Revised Common Lectionary (Complementary)
15 “ಈ ದಿನ ನೀವು ಜೀವ ಮತ್ತು ಮರಣ; ಶುಭ ಮತ್ತು ಅಶುಭ ಇವುಗಳನ್ನು ಆಯ್ಕೆಮಾಡಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಟ್ಟಿದ್ದೇನೆ. 16 ನಿಮ್ಮ ದೇವರಾದ ಯೆಹೋವನನ್ನು ನೀವು ಸಂಪೂರ್ಣವಾಗಿ ಪ್ರೀತಿಸಬೇಕೆಂದು ಆಜ್ಞಾಪಿಸುತ್ತೇನೆ. ಆತನ ಆಜ್ಞೆಗಳಿಗೆ, ನಿಯಮಗಳಿಗೆ ಮತ್ತು ವಿಧಿಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. ಆಗ ನೀವು ಬದುಕುವಿರಿ ಮತ್ತು ನಿಮ್ಮ ಜನಾಂಗ ದೊಡ್ಡದಾಗಿ ಬೆಳೆಯುವುದು. ನಿಮಗಾಗಿ ತೆಗೆದುಕೊಳ್ಳಲು ಪ್ರವೇಶಿಸಲಿರುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು. 17 ಆದರೆ ನೀವು ಯೆಹೋವನಿಗೆ ವಿಮುಖರಾಗಿ ಆತನಿಗೆ ಕಿವಿಗೊಡದೆ ಹೋದರೆ, ಬೇರೆ ದೇವರುಗಳನ್ನು ಆರಾಧಿಸಲು ಮತ್ತು ಸೇವೆಮಾಡಲು ಹೋದರೆ, 18 ನೀವು ನಾಶವಾಗುವಿರಿ. ನಿಮ್ಮನ್ನು ನಾನು ಎಚ್ಚರಿಸುತ್ತಿದ್ದೇನೆ. ನೀವು ಯೆಹೋವನಿಗೆ ವಿಮುಖರಾದರೆ, ನಿಮಗಾಗಿ ತೆಗೆದುಕೊಳ್ಳಲು ನೀವು ಪ್ರವೇಶಿಸುತ್ತಿರುವ ಜೋರ್ಡನ್ ನದಿಯ ಆಚೆ ದಡದಲ್ಲಿರುವ ದೇಶದಲ್ಲಿ ನೀವು ಬಹುಕಾಲದವರೆಗೆ ಜೀವಿಸುವುದಿಲ್ಲ.
19 “ಈ ದಿನ ಎರಡು ಮಾರ್ಗಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಲು ನಾನು ನಿಮಗೆ ಅವಕಾಶ ಕೊಟ್ಟಿದ್ದೇನೆ. ಪರಲೋಕವೂ ಭೂಮಿಯೂ ಅದಕ್ಕೆ ಸಾಕ್ಷಿ. ನೀವು ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಬಹುದು. ಜೀವವನ್ನಾರಿಸಿಕೊಂಡರೆ, ಆಶೀರ್ವಾದವು ಸಿಗುವುದು. ಮರಣವು ನಿಮಗೆ ಶಾಪವನ್ನು ತರುವುದು. ಆದ್ದರಿಂದ ಜೀವವನ್ನು ಆರಿಸಿಕೊಳ್ಳಿರಿ, ನೀವೂ ನಿಮ್ಮ ಮಕ್ಕಳೂ ಬಾಳುವಿರಿ. 20 ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗಬೇಕು. ಯೆಹೋವನು ನಿಮ್ಮ ಜೀವವಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ನಿಮಗೆ ದೀರ್ಘವಾದ ಆಯುಷ್ಯನ್ನು ಅನುಗ್ರಹಿಸುತ್ತಾನೆ.”
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
1 ಯೇಸು ಕ್ರಿಸ್ತನ ನಿಮಿತ್ತ ಸೆರೆಯಲ್ಲಿರುವ ಪೌಲನೂ ಸಹೋದರನಾದ ತಿಮೊಥೆಯನೂ ನಮಗೆ ಪ್ರಿಯನಾದ ಮತ್ತು ನಮ್ಮ ಜೊತೆಕೆಲಸದವನಾದ ಫಿಲೆಮೋನನಿಗೆ, 2 ಸಹೋದರಿಯಾದ ಅಪ್ಫಿಯಳಿಗೆ, ನಮ್ಮ ಜೊತೆಸೈನಿಕನಾದ ಅರ್ಖಿಪ್ಪನಿಗೆ ಮತ್ತು ಫಿಲೆಮೋನನ ಮನೆಯಲ್ಲಿ ಸೇರಿಬರುವ ಸಭೆಯವರೆಲ್ಲರಿಗೆ ಬರೆಯುವ ಪತ್ರ.
3 ನಮ್ಮ ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮ್ಮೊಂದಿಗಿರಲಿ.
ಫಿಲೆಮೋನನ ಪ್ರೀತಿ ಮತ್ತು ನಂಬಿಕೆ
4 ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಯಾವಾಗಲೂ ನಿನಗಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 5 ದೇವರ ಪರಿಶುದ್ಧ ಜನರ ಮೇಲೆ ನಿನಗಿರುವ ಪ್ರೀತಿಯನ್ನು ಮತ್ತು ಪ್ರಭುವಾದ ಯೇಸುವಿನಲ್ಲಿ ನಿನಗಿರುವ ನಂಬಿಕೆಯನ್ನು ಕೇಳಿದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 6 ನೀನು ನಿನ್ನ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಕಾರ್ಯ ನಿರತನಾಗಿರುವುದರ ಮೂಲಕ ಕ್ರಿಸ್ತನಲ್ಲಿ ನಮಗಿರುವ ಎಲ್ಲಾ ಸುವರಗಳನ್ನು ಅರ್ಥಮಾಡಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇನೆ. 7 ನನ್ನ ಸಹೋದರನೇ, ದೇವಜನರಿಗೆ ನೀನು ಪ್ರೀತಿಯನ್ನು ತೋರಿಸಿ ಅವರ ಹೃದಯಗಳನ್ನು ಸಂತೈಸಿರುವೆ. ಇದು ನನಗೆ ಹೆಚ್ಚಿನ ಸಂತಸವನ್ನೂ ನೆಮ್ಮದಿಯನ್ನೂ ತಂದುಕೊಟ್ಟಿದೆ.
ಒನೇಸಿಮನನ್ನು ಸಹೋದರನಂತೆ ಸೇರಿಸಿಕೊ
8 ನೀನು ಮಾಡಬೇಕಾದ ಕಾರ್ಯವೊಂದಿದೆ. ಅದನ್ನು ಮಾಡಬೇಕೆಂದು ಆಜ್ಞಾಪಿಸಲು ನನಗೆ ಕ್ರಿಸ್ತನಲ್ಲಿ ಅಧಿಕಾರವಿದೆ. 9 ಆದರೆ ನಾನು ನಿನಗೆ ಆಜ್ಞಾಪಿಸದೆ ಪ್ರೀತಿಯಿಂದ ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಪೌಲನಾದ ನಾನು ಈಗ ವೃದ್ಧನಾಗಿದ್ದೇನೆ ಮತ್ತು ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯಲ್ಲಿದ್ದೇನೆ. 10 ನನ್ನ ಮಗನಾದ ಒನೇಸಿಮನಿಗಾಗಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ನಾನು ಸೆರೆಮನೆಯಲ್ಲಿರುವಾಗ ಅವನು ನನ್ನ ಮಗನಾದನು. 11 ಹಿಂದೆ ಅವನು ನಿನಗೆ ನಿಷ್ಪ್ರಯೋಜಕನಾಗಿದ್ದನು. ಆದರೆ ಈಗ ಅವನು ನಿನಗೂ ನನಗೂ ಪ್ರಯೋಜನ ಉಳ್ಳವನಾಗಿದ್ದಾನೆ.
12 ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತಿದ್ದೇನೆ. ಅವನೊಂದಿಗೆ ನನ್ನ ಹೃದಯವನ್ನೇ ಕಳುಹಿಸುತ್ತಿದ್ದೇನೆ. 13 ನಾನೀಗ ಸುವಾರ್ತೆಗೋಸ್ಕರ ಸೆರೆಯಲ್ಲಿರುವಾಗ ನನ್ನ ಸಹಾಯಕ್ಕೆ ಅವನನ್ನು ಇರಿಸಿಕೊಳ್ಳಬೇಕೆಂದಿದ್ದೆನು. ಇಲ್ಲಿ ಅವನು ನನಗೆ ಸಹಾಯ ಮಾಡುತ್ತಾ ನಿನ್ನ ಸೇವೆಯನ್ನೂ ಮಾಡಬಹುದಾಗಿತ್ತು. 14 ಆದರೆ ಈ ವಿಷಯದಲ್ಲಿ ನಿನ್ನ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನು ಮಾಡುವ ಒಳ್ಳೆಕಾರ್ಯವು ಮನಃ ಪೂರ್ವಕವಾಗಿರಬೇಕೇ ಹೊರತು ಬಲತ್ಕಾರದಿಂದಾಗಕೂಡದು.
15 ಒನೇಸಿಮನು ಸ್ವಲ್ಪಕಾಲ ನಿನ್ನನ್ನು ಅಗಲಿದ್ದನು. ಬಹುಶಃ ಅವನು ಎಂದೆಂದಿಗೂ ನಿನ್ನವನಾಗಬೇಕೆಂದು ಹಾಗಾಯಿತೇನೊ! 16 ಇನ್ನು ಮೇಲೆ ಅವನು ನಿನಗೆ ಕೇವಲ ಗುಲಾಮನಾಗಿರದೆ ಗುಲಾಮನಿಗಿಂತಲೂ ಹೆಚ್ಚಿನ ಪ್ರಿಯ ಸಹೋದರನಾಗಿದ್ದಾನೆ. ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದರೆ ನೀನು ಅವನನ್ನು ಮತ್ತಷ್ಟು ಹೆಚ್ಚಾಗಿ ಪ್ರೀತಿಸುವೆ. ನೀನು ಅವನನ್ನು ಮನುಷ್ಯನೆಂದು ಮತ್ತು ಪ್ರಭುವಿನಲ್ಲಿ ಒಬ್ಬ ಸಹೋದರನೆಂದು ಪ್ರೀತಿಸುವೆ.
17 ನನ್ನನ್ನು ನಿನ್ನ ಸಹಭಾಗಿಯೆಂದು ನೀನು ಒಪ್ಪಿಕೊಳ್ಳುವುದಾದರೆ, ಒನೇಸಿಮನನ್ನು ಮತ್ತೆ ಸೇರಿಸಿಕೊ. ನೀನು ನನ್ನನ್ನು ಬರಮಾಡಿಕೊಂಡಂತೆ ಅವನನ್ನೂ ಬರಮಾಡಿಕೊ. 18 ಅವನು ನಿನಗೇನಾದರೂ ತಪ್ಪು ಮಾಡಿದ್ದರೆ ಅದನ್ನು ನನ್ನ ಮೇಲೆ ಹೊರಿಸು; ನಿನಗೇನಾದರೂ ಕೊಡಬೇಕಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ. 20 ನನ್ನ ಸಹೋದರನೇ, ಪ್ರಭುವಿನಲ್ಲಿ ನಾನು ನಿನ್ನಿಂದ ಒಂದು ಸಹಾಯವನ್ನು ಹೊಂದಿಕೊಳ್ಳಬಹುದೇ? ಅದೇನೆಂದರೆ ನೀನು ನನ್ನ ಹೃದಯವನ್ನು ಕ್ರಿಸ್ತನಲ್ಲಿ ಸಂತೈಸು. 21 ನಾನು ಕೇಳಿಕೊಂಡದ್ದನ್ನು ನೀನು ಮಾಡುವೆ ಎಂದು ನನಗೆ ಗೊತ್ತಿರುವುದರಿಂದಲೇ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ನೀನು ಮಾಡುವೆ ಎಂದು ನನಗೆ ತಿಳಿದಿದೆ.
ಯೋಜನೆಯ ಅಗತ್ಯತೆ
(ಮತ್ತಾಯ 10:37-38)
25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.
28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.
31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.
33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!
Kannada Holy Bible: Easy-to-Read Version. All rights reserved. © 1997 Bible League International