Revised Common Lectionary (Complementary)
ಮೂರನೆ ಭಾಗ
(ಕೀರ್ತನೆಗಳು 73–89)
ಸ್ತುತಿಗೀತೆ. ರಚನೆಗಾರ: ಆಸಾಫ.
73 ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
2 ಆದರೆ ನನ್ನ ಕಾಲುಗಳು ಜಾರಿದವು;
ನನ್ನ ಹೆಜ್ಜೆಗಳು ತಪ್ಪಿದವು.
3 ದುಷ್ಟರ ಏಳಿಗೆಯನ್ನು ಕಂಡು
ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
4 ಅವರು ಆರೋಗ್ಯವಂತರಾಗಿದ್ದಾರೆ.
ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[a]
5 ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
6 ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
ದ್ವೇಷವು ಅವರಿಗೆ ಉಡುಪಾಗಿದೆ.
7 ಅವರ ಕಣ್ಣುಗಳು ಕೊಬ್ಬಿವೆ;
ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
8 ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
9 ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
ಎಂದು ಆ ದುಷ್ಟರು ಹೇಳಿಕೊಳ್ಳುವರು.
12 ಆ ಗರ್ವಿಷ್ಠರು ದುಷ್ಟರೇ ಸರಿ!
ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
ನೀನು ಅವರನ್ನು ಮಾಯಗೊಳಿಸುವೆ.
21-22 ನಾನು ಬಹು ಮೂಢನಾಗಿದ್ದೆ.
ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.
6 ಆಗ ಯೆಹೋವನು ಬಿರುಗಾಳಿಯೊಳಗಿಂದ ಮತ್ತೆ ಯೋಬನೊಂದಿಗೆ ಮಾತಾಡಿ ಹೀಗೆಂದನು:
7 “ಯೋಬನೇ, ನಡುಕಟ್ಟಿಕೊಂಡು ಎದ್ದುನಿಂತುಕೊ!
ನಾನು ನಿನಗೆ ಕೆಲವು ಪ್ರಶ್ನೆಗಳನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.
8 “ಯೋಬನೇ, ನನ್ನ ನೀತಿಯನ್ನು ಖಂಡಿಸುವಿಯಾ?
ನಿನ್ನನ್ನು ನಿರಪರಾಧಿಯೆಂದು ನಿರೂಪಿಸಲು ನನ್ನನ್ನು ದೋಷಿಯೆಂದು ಪರಿಗಣಿಸುವೆಯಾ?
9 ನಿನ್ನ ತೋಳುಗಳು ನನ್ನ ತೋಳುಗಳಂತೆ ಬಲಿಷ್ಠವಾಗಿವೆಯೋ?
ನಿನ್ನ ಸ್ವರವನ್ನು ನನ್ನ ಸ್ವರದಂತೆ ಗಟ್ಟಿಯಾಗಿ ಗುಡುಗುಟ್ಟಿಸಬಲ್ಲೆಯಾ?
10 ನೀನು ದೇವರಂತಿದ್ದರೆ ಹೆಮ್ಮೆಪಡು!
ನೀನು ದೇವರಂತಿದ್ದರೆ ಘನತೆಯನ್ನೂ ಮಹಿಮೆಯನ್ನೂ ವಸ್ತ್ರಗಳಂತೆ ಧರಿಸಿಕೋ.
11 ನೀನು ದೇವರಂತಿದ್ದರೆ, ನಿನ್ನ ಕೋಪವನ್ನು ತೋರಿ ಗರ್ವಿಷ್ಠರನ್ನು ದಂಡಿಸು;
ಅವರನ್ನು ದೀನರನ್ನಾಗಿ ಮಾಡು.
12 ಆ ಗರ್ವಿಷ್ಠರ ಕಡೆಗೆ ನೋಡಿ ಅವರನ್ನು ದೀನರನ್ನಾಗಿ ಮಾಡು.
ದುಷ್ಟರನ್ನು ಅವರು ನಿಂತಿರುವಲ್ಲಿಯೇ ಜಜ್ಜಿಹಾಕು.
13 ಗರ್ವಿಷ್ಠರನ್ನೆಲ್ಲಾ ಧೂಳಿನಲ್ಲಿ ಸಮಾಧಿಮಾಡು;
ಅವರ ದೇಹಗಳನ್ನು ಸುತ್ತಿ ಅವರ ಸಮಾಧಿಗಳೊಳಗೆ ಹಾಕು.
14 ಯೋಬನೇ, ನೀನು ಇವುಗಳನ್ನೆಲ್ಲಾ ಮಾಡಶಕ್ತನಾಗಿದ್ದರೆ,
ನಿನ್ನನ್ನು ರಕ್ಷಿಸಿಕೊಳ್ಳಬಲ್ಲೆ ಎಂದು ನಿನ್ನನ್ನು ನಾನೇ ಹೊಗಳುವೆನು.
ಯೆಹೋವನಿಗೆ ಯೋಬನ ಉತ್ತರ
42 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು:
2 “ಯೆಹೋವನೇ, ನೀನು ಪ್ರತಿಯೊಂದನ್ನೂ ಮಾಡಬಲ್ಲೆ ಎಂದು ನನಗೆ ಗೊತ್ತಿದೆ.
ನೀನು ಮಾಡಿದ ಆಲೋಚನೆಗಳನ್ನು ಯಾವುದೂ ಬದಲಿಸಲಾರದು; ಯಾವುದೂ ನಿಲ್ಲಿಸಲಾರದು.
3 ಯೆಹೋವನೇ, ‘ಈ ಮೂರ್ಖ ಸಂಗತಿಗಳನ್ನು ಹೇಳುತ್ತಿರುವ ಈ ಮೂಢನು ಯಾರು?’ ಎಂದು ನೀನು ಪ್ರಶ್ನಿಸಿದೆ.
ನನಗೆ ಅರ್ಥವಾಗಿಲ್ಲದ ಸಂಗತಿಗಳ ಬಗ್ಗೆಯೂ
ನಾನು ತಿಳಿಯಲಾಗದಷ್ಟು ಆಶ್ಚರ್ಯಕರವಾದ ಅದ್ಭುತಕಾರ್ಯಗಳ ಬಗ್ಗೆಯೂ ನಾನು ಮಾತಾಡಿದ್ದೇನೆ.
4 “ಯೆಹೋವನೇ, ನೀನು ನನಗೆ, ‘ಯೋಬನೇ, ಆಲಿಸು; ನಾನು ಮಾತಾಡುತ್ತೇನೆ.
ನಾನು ನಿನಗೆ ಪ್ರಶ್ನೆಗಳನ್ನು ಕೇಳುತ್ತೇನೆ; ನೀನು ನನಗೆ ಉತ್ತರಿಸು’ ಎಂದು ಹೇಳಿದೆ.
5 ಯೆಹೋವನೇ, ಮೊದಲಾದರೋ ನಾನು ನಿನ್ನ ಬಗ್ಗೆ ಕೇಳಿದ್ದೆನು;
ಈಗಲಾದರೋ ಕಣ್ಣಾರೆ ನಿನ್ನನ್ನು ಕಂಡಿದ್ದೇನೆ.
6 ಯೆಹೋವನೇ, ನನ್ನ ವಿಷಯದಲ್ಲಿ ನನಗೇ ನಾಚಿಕೆಯಾಗಿದೆ.
ನನಗೆ ಎಷ್ಟೋ ದುಃಖವಾಗಿದೆ.
ನಾನು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಳ್ಳುತ್ತೇನೆ.
ನನ್ನ ಹೃದಯವನ್ನೂ ಜೀವಿತವನ್ನೂ ಮಾರ್ಪಡಿಸಿಕೊಳ್ಳುವುದಾಗಿ ನಾನು ನಿನಗೆ ವಾಗ್ದಾನ ಮಾಡುತ್ತೇನೆ.”
ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!
(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)
31 “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32 ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.
33 ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:57-58,69-75; ಮಾರ್ಕ 14:53-54,66-72; ಯೋಹಾನ 18:12-18,25-27)
54 ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ. 55 ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು. 56 ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.
57 ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.
ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.
59 ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.
60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.
ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61 ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62 ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.
Kannada Holy Bible: Easy-to-Read Version. All rights reserved. © 1997 Bible League International