Revised Common Lectionary (Complementary)
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
ಜನರ ದುಷ್ಟತನ
6 ಭೂಮಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಇತ್ತು. ಅವರಿಗೆ ಸುಂದರವಾದ ಹೆಣ್ಣುಮಕ್ಕಳು ಹುಟ್ಟಿದರು. 2-4 ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು.
ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು.[a]
ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.
5 ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6 ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ನಮ್ಮ ರಕ್ಷಕನಾದ ದೇವರು ಮತ್ತು ನಮ್ಮ ನಿರೀಕ್ಷೆಗೆ ಆಧಾರವಾದ ಕ್ರಿಸ್ತ ಯೇಸುವಿನ ಆಜ್ಞೆಗನುಸಾರವಾಗಿ ನಾನು ಅಪೊಸ್ತಲನಾದೆನು.
2 ನೀನು ನಂಬಿಕೆ ಉಳ್ಳವನಾಗಿರುವುದರಿಂದ ನನಗೆ ನಿಜವಾದ ಮಗನಂತಿರುವೆ.
ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ಕೃಪೆಯೂ ಕರುಣೆಯೂ ಶಾಂತಿಯೂ ನಿನಗೆ ಲಭಿಸಲಿ.
ದುರ್ಬೋಧನೆಗಳ ವಿರುದ್ಧ ಎಚ್ಚರಿಕೆ
3 ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು. 4 ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು. 5 ಪ್ರೀತಿಯೇ ಈ ಆಜ್ಞೆಯ ಗುರಿಯಾಗಿದೆ. ಈ ಪ್ರೀತಿಯನ್ನು ಹೊಂದಿಕೊಳ್ಳಲು ಜನರು ಶುದ್ಧಹೃದಯ ಉಳ್ಳವರಾಗಿರಬೇಕು; ಯೋಗ್ಯವಾದ ಕಾರ್ಯವನ್ನೇ ಮಾಡುವವರಾಗಿರಬೇಕು; ಮತ್ತು ನಿಷ್ಕಪಟವಾದ ನಂಬಿಕೆಯನ್ನು ಹೊಂದಿದವರಾಗಿರಬೇಕು. 6 ಕೆಲವರು ಈ ಗುರಿತಪ್ಪಿ ನಿರರ್ಥಕವಾದ ವಿಷಯಗಳನ್ನು ಕುರಿತು ಮಾತಾಡುತ್ತಿದ್ದಾರೆ. 7 ತಾವು ಧರ್ಮೋಪದೇಶಕರಾಗಬೇಕೆಂಬುದು ಅವರ ಅಪೇಕ್ಷೆ. ಆದರೆ ತಾವು ಏನು ಮಾತಾಡುತ್ತಿದ್ದೇವೆ ಎಂಬುದೇ ಅವರಿಗೆ ತಿಳಿದಿಲ್ಲ. ತಮಗೆ ಖಚಿತವಾಗಿ ತಿಳಿದಿದೆ ಎಂದು ತಾವು ಹೇಳುವ ಸಂಗತಿಗಳನ್ನೂ ಅವರು ಅರ್ಥಮಾಡಿಕೊಳ್ಳುವುದಿಲ್ಲ.
8 ಧರ್ಮಶಾಸ್ತ್ರವು ಒಳ್ಳೆಯದೇ. ಆದರೆ ಅದನ್ನು ನಿಷ್ಠೆಯಿಂದ ಅನುಸರಿಸಬೇಕು. 9 ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ, 10 ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ. 11 ಈ ಉಪದೇಶವು ಜನರಿಗೆ ತಿಳಿಸುವುದಕ್ಕಾಗಿ ದೇವರು ನನಗೆ ಕೊಟ್ಟ ಸುವಾರ್ತೆಯ ಒಂದು ಭಾಗವಾಗಿದೆ. ಭಾಗ್ಯವಂತನಾದ ದೇವರಿಂದಲೇ ಈ ಮಹಿಮೆಯ ಸುವಾರ್ತೆಯು ಬಂದಿತು.
Kannada Holy Bible: Easy-to-Read Version. All rights reserved. © 1997 Bible League International