Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 32:7-14

ಅದೇ ಸಮಯದಲ್ಲಿ ಯೆಹೋವನು ಮೋಶೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ಟಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಂಕರವಾದ ಪಾಪ ಮಾಡಿದ್ದಾರೆ. ನಾನು ಅವರಿಗೆ ಆಜ್ಞಾಪಿಸಿದವುಗಳಿಗೆ ಬಹುಬೇಗನೆ ಅವಿಧೇಯರಾಗಿದ್ದಾರೆ. ಚಿನ್ನವನ್ನು ಕರಗಿಸಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳು’ ಎಂದು ಜನರು ಹೇಳುತ್ತಿದ್ದಾರೆ” ಎಂದನು.

ಯೆಹೋವನು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೊಂಡರೆಂದು ನಾನು ಬಲ್ಲೆನು. ಅವರು ಯಾವಾಗಲೂ ನಿನಗೆ ವಿರೋಧವಾಗಿ ದಂಗೆ ಏಳುವರು. 10 ಆದ್ದರಿಂದ ನಾನು ಅವರನ್ನು ಕೋಪದಿಂದ ನಾಶಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.

11 ಆದರೆ ಮೋಶೆಯು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ನಿನ್ನ ಕೋಪವು ನಿನ್ನ ಜನರನ್ನು ನಾಶಮಾಡದಿರಲಿ. ನಿನ್ನ ಮಹಾಶಕ್ತಿಯಿಂದಲೂ ಬಲದಿಂದಲೂ ಈ ಜನರನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆಯಲ್ಲಾ. 12 ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. 13 ನಿನ್ನ ಸೇವೆಮಾಡಿದ ಅಬ್ರಹಾಮನನ್ನು, ಇಸಾಕನನ್ನು, ಯಾಕೋಬನನ್ನು ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲಾ ನಿನ್ನ ಸಂತತಿಗಳವರಿಗೆ ಕೊಡುವೆನು. ಈ ದೇಶ ಎಂದೆಂದಿಗೂ ಅವರದಾಗಿರುವುದು’ ಎಂದು ನೀನು ನಿನ್ನ ಹೆಸರಿನಲ್ಲಿ ವಾಗ್ದಾನ ಮಾಡಿದೆಯಲ್ಲಾ” ಅಂದನು.

14 ಆದ್ದರಿಂದ ಯೆಹೋವನು ಜನರಿಗಾಗಿ ಮರುಕಪಟ್ಟು ತನ್ನ ಮನಸ್ಸನ್ನು ಮಾರ್ಪಡಿಸಿಕೊಂಡನು; ತಾನು ಹೇಳಿದ್ದ ಕೇಡನ್ನು ಮಾಡಲಿಲ್ಲ; ತನ್ನ ಜನರನ್ನು ನಾಶಮಾಡಲಿಲ್ಲ.

ಕೀರ್ತನೆಗಳು 51:1-10

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.

1 ತಿಮೊಥೆಯನಿಗೆ 1:12-17

ದೇವರ ಕರುಣೆಗಾಗಿ ಕೃತಜ್ಞತೆಗಳು

12 ನಮ್ಮ ಪ್ರಭುವಾದ ಕ್ರಿಸ್ತ ಯೇಸು ನನ್ನ ಮೇಲಿನ ನಂಬಿಕೆಯಿಂದ, ಆತನ ಸೇವೆ ಮಾಡುವ ಈ ಕಾರ್ಯವನ್ನು ನನಗೆ ದಯಪಾಲಿಸಿದ್ದರಿಂದ ನಾನು ಆತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆತನು ನನ್ನನ್ನು ಬಲಪಡಿಸುತ್ತಾನೆ. 13 ಮೊದಲು, ನಾನು ಕ್ರಿಸ್ತನ ವಿರುದ್ಧ ಮಾತನಾಡಿದ್ದೆನು. ಆತನನ್ನು ಹಿಂಸಿಸಿದ್ದೆನು. ಆತನಿಗೆ ನೋವಾಗುವಂಥ ಕಾರ್ಯಗಳನ್ನು ಮಾಡಿದ್ದೆನು. ಆದರೆ ನಾನೇನು ಮಾಡುತ್ತಿದ್ದೇನೆಂಬುದು ನನಗೆ ತಿಳಿದಿರಲಿಲ್ಲವಾದ್ದರಿಂದ ದೇವರು ನನಗೆ ಕರುಣೆ ತೋರಿದನು. ನಂಬದಿರುವಾಗ ನಾನು ಅವುಗಳನ್ನು ಮಾಡಿದೆನು. 14 ಆದರೆ ನಮ್ಮ ಪ್ರಭುವಿನ ಕೃಪೆಯು ಸಂಪೂರ್ಣವಾಗಿ ನನಗೆ ಲಭಿಸಿತು. ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಗಳು ಆ ಕೃಪೆಯೊಂದಿಗೆ ಬಂದವು.

15 ನಾನು ಹೇಳುತ್ತಿರುವ ಈ ಸಂಗತಿ ಸತ್ಯವಾದದ್ದು. ಆದ್ದರಿಂದ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಅದೇನೆಂದರೆ: ಪಾಪಿಗಳನ್ನು ರಕ್ಷಿಸುವುದಕ್ಕೆ ಕ್ರಿಸ್ತ ಯೇಸು ಈ ಲೋಕದಲ್ಲಿ ಪ್ರತ್ಯಕ್ಷನಾದನು. ಆ ಪಾಪಿಗಳಲ್ಲಿ ನಾನೇ ಮುಖ್ಯನು. 16 ಆದರೆ ನನಗೆ ಕರುಣೆ ದೊರೆಯಿತು. ಕ್ರಿಸ್ತ ಯೇಸು ತನ್ನ ಅಮಿತವಾದ ತಾಳ್ಮೆಯನ್ನು ನನ್ನಲ್ಲಿ ತೋರ್ಪಡಿಸುವುದಕ್ಕಾಗಿಯೇ ನನಗೆ ಕರುಣೆಯನ್ನು ದಯಪಾಲಿಸಿದನು. ಪಾಪಿಗಳಲ್ಲೆಲ್ಲಾ ಮುಖ್ಯನಾಗಿದ್ದ ನನಗೆ ಕ್ರಿಸ್ತನು ತನ್ನ ತಾಳ್ಮೆಯನ್ನು ತೋರಿದನು. ನಿತ್ಯಜೀವಕ್ಕಾಗಿ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವ ಜನರಿಗೆ ನಾನು ದೃಷ್ಟಾಂತವಾಗಿರಬೇಕೆಂದೇ ಆತನು ನನ್ನನ್ನು ಕರುಣಿಸಿದನು. 17 ಸದಾಕಾಲ ಆಳುವ ಅರಸನಿಗೆ ಗೌರವವೂ ಮಹಿಮೆಯೂ ಇರಲಿ. ಆತನಿಗೆ ಲಯವೆಂಬುದೇ ಇಲ್ಲ. ಆತನು ಅದೃಶ್ಯನಾಗಿರುವನು. ಒಬ್ಬನೇ ದೇವರಾದ ಆತನಿಗೆ ಗೌರವವೂ ಮಹಿಮೆಯೂ ಉಂಟಾಗಲಿ. ಆಮೆನ್.

ಲೂಕ 15:1-10

ಸ್ವರ್ಗದಲ್ಲಿ ಆನಂದ

(ಮತ್ತಾಯ 18:12-14)

15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.

ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.

“ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ. ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು. 10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International