Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 101

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.

2 ರಾಜರುಗಳು 17:24-41

ಸಮಾರ್ಯದ ಜನರ ಆರಂಭ ಕಾಲ

24 ಇಸ್ರೇಲರನ್ನು ಸಮಾರ್ಯದಿಂದ ಅಶ್ಶೂರದ ರಾಜನು ಒಯ್ದನು. ನಂತರ ಅಶ್ಶೂರದ ರಾಜನು ಬಾಬಿಲೋನ್, ಕೂತಾ, ಅವ್ವಾ, ಹಮಾತ್ ಮತ್ತು ಸೆಫರ್ವಯಿಮ್‌ಗಳಿಂದ ಜನರನ್ನು ಕರೆತಂದು ಇಸ್ರೇಲರ ಬದಲಾಗಿ ಅವರನ್ನು ಸಮಾರ್ಯದಲ್ಲಿ ನೆಲೆಗೊಳಿಸಿದನು. ಅವರು ಸಮಾರ್ಯವನ್ನು ಹೊಂದಿಕೊಂಡು ಅವರ ಸುತ್ತಲಿನ ನಗರಗಳಲ್ಲಿ ವಾಸಿಸಿದರು. 25 ಆದರೆ ಅವರು ಯೆಹೋವನನ್ನು ಗೌರವಿಸಲಿಲ್ಲ. ಆದ್ದರಿಂದ ಅವರ ಮೇಲೆ ಆಕ್ರಮಣಮಾಡಲು ಯೆಹೋವನು ಸಿಂಹಗಳನ್ನು ಕಳುಹಿಸಿದನು. ಈ ಸಿಂಹಗಳು ಆ ಜನರಲ್ಲಿ ಕೆಲವರನ್ನು ಕೊಂದುಹಾಕಿದವು. 26 ಅಶ್ಶೂರದ ರಾಜನಿಗೆ ಕೆಲವು ಜನರು, “ನೀನು ಕೆಲವು ಜನರನ್ನು ಒಯ್ದು ಸಮಾರ್ಯ ನಗರಗಳಲ್ಲಿ ಇರಿಸಿದೆ. ಅವರು ಆ ದೇಶದ ದೇವರ ನಿಯಮಗಳ ಬಗ್ಗೆ ತಿಳಿದುಕೊಂಡಿಲ್ಲ. ಆದ್ದರಿಂದ ಅವರನ್ನು ಆಕ್ರಮಣಮಾಡಲು ದೇವರು ಸಿಂಹಗಳನ್ನು ಕಳುಹಿಸಿದನು. ಆ ದೇಶದ ದೇವರ ನಿಯಮಗಳನ್ನು ಅವರು ತಿಳಿದಿಲ್ಲದಿರುವುದರಿಂದ ಅವರನ್ನು ಸಿಂಹಗಳು ಕೊಂದುಹಾಕಿದವು” ಎಂದು ಹೇಳಿದರು.

27 ಆದ್ದರಿಂದ ಅಶ್ಶೂರದ ರಾಜನು, “ನೀವು ಸಮಾರ್ಯದಿಂದ ಕೆಲವು ಯಾಜಕರನ್ನು ಕರೆದೊಯ್ದಿರುವಿರಿ. ನಾನು ಸಮಾರ್ಯದಿಂದ ಸೆರೆಹಿಡಿದು ತಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿ. ಆ ಯಾಜಕನು ಹೋಗಿ ಅಲ್ಲಿಯೇ ನೆಲೆಸಲಿ. ನಂತರ ಆ ಯಾಜಕನ ಆ ದೇಶದ ದೇವರ ಕಟ್ಟಳೆಗಳನ್ನು ಜನರಿಗೆ ಬೋಧಿಸಲಿ” ಎಂದು ಆಜ್ಞಾಪಿಸಿದನು.

28 ಹೀಗೆ ಅಶ್ಶೂರದವರು ಸಮಾರ್ಯದಿಂದ ಕರೆದೊಯ್ದಿದ್ದ ಯಾಜಕರಲ್ಲೊಬ್ಬನು ಬೇತೇಲಿನಲ್ಲಿ ವಾಸಿಸಲು ಬಂದನು. ಈ ಯಾಜಕನು ಜನರಿಗೆ, ಯೆಹೋವ ಭಕ್ತಿಯನ್ನು ಬೋಧಿಸಿದನು.

29 ಆದರೆ ಅವರೆಲ್ಲರೂ ತಮ್ಮ ಸ್ವಂತ ದೇವರುಗಳನ್ನು ನಿರ್ಮಿಸಿ, ಅವುಗಳನ್ನು ಸಮಾರ್ಯದವರು ನಿರ್ಮಿಸಿದ್ದ ಉನ್ನತಸ್ಥಳಗಳಲ್ಲಿನ ಆಲಯಗಳಲ್ಲಿ ಇರಿಸಿದರು. ಅವರು ಎಲ್ಲೆಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲಾ ಹೀಗೆಯೇ ಮಾಡಿದರು. 30 ಬಾಬಿಲೋನಿನ ಜನರು ಸುಳ್ಳುದೇವತೆಯಾದ ಸುಕ್ಕೋತ್ಬೆನೋತನ್ನು ನಿರ್ಮಿಸಿದರು. ಕೂತದ ಜನರು ಸುಳ್ಳುದೇವತೆಯಾದ ನೇರ್ಗಲ್‌ಯನ್ನು ಮಾಡಿದರು. ಹಮಾತಿನ ಜನರು ಸುಳ್ಳುದೇವತೆಯಾದ ಅಷೀಮಾವನ್ನು ಮಾಡಿದರು. 31 ಅವ್ವೀಯರು ಸುಳ್ಳುದೇವತೆಯಾದ ನಿಭಜ್ ಮತ್ತು ತರ್ತಕ್‌ಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ದೇವರುಗಳಾದ ಅದ್ರಮ್ಮೆಲೆಕ್ ಮತ್ತು ಅನ್ನಮ್ಮೆಲೆಕ್‌ಗಳನ್ನು ಗೌರವಿಸಲು ತಮ್ಮ ಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು.

32 ಆದರೆ ಅವರು ಯೆಹೋವನಲ್ಲಿಯೂ ಭಕ್ತಿಯನ್ನಿಟ್ಟಿದ್ದರು. ಅವರು ಉನ್ನತಸ್ಥಳಗಳಿಗೆ ಯಾಜಕರನ್ನು ಜನರಲ್ಲಿಯೇ ಆಯ್ಕೆ ಮಾಡಿಕೊಂಡರು. ಆ ಯಾಜಕರು ಜನರಿಗಾಗಿ ಉನ್ನತಸ್ಥಳಗಳಲ್ಲಿನ ದೇವಾಲಯಗಳಲ್ಲಿ ಯಜ್ಞವನ್ನು ಅರ್ಪಿಸಿದರು. 33 ಅವರು ಯೆಹೋವನಲ್ಲಿ ಭಕ್ತಿಯಿಟ್ಟಿದ್ದರು, ಆದರೆ ತಮ್ಮ ಸ್ವಂತ ದೇವರುಗಳ ಸೇವೆಯನ್ನೂ ಮಾಡಿದರು. ಅವರು ತಮ್ಮನ್ನು ತೆಗೆದುಕೊಂಡುಬಂದ ದೇಶಗಳಲ್ಲಿ ಮಾಡುತ್ತಿದ್ದಂತೆ ತಮ್ಮ ದೇವರುಗಳ ಸೇವೆಯನ್ನು ಮಾಡಿದರು.

34 ಇಂದಿಗೂ ಸಹ ಅವರು ಪೂರ್ವಕಾಲದಲ್ಲಿ ಮಾಡುತ್ತಿದ್ದಂತೆಯೇ ಜೀವಿಸುತ್ತಿದ್ದಾರೆ. ಅವರಿಗೆ ಯೆಹೋವನಲ್ಲಿ ಭಕ್ತಿಯಿಲ್ಲ. ಅವರು ಇಸ್ರೇಲರ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗುವುದಿಲ್ಲ. ಯೆಹೋವನು ಯಾಕೋಬನ ಸಂತತಿಗೆ ನೀಡಿದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸುವುದಿಲ್ಲ. 35 ಯೆಹೋವನು ಇಸ್ರೇಲಿನ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ, “ನೀವು ಅನ್ಯದೇವತೆಗಳನ್ನು ಪೂಜಿಸಬಾರದು; ನೀವು ಅವುಗಳಿಗೆ ಕೈಮುಗಿಯಬಾರದು; ಅವುಗಳ ಸೇವೆಯನ್ನು ಮಾಡಬಾರದು; ಅವುಗಳಿಗೆ ಯಜ್ಞಗಳನ್ನು ಅರ್ಪಿಸಬಾರದು. 36 ಆದರೆ ನೀವು ಯೆಹೋವನನ್ನು ಅನುಸರಿಸಲೇಬೇಕು. ನಿಮ್ಮನ್ನು ಈಜಿಪ್ಟಿನಿಂದ ಹೊರಗೆತಂದ ದೇವರೇ ನಿಮ್ಮ ಯೆಹೋವ. ಯೆಹೋವನು ನಿಮ್ಮನ್ನು ರಕ್ಷಿಸಲು ತನ್ನ ಮಹಾಶಕ್ತಿಯನ್ನು ಬಳಸಿದನು. ನೀವು ಯೆಹೋವನನ್ನು ಗೌರವಿಸಿ ಆರಾಧಿಸಬೇಕು ಮತ್ತು ಆತನಿಗೆ ಯಜ್ಞಗಳನ್ನು ಅರ್ಪಿಸಬೇಕು. 37 ಆತನು ನಿಮಗೆ ಬರೆಯಿಸಿಕೊಟ್ಟ ನಿಯಮಗಳಿಗೆ, ಶಾಸ್ತ್ರಗಳಿಗೆ, ಉಪದೇಶಗಳಿಗೆ ಮತ್ತು ಆಜ್ಞೆಗಳಿಗೆ ನೀವು ವಿಧೇಯರಾಗಿರಬೇಕು. ನೀವು ಎಲ್ಲಾ ಕಾಲದಲ್ಲೂ ಇವುಗಳಿಗೆ ವಿಧೇಯತೆಯಿಂದಿರಬೇಕು. ನೀವು ಅನ್ಯದೇವತೆಗಳನ್ನು ಪೂಜಿಸಲೇಬಾರದು. 38 ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೀವು ಮರೆಯಲೇಬಾರದು. ನೀವು ಅನ್ಯದೇವರುಗಳನ್ನು ಪೂಜಿಸಬಾರದು. 39 ನೀವು ನಿಮ್ಮ ದೇವರಾದ ಯೆಹೋವನನ್ನು ಮಾತ್ರ ಆರಾಧಿಸಬೇಕು. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಆಜ್ಞಾಪಿಸಿದನು.

40 ಆದರೆ ಇಸ್ರೇಲರು ಆತನ ಮಾತಿಗೆ ಕಿವಿಗೊಡದೆ ತಮ್ಮ ಮೊದಲಿನ ಕಾರ್ಯಗಳನ್ನೇ ಮುಂದುವರಿಸಿದರು. 41 ಅನ್ಯಜನಾಂಗಗಳು ಯೆಹೋವನಲ್ಲಿ ಭಕ್ತಿಯಿಂದಿದ್ದರೂ ತಮ್ಮ ಸ್ವಂತ ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಪೂರ್ವಿಕರು ಮಾಡಿದಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಂದಿಗೂ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.

1 ತಿಮೊಥೆಯನಿಗೆ 3:14-4:5

ನಮ್ಮ ಜೀವನದ ರಹಸ್ಯ

14 ನಾನು ನಿನ್ನ ಬಳಿಗೆ ಬಹುಬೇಗ ಬರುವೆನೆಂಬ ಭರವಸೆ ನನಗಿದೆ. ಆದರೆ ಈಗ ನಾನು ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಂತರ ನಾನು ನಿನ್ನ ಬಳಿಗೆ ಬೇಗ ಬಾರದೆ ಇದ್ದರೂ, ದೇವರ ಮನೆಯಲ್ಲಿ ಜನರು ಮಾಡಲೇಬೇಕಾದ ಕಾರ್ಯಗಳ ಬಗ್ಗೆ ನಿನಗೆ ತಿಳಿದಿದೆ. ಆ ಮನೆಯು ಜೀವಂತ ದೇವರ ಸಭೆ. ಅದು ಸತ್ಯದ ಅಡಿಪಾಯವೂ ಆಧಾರವೂ ಆಗಿದೆ. 16 ನಿಸ್ಸಂದೇಹವಾಗಿಯೂ ನಮ್ಮ ಆರಾಧನಾ ಜೀವಿತದ ರಹಸ್ಯವು ಮಹೋನ್ನತವಾದದ್ದು:

ಕ್ರಿಸ್ತನು ಮಾನವ ದೇಹದಲ್ಲಿ ನಮಗೆ ಪ್ರತ್ಯಕ್ಷನಾದನು.
ಆತನೇ ಕ್ರಿಸ್ತನೆಂದು ಪವಿತ್ರಾತ್ಮನು ನಿರೂಪಿಸಿದನು.
ದೇವದೂತರಿಗೆ ಆತನು ಕಾಣಿಸಿಕೊಂಡನು.
ಆತನನ್ನು ಕುರಿತ ಸುವಾರ್ತೆಯನ್ನು ಜನಾಂಗಗಳವರಿಗೆಲ್ಲ (ಯೆಹೂದ್ಯರಲ್ಲದವರಿಗೆ) ಪ್ರಸಿದ್ಧಿಪಡಿಸಲಾಯಿತು.
ಲೋಕದಲ್ಲಿರುವ ಜನರು ಆತನಲ್ಲಿ ನಂಬಿಕೆಯಿಟ್ಟರು.
ಆತನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.

ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು. ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ. ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ. ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು. ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International