Revised Common Lectionary (Complementary)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
ಇಸ್ರೇಲ್ ಉಪಯೋಗವಿಲ್ಲದ ಹೊಲಸು
17 ಯೆಹೋವನ ವಾಕ್ಯವು ನನಗೆ ಬಂತು. ಆತನು ಹೀಗೆಂದನು: 18 “ನರಪುತ್ರನೇ, ಇಸ್ರೇಲ್ ಜನಾಂಗವು ನನ್ನ ಪಾಲಿಗೆ ನಿಷ್ಪ್ರಯೋಜಕವಾಗಿದೆ. ಅವರು ತಾಮ್ರದಂತೆ, ತವರದಂತೆ, ಕಬ್ಬಿಣದಂತೆ ಮತ್ತು ಸೀಸದಂತೆ ಮತ್ತು ಬೆಳ್ಳಿಯನ್ನು ಕುಲುಮೆಯಲ್ಲಿ ಕರಗಿಸಿ ಶುದ್ಧೀಕರಿಸಿದಾಗ ಉಳಿಯುವ ಕಂದುಬೆಳ್ಳಿಯಂತೆ ಇದ್ದಾರೆ. 19 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ. ‘ನೀವೆಲ್ಲರೂ ಪ್ರಯೋಜನವಿಲ್ಲದ ಲೋಹವಾಗಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಜೆರುಸಲೇಮಿನೊಳಗೆ ಒಟ್ಟುಗೂಡಿಸುತ್ತೇನೆ. 20 ಕೆಲಸಗಾರರು ಬೆಳ್ಳಿ, ತಾಮ್ರ, ಸೀಸ, ತವರ, ಕಬ್ಬಿಣ ಇವುಗಳನ್ನೆಲ್ಲಾ ಬೆಂಕಿಗೆ ಹಾಕುವರು. ಬೆಂಕಿಯನ್ನೂದಿ ಶಾಖ ಹೆಚ್ಚು ಮಾಡುವರು. ಆಗ ಲೋಹಗಳು ಕರಗಲು ಪ್ರಾರಂಭವಾಗುವವು. ಅದೇ ರೀತಿಯಲ್ಲಿ ನಾನು ನಿಮ್ಮನ್ನು ನನ್ನ ಬೆಂಕಿಯಲ್ಲಿ ಹಾಕಿ ಕರಗಿಸುವೆನು. ನನ್ನ ರೌದ್ರವೇ ಆ ಬೆಂಕಿ. 21 ನಾನು ನಿಮ್ಮನ್ನು ಆ ಬೆಂಕಿಯಲ್ಲಿ ಹಾಕುವೆನು. ನನ್ನ ರೌದ್ರವೆಂಬ ಬೆಂಕಿಯನ್ನು ಊದಿ ಶಾಖ ಹೆಚ್ಚಿಸುವೆನು. ಆಗ ನೀವು ಕರಗಲು ಪ್ರಾರಂಭಿಸುವಿರಿ. 22 ಬೆಳ್ಳಿಯು ಕುಲುಮೆಯಲ್ಲಿ ಕರಗಿಹೋಗುವಂತೆಯೇ ನೀವು ಪಟ್ಟಣದಲ್ಲಿ ಕರಗಿಹೋಗುವಿರಿ. ಯೆಹೋವನಾದ ನಾನೇ ನನ್ನ ಕೋಪವನ್ನು ನಿಮ್ಮ ಮೇಲೆ ಸುರಿದೆನೆಂದು ಆಗ ನೀವು ಅರ್ಥಮಾಡಿಕೊಳ್ಳುವಿರಿ.’”
ಜೆರುಸಲೇಮ್ ವಿರುದ್ಧ ಯೆಹೆಜ್ಕೇಲನ ಮಾತುಗಳು
23 ಯೆಹೋವನ ವಾಕ್ಯವು ನನಗೆ ಬಂದಿತು. ಆತನು, 24 “ನರಪುತ್ರನೇ, ಇದನ್ನು ಜೆರುಸಲೇಮಿಗೆ ಹೇಳು. ಮಳೆಯನ್ನೇ ಪಡೆದಿಲ್ಲದ ಭೂಮಿಯಂತೆ ಆಕೆ ಇದ್ದಾಳೆಂದು ಆಕೆಗೆ ತಿಳಿಸು. ನನ್ನ ಕೋಪದ ಸಮಯದಲ್ಲಿ ಆಕೆಯ ಮೇಲೆ ಮಳೆಯೇ ಸುರಿದಿಲ್ಲ. 25 ಜೆರುಸಲೇಮಿನ ಪ್ರವಾದಿಗಳು ತಾನು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುವ ಗರ್ಜಿಸುವ ಸಿಂಹದಂತಿದ್ದಾರೆ. ಆ ಪ್ರವಾದಿಗಳು ಅನೇಕ ಪ್ರಾಣಗಳನ್ನು ತೆಗೆದುಕೊಂಡಿದ್ದಾರೆ. ಅವರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡಿದ್ದಾರೆ. ಜೆರುಸಲೇಮಿನಲ್ಲಿ ಅನೇಕ ಸ್ತ್ರೀಯರು ವಿಧವೆಯರಾಗಲು ಅವರೇ ಕಾರಣರಾಗಿದ್ದಾರೆ.
26 “ಯಾಜಕರು ನನ್ನ ಉಪದೇಶವನ್ನು ನಿರಾಕರಿಸಿರುತ್ತಾರೆ; ಪರಿಶುದ್ಧ ವಸ್ತುಗಳನ್ನು ಸರಿಯಾಗಿ ಲಕ್ಷ್ಯ ಮಾಡುತ್ತಿಲ್ಲ; ಅವುಗಳಿಗೆ ಮಹತ್ವವನ್ನು ಕೊಡುತ್ತಿಲ್ಲ. ಅವರು ಪವಿತ್ರ ವಸ್ತುಗಳನ್ನು ಅಪವಿತ್ರ ವಸ್ತುಗಳಂತೆ ನೋಡುತ್ತಿದ್ದಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದರ ಬಗ್ಗೆ ಅವರು ಜನರಿಗೆ ಸರಿಯಾಗಿ ಉಪದೇಶಿಸುತ್ತಿಲ್ಲ. ನನ್ನ ವಿಶೇಷ ವಿಶ್ರಾಂತಿ ದಿವಸಗಳನ್ನು ಮಾನ್ಯ ಮಾಡುತ್ತಿಲ್ಲ. ನಾನು ಏನೂ ಅಲ್ಲವೆಂಬಂತೆ ನನ್ನನ್ನು ಅವರು ನೋಡುತ್ತಾರೆ.
27 “ಜೆರುಸಲೇಮಿನ ನಾಯಕರು ತಾನು ಹಿಡಿದ ಪ್ರಾಣಿಯನ್ನು ತಿನ್ನುವ ತೋಳಕ್ಕೆ ಸಮಾನರಾಗಿದ್ದಾರೆ. ಅವರು ಧನಿಕರಾಗುವದಕ್ಕಾಗಿ ಜನರನ್ನು ಹಿಡಿದು ಕೊಲ್ಲುವರು.
28 “ಪ್ರವಾದಿಗಳು ಜನರನ್ನು ಎಚ್ಚರಿಸುವದಿಲ್ಲ. ಸತ್ಯವನ್ನು ಮುಚ್ಚಿಡುತ್ತಾರೆ. ಒಂದು ಗೋಡೆಯನ್ನು ದುರಸ್ತಿ ಮಾಡದೆ ಅದರ ರಂಧ್ರಗಳನ್ನು ಗಾರೆಯಿಂದ ಮುಚ್ಚುವ ಕೆಲಸಗಾರರಂತಿದ್ದಾರೆ. ಅವರು ಸುಳ್ಳುದರ್ಶನಗಳನ್ನೆ ನೋಡುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಶಕುನದ ಮೂಲಕ ತಿಳಿದುಕೊಳ್ಳುವುದೆಲ್ಲ ಸುಳ್ಳಾಗಿರುತ್ತದೆ. ಅವರು, ‘ನನ್ನ ಒಡೆಯನಾದ ಯೆಹೋವನು ಹೇಳಿದನು’ ಎಂಬುದಾಗಿ ಸುಳ್ಳು ಹೇಳುವರು. ಆದರೆ ನಿಜವಾಗಿಯೂ ಯೆಹೋವನು ಅವರ ಕೂಡ ಮಾತನಾಡಲಿಲ್ಲ.
29 “ಸಾಮಾನ್ಯ ಜನರು ಮೋಸ ಮಾಡುತ್ತಾರೆ ಮತ್ತು ದರೋಡೆ ಮಾಡುತ್ತಾರೆ. ತಾವು ಧನಿಕರಾಗುವದಕ್ಕೆ ನಿಸ್ಸಹಾಯಕರಾದ ಭಿಕ್ಷೆಗಾರರನ್ನು ಸುಲುಕೊಳ್ಳುವರು. ಅವರು ಪರದೇಶಿಗಳಿಗೆ ಮೋಸಮಾಡಿ ಅವರಿಗೆ ಅನ್ಯಾಯ ಮಾಡುವರು.
30 “ನನ್ನ ಕೋಪದಿಂದ ದೇಶವು ನಾಶವಾಗದಂತೆ ಅದನ್ನು ರಕ್ಷಿಸಲು ಗೋಡೆಯನ್ನು ಸರಿಪಡಿಸುವುದಕ್ಕಾಗಿಯೂ ಗೋಡೆಯು ಒಡೆದುಹೋಗಿದ್ದ ಸ್ಥಳದಲ್ಲಿ ನಿಂತುಕೊಳ್ಳುವುದಕ್ಕಾಗಿ ಅವರಲ್ಲಿ ನಾನು ಒಬ್ಬನನ್ನು ಎದುರುನೋಡಿದೆ. ಆದರೆ ಯಾರೂ ನನಗೆ ಸಿಗಲಿಲ್ಲ. 31 ಅದಕ್ಕಾಗಿ ನಾನು ಅವರಿಗೆ ನನ್ನ ಕೋಪವನ್ನು ತೋರಿಸುವೆನು. ಅವರ ದುಷ್ಟತನಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರೇ ಅದಕ್ಕೆ ಜವಾಬ್ದಾರರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ
31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)
37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.
Kannada Holy Bible: Easy-to-Read Version. All rights reserved. © 1997 Bible League International