Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51:1-10

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.

ಆದಿಕಾಂಡ 8:20-9:7

20 ಆಮೇಲೆ ನೋಹನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿ ಶುದ್ಧವಾದ ಕೆಲವು ಪಶುಪಕ್ಷಿಗಳನ್ನು ತೆಗೆದುಕೊಂಡು ಅವುಗಳನ್ನು ದೇವರಿಗೆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮ ಮಾಡಿದನು.

21 ಈ ಯಜ್ಞಗಳ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಯಿತು. ಆಗ ಯೆಹೋವನು ತನ್ನೊಳಗೆ, “ಜನರನ್ನು ದಂಡಿಸುವುದಕ್ಕಾಗಿ ನಾನು ಇನ್ನೆಂದೂ ಭೂಮಿಯನ್ನು ಶಪಿಸುವುದಿಲ್ಲ. ಜನರು ಚಿಕ್ಕಂದಿನಿಂದಲೇ ಕೆಟ್ಟವರು. ಆದ್ದರಿಂದ ನಾನು ಇನ್ನೆಂದೂ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯನ್ನು ನಾಶಮಾಡುವುದಿಲ್ಲ; ಮತ್ತೆಂದೂ ನಾನು ಹೀಗೆ ಮಾಡುವುದಿಲ್ಲ. 22 ಭೂಮಿ ಇರುವವರೆಗೆ ಬಿತ್ತನೆಕಾಲ, ಸುಗ್ಗಿಕಾಲ ಯಾವಾಗಲೂ ಇರುತ್ತವೆ. ಹಿಮಕಾಲ, ಬೇಸಿಗೆಕಾಲ, ಚಳಿಗಾಲ, ಹಗಲು ಮತ್ತು ರಾತ್ರಿ ಯಾವಾಗಲೂ ಇದ್ದೇ ಇರುತ್ತವೆ” ಎಂದು ಅಂದುಕೊಂಡನು.

ಹೊಸ ಪ್ರಾರಂಭ

ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ತುಂಬಿಕೊಳ್ಳಿರಿ. ಭೂಮಿಯ ಮೇಲಿರುವ ಪ್ರತಿಯೊಂದು ಪ್ರಾಣಿಯೂ ನಿಮಗೆ ಹೆದರಿ ಭಯಪಡುವುದು; ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಪಕ್ಷಿಯೂ ನಿಮಗೆ ಹೆದರಿ ಭಯಪಡುವುದು; ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಮತ್ತು ಸಮುದ್ರದಲ್ಲಿರುವ ಪ್ರತಿಯೊಂದು ಮೀನೂ ನಿಮಗೆ ಹೆದರಿ ಭಯಪಡುವುದು. ನೀವು ಅವುಗಳಿಗೆಲ್ಲಾ ಒಡೆಯರಾಗಿರುತ್ತೀರಿ. ಮೊದಲು, ನಿಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಕೊಟ್ಟೆನು. ಈಗ ನಿಮ್ಮ ಆಹಾರಕ್ಕಾಗಿ ಪ್ರತಿಯೊಂದು ಪ್ರಾಣಿಯನ್ನೂ ಕೊಟ್ಟಿದ್ದೇನೆ. ಭೂಮಿಯ ಮೇಲಿರುವ ಎಲ್ಲವನ್ನೂ ನಾನು ನಿಮಗೋಸ್ಕರ ಕೊಟ್ಟಿದ್ದೇನೆ. ಆದರೆ ನಾನು ನಿಮಗೆ ಆಜ್ಞಾಪಿಸುವುದೇನೆಂದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಕೂಡದು. ಯಾವನಾದರೂ ನಿಮ್ಮ ಜೀವಹತ್ಯೆ ಮಾಡಿದರೆ, ನಾನು ಅವನ ಜೀವವನ್ನು ತೆಗೆಯುವೆನು. ಯಾವ ಪ್ರಾಣಿಯಾದರೂ ಮನುಷ್ಯನನ್ನು ಕೊಂದರೆ, ನಾನು ಆ ಪ್ರಾಣಿಯ ಪ್ರಾಣವನ್ನು ತೆಗೆಯುತ್ತೇನೆ.

“ದೇವರು ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ನಿರ್ಮಿಸಿದನು.
    ಆದ್ದರಿಂದ ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.”

“ನೋಹನೇ, ನಿನಗೂ ನಿನ್ನ ಮಕ್ಕಳಿಗೂ ಅನೇಕ ಮಕ್ಕಳು ಹುಟ್ಟಲಿ. ನೀವು ಅಭಿವೃದ್ಧಿಗೊಂಡು ಭೂಮಿಯಲ್ಲಿ ತುಂಬಿಕೊಳ್ಳಿರಿ” ಎಂದು ಹೇಳಿದನು.

ಯೋಹಾನ 10:11-21

11 “ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ. 13 ಆ ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ.

14-15 “ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಈ ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ. 16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. 17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ. 18 ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.

19 ಯೇಸು ಈ ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು.

21 ಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ಈ ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International