Revised Common Lectionary (Complementary)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
23 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.
2 “ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.
3 “ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.
4 “ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲೀಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.
5 “ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.
6 “ಬಡವರಿಗೆ ವ್ಯಾಜ್ಯದಲ್ಲಿ ನೀವು ಅನ್ಯಾಯವಾದ ತೀರ್ಪನ್ನು ಕೊಡಕೂಡದು.
7 “ನೀವು ಮೋಸದ ಕಾರ್ಯಕ್ಕೆ ದೂರವಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಕೂಡದು. ಅಂಥ ದುಷ್ಟಕಾರ್ಯ ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸೇ ವಿಧಿಸುವೆನು.
8 “ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯ ಮಾಡುತ್ತದೆ.
9 “ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
3 ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? 2 ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. 3 ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? 4 ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:
“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(A)
5 ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) 6 ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.
7 “ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. 8 “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.
Kannada Holy Bible: Easy-to-Read Version. All rights reserved. © 1997 Bible League International