Revised Common Lectionary (Complementary)
ಮೂರನೆ ಭಾಗ
(ಕೀರ್ತನೆಗಳು 73–89)
ಸ್ತುತಿಗೀತೆ. ರಚನೆಗಾರ: ಆಸಾಫ.
73 ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
2 ಆದರೆ ನನ್ನ ಕಾಲುಗಳು ಜಾರಿದವು;
ನನ್ನ ಹೆಜ್ಜೆಗಳು ತಪ್ಪಿದವು.
3 ದುಷ್ಟರ ಏಳಿಗೆಯನ್ನು ಕಂಡು
ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
4 ಅವರು ಆರೋಗ್ಯವಂತರಾಗಿದ್ದಾರೆ.
ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.[a]
5 ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
6 ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
ದ್ವೇಷವು ಅವರಿಗೆ ಉಡುಪಾಗಿದೆ.
7 ಅವರ ಕಣ್ಣುಗಳು ಕೊಬ್ಬಿವೆ;
ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
8 ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
9 ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
ಎಂದು ಆ ದುಷ್ಟರು ಹೇಳಿಕೊಳ್ಳುವರು.
12 ಆ ಗರ್ವಿಷ್ಠರು ದುಷ್ಟರೇ ಸರಿ!
ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
ನೀನು ಅವರನ್ನು ಮಾಯಗೊಳಿಸುವೆ.
21-22 ನಾನು ಬಹು ಮೂಢನಾಗಿದ್ದೆ.
ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.
ದೇವರ ಕರೆಗೆ ಯೋನನ ವಿಧೇಯತೆ
3 ಯೆಹೋವನು ಯೋನನ ಸಂಗಡ ತಿರುಗಿ ಮಾತನಾಡಿದನು. ಆತನು ಹೇಳಿದ್ದೇನೆಂದರೆ, 2 “ಮಹಾನಗರವಾದ ನಿನೆವೆಗೆ ನೀನು ಎದ್ದುಹೋಗಿ ಅಲ್ಲಿ ನಾನು ಹೇಳಿದ್ದನ್ನು ಅವರಿಗೆ ಸಾರು.”
3 ಯೋನನು ಯೆಹೋವನ ಆಜ್ಞೆಗೆ ವಿಧೇಯನಾಗಿ ನಿನೆವೆಗೆ ಬಂದನು. ನಿನೆವೆಯು ಬಹು ವಿಶಾಲವಾದ ಪಟ್ಟಣ. ಅದು ಮೂರು ದಿನಗಳ ಪ್ರಯಾಣದಷ್ಟು ದೊಡ್ಡದಿತ್ತು.
4 ಯೋನನು ನಗರದ ಮಧ್ಯಕ್ಕೆ ಹೋಗಿ ಜನರಿಗೆ ಸಾರಲಿಕ್ಕೆ ಪ್ರಾರಂಭಿಸಿದನು. “ನಲವತ್ತು ದಿನಗಳು ಕಳೆದ ಬಳಿಕ ನಿನೆವೆಯು ನಾಶವಾಗುವದು” ಎಂದು ಜನರಿಗೆ ಸಾರಿದನು.
5 ನಿನೆವೆಯ ಜನರು ದೇವರಿಂದ ಬಂದ ಸಂದೇಶವನ್ನು ನಂಬಿದರು. ಆ ಜನರು ತಮ್ಮ ಪಾಪಗಳ ಕುರಿತು ಯೋಚಿಸಲು ಉಪವಾಸ ಮಾಡಿದರು. ತಮ್ಮ ಪಶ್ಚಾತ್ತಾಪಕ್ಕೆ ಗುರುತಾಗಿ ಶೋಕವಸ್ತ್ರವನ್ನು ಧರಿಸಿದರು. ನಗರದ ಎಲ್ಲಾ ಜನರು ಹೀಗೆ ಮಾಡಿದರು. ಉನ್ನತ ಅಧಿಕಾರಿಗಳಿಂದ ಹಿಡಿದು ಕೀಳು ಜನರ ತನಕ ಹಾಗೆ ಮಾಡಿದರು.
6 ನಿನೆವೆಯ ಅರಸನು ಇದನ್ನು ಕೇಳಿ ತಾನು ಮಾಡಿದ ದುಷ್ಕೃತ್ಯಗಳಿಗಾಗಿ ಮನಮರುಗಿದನು. ತಾನು ಸಿಂಹಾಸನದಿಂದಿಳಿದು ರಾಜವಸ್ತ್ರವನ್ನು ತೆಗೆದಿಟ್ಟು ಶೋಕವಸ್ತ್ರವನ್ನು ಧರಿಸಿ ಬೂದಿಯ ಮೇಲೆ ಕುಳಿತುಕೊಂಡನು. 7 ತನ್ನ ಪ್ರಜೆಗಳಿಗೆ ಒಂದು ವಿಶೇಷ ಸಂದೇಶವನ್ನು ಬರೆಯಿಸಿ ನಗರದಲ್ಲೆಲ್ಲಾ ಪ್ರಚುರಪಡಿಸಿದನು. ಅದರಲ್ಲಿ ಹೀಗೆ ಬರೆದಿತ್ತು.
ಇದು ಅರಸನ ಮತ್ತು ಆತನ ಆಡಳಿತಗಾರರ ಆಜ್ಞೆ:
ಸ್ವಲ್ಪ ಸಮಯದವರೆಗೆ ಯಾವ ವ್ಯಕ್ತಯಾಗಲಿ ಪ್ರಾಣಿಯಾಗಲಿ ಆಹಾರವನ್ನು ತೆಗೆದುಕೊಳ್ಳಬಾರದು. ಮಂದೆಯಾಗಲಿ, ಹಿಂಡಾಗಲಿ ಹುಲ್ಲುಗಾವಲಿಗೆ ಹೋಗಬಾರದು. ನಿನೆವೆಯಲ್ಲಿ ವಾಸಿಸುವ ಯಾರೂ ಊಟಮಾಡಬಾರದು, ನೀರು ಕುಡಿಯಬಾರದು. 8 ಪ್ರತಿ ಮನುಷ್ಯನೂ ಪ್ರಾಣಿಯೂ ಶೋಕವಸ್ತ್ರವನ್ನು ಧರಿಸಬೇಕು. ಜನರು ದೇವರಿಗೆ ಗಟ್ಟಿಯಾಗಿ ಮೊರೆಯಿಡಬೇಕು. ಪ್ರತಿಯೊಬ್ಬನು ತನ್ನ ದುಷ್ಟಜೀವಿತವನ್ನು ಬದಲಾಯಿಸಿ ದುಷ್ಟತನ ಮಾಡುವದನ್ನು ನಿಲ್ಲಿಸಬೇಕು. 9 ಒಂದುವೇಳೆ ದೇವರು ತನ್ನ ಮನಸ್ಸನ್ನು ಬದಲಾಯಿಸಾನು. ತಾನು ಯೋಚಿಸಿದ್ದನ್ನು ನೆರವೇರಿಸದೆ ಇರುವನೋ ಏನೋ? ಆತನು ತನ್ನ ಯೋಜನೆಯನ್ನು ಹಿಂದೆಗೆದು, ಕೋಪಿಸಿಕೊಳ್ಳದೆ, ನಮ್ಮನ್ನು ಶಿಕ್ಷಿಸದೆ ಇರುವನೋ ಏನೋ! ಆಗ ನಾವು ನಾಶವಾಗದಿರಬಹುದು!
10 ಜನರು ಮಾಡಿದವುಗಳನ್ನು ದೇವರು ನೋಡಿದನು; ಅವರು ದುಷ್ಟತನ ಮಾಡುವದನ್ನು ನಿಲ್ಲಿಸಿದ್ದನ್ನು ಗಮನಿಸಿದನು. ಆತನು ಅವರನ್ನು ದಂಡಿಸಲಿಲ್ಲ.
8 ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ.(A) 9 ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.
10 ಆದರೆ ಪ್ರಭುವು ಮತ್ತೆ ಪ್ರತ್ಯಕ್ಷನಾಗುವ ದಿನವು ಕಳ್ಳನು ಬರುವಂತೆ ಅನಿರೀಕ್ಷಿತವಾಗಿ ಬರುತ್ತದೆ. ಆಕಾಶವು ಮಹಾ ಘೋಷದೊಂದಿಗೆ ಅದೃಶ್ಯವಾಗುತ್ತದೆ. ಆಕಾಶಮಂಡಲದಲ್ಲಿರುವ ಎಲ್ಲಾ ಸೃಷ್ಟಿಗಳು ಬೆಂಕಿಯಿಂದ ನಾಶವಾಗುತ್ತವೆ. ಈ ಲೋಕವೂ ಅದರಲ್ಲಿರುವ ಸಮಸ್ತವೂ ಸುಟ್ಟುಹೋಗುತ್ತದೆ. 11 ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು. 12 ನೀವು ದೇವರ ದಿನಕ್ಕಾಗಿ ಅಪೇಕ್ಷಿಸುತ್ತಾ ಎದುರು ನೋಡುತ್ತಿರಬೇಕು. ಆ ದಿನವು ಬಂದಾಗ, ಆಕಾಶವು ಬೆಂಕಿಯಿಂದ ನಾಶವಾಗುತ್ತದೆ ಮತ್ತು ಆಕಾಶದಲ್ಲಿರುವ ಪ್ರತಿಯೊಂದೂ ಬೆಂಕಿಯಿಂದ ಕರಗಿ ಹೋಗುತ್ತದೆ. 13 ನಾವಾದರೋ ದೇವರು ವಾಗ್ದಾನ ಮಾಡಿರುವ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಿದ್ದೇವೆ. ನೀತಿಯು ಅವುಗಳಲ್ಲಿ ವಾಸವಾಗಿರುವುದು.
Kannada Holy Bible: Easy-to-Read Version. All rights reserved. © 1997 Bible League International