುವವು. 10 ಆ ದಿವಸಗಳಲ್ಲಿ ಹತ್ತು ಎಕರೆ ವಿಶಾಲವಾದ ದ್ರಾಕ್ಷಿತೋಟದಲ್ಲಿ ಸ್ವಲ್ಪ ಮಾತ್ರವೇ ದ್ರಾಕ್ಷಾರಸವು ದೊರಕುವದು. ಅನೇಕ ಚೀಲ ಬೀಜವನ್ನು ಬಿತ್ತಿದರೆ ಸ್ವಲ್ಪ ಧಾನ್ಯ ಮಾತ್ರ ಸಿಗುವುದು.”
11 ನೀವು ಮುಂಜಾನೆ ಎದ್ದು ಮದ್ಯಕ್ಕಾಗಿ ಹುಡುಕಾಡುವಿರಿ. ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಕುಡಿದು ಮತ್ತರಾಗುವಿರಿ. 12 ನೀವು ಕುಡಿಯುತ್ತಾ ಹಾರ್ಪ್‌ವಾದ್ಯಗಳನ್ನೂ ದಮ್ಮಡಿಗಳನ್ನೂ ಕೊಳಲುಗಳನ್ನೂ ಬಾರಿಸುತ್ತಾ ನೃತ್ಯಮಾಡುವಿರಿ. ಆದರೆ ಯೆಹೋವನು ಮಾಡಿದ ಕಾರ್ಯಗಳನ್ನು ನೀವು ಗಮನಿಸುವುದಿಲ್ಲ. ಯೆಹೋವನ ಹಸ್ತವು ಅನೇಕಾನೇಕ ಕಾರ್ಯಗಳನ್ನು ಮಾಡಿದೆ. ಆದರೆ ನೀವು ಅವುಗಳನ್ನು ಲಕ್ಷಿಸುವುದಿಲ್ಲ. ಆದ್ದರಿಂದ ನಿಮಗೆ ಕೇಡಾಗುವುದು.
13 ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. ಯಾಕೆಂದರೆ ಅವರು ನಿಜವಾಗಿಯೂ ನನ್ನನ್ನು ಅರಿತಿಲ್ಲ. ಇಸ್ರೇಲಿನಲ್ಲಿ ವಾಸಿಸುವ ಕೆಲವು ಜನರು ಈಗ ಪ್ರಮುಖರಾಗಿದ್ದಾರೆ. ತಮ್ಮ ಸುಖಜೀವಿತದಲ್ಲಿ ಆನಂದಿಸುತ್ತಾರೆ. ಆದರೆ ಆ ಗಣ್ಯವ್ಯಕ್ತಿಗಳೆಲ್ಲಾ ಬಾಯಾರಿಕೆಯಿಂದಲೂ ಹಸಿವೆಯಿಂದಲೂ ನರಳುವರು. 14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.”
15 ಆ ಜನರು ತಗ್ಗಿಸಲ್ಪಡುವರು. ಆ ಗಣ್ಯವ್ಯಕ್ತಿಗಳು ತಮ್ಮ ತಲೆಗಳನ್ನು ಕೆಳಗೆ ಮಾಡಿ ನೆಲದ ಕಡೆಗೆ ನೋಡುವರು. 16 ಸರ್ವಶಕ್ತನಾದ ಯೆಹೋವನು ನೀತಿಯಿಂದ ನ್ಯಾಯತೀರಿಸುವನು. ಯೆಹೋವನು ಉನ್ನತೋನ್ನತನೆಂದು ಜನರೆಲ್ಲರೂ ಅರಿತುಕೊಳ್ಳುವರು. ಪರಿಶುದ್ಧನಾದ ದೇವರು ನ್ಯಾಯವಾದದ್ದನ್ನೇ ಮಾಡುವನು. ಜನರು ಆತನನ್ನು ಗೌರವಿಸುವರು. 17 ಆತನು ಇಸ್ರೇಲ್ ದೇಶದ ಜನರನ್ನು ದೇಶಭ್ರಷ್ಟರನ್ನಾಗಿ ಮಾಡುವನು. ಆಗ ದೇಶವು ಬರಿದಾಗುವುದು. ಕುರಿಗಳು ತಮ್ಮ ಮನಸ್ಸು ಬಂದೆಡೆಗೆ ಹೋಗುವವು. ಐಶ್ವರ್ಯವಂತರಿಗೆ ಸೇರಿದ್ದ ಜಮೀನಿನ ಮೇಲೆ ಕುರಿಮರಿಗಳು ನಡೆದಾಡುವವು.
18 ಆ ಜನರನ್ನು ನೋಡಿರಿ. ಜನರು ಹಗ್ಗಗಳಿಂದ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಅವರು ತಮ್ಮ ಪಾಪಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ. 19 ಅವರು, “ದೇವರು ತಾನು ಮಾಡಲಿಕ್ಕಿರುವುದನ್ನು ಬೇಗನೇ ಮಾಡಿಮುಗಿಸಲಿ. ಆಗ ಏನಾಗುವದೋ ನೋಡೋಣ. ಆತನ ಯೋಜನೆ ಬೇಗನೆ ಕಾರ್ಯರೂಪಕ್ಕೆ ಬರಲಿ. ಆಗ ಆತನ ಯೋಜನೆ ಏನೆಂಬುದು ನಮಗೆ ತಿಳಿಯುವುದು” ಎಂದು ಹೇಳುತ್ತಿದ್ದಾರೆ.
20 ಆ ಜನರು ಒಳ್ಳೆಯವುಗಳನ್ನು ಕೆಟ್ಟವುಗಳೆಂದೂ ಕೆಟ್ಟವುಗಳನ್ನು ಒಳ್ಳೆಯವುಗಳೆಂದೂ ಹೇಳುತ್ತಾರೆ. ಅವರು ಬೆಳಕನ್ನು ಕತ್ತಲೆಯೆಂದೂ ಕತ್ತಲೆಯನ್ನು ಬೆಳಕೆಂದೂ ಅನ್ನುತ್ತಾರೆ. ಅವರು ಸಿಹಿಯನ್ನು ಕಹಿಯೆಂದೂ ಕಹಿಯನ್ನು ಸಿಹಿಯೆಂದೂ ಹೇಳುವರು. 21 ಅವರು ತಾವು ತುಂಬಾ ಬುದ್ಧಿವಂತರೆಂದೂ ಜ್ಞಾನಿಗಳೆಂದೂ ಹೇಳಿಕೊಳ್ಳುವರು. 22 ಅವರು ಮದ್ಯವನ್ನು ಬೆರೆಸುವುದರಲ್ಲಿ ಪರಿಣಿತರು; ಮದ್ಯಸೇವನೆ ಮಾಡುವದಕ್ಕೆ ಹೆಸರಾದವರು. 23 ಅವರಿಗೆ ಹಣಕೊಟ್ಟರೆ, ಅಪರಾಧಿಯನ್ನೂ ಬಿಟ್ಟುಬಿಡುವರು; ಆದರೆ ಒಳ್ಳೆಯವರಿಗೆ ಸರಿಯಾದ ನ್ಯಾಯತೀರ್ಪು ದೊರಕಲು ಅವರು ಅವಕಾಶ ಕೊಡುವುದಿಲ್ಲ.
ಬಡವಿಧವೆಯ ಕಾಣಿಕೆ
(ಲೂಕ 21:1-4)
41 ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳ ಎದುರಿನಲ್ಲಿ ಕುಳಿತಿದ್ದಾಗ, ಜನರು ಪೆಟ್ಟಿಗೆಯಲ್ಲಿ ಹಣ ಹಾಕುವುದನ್ನು ಗಮನಿಸಿದನು. ಅನೇಕ ಶ್ರೀಮಂತ ಜನರು ಹೆಚ್ಚು ಹಣವನ್ನು ಕೊಟ್ಟರು. 42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು[a] ಅಂದರೆ ಒಂದು ಪೈಸೆಯನ್ನು ಹಾಕಿದಳು.
43 ಯೇಸು ತನ್ನ ಶಿಷ್ಯರನ್ನು ಬಳಿಗೆ ಕರೆದು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕಾಣಿಕೆ ಹಾಕಿದವರೆಲ್ಲರಲ್ಲಿ ಈ ಬಡವಿಧವೆ ಹೆಚ್ಚು ಹಾಕಿದ್ದಾಳೆ. 44 ಉಳಿದವರಾದರೊ ತಮಗೆ ಸಾಕಾಗಿ ಉಳಿದದ್ದರಲ್ಲಿ ಸ್ವಲ್ಪ ಹಾಕಿದರು. ಈಕೆಯಾದರೊ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲ ಕೊಟ್ಟುಬಿಟ್ಟಳು. ಈಕೆಗೆ ಆ ಹಣದ ಅಗತ್ಯವಿತ್ತು” ಎಂದನು.
Kannada Holy Bible: Easy-to-Read Version. All rights reserved. © 1997 Bible League International