Revised Common Lectionary (Complementary)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
2 ಮೋಶೆಯು ಇಸ್ರೇಲರ ಜನಸಮೂಹವನ್ನು ಕರೆದು, “ಈಜಿಪ್ಟ್ ದೇಶದಲ್ಲಿ ಯೆಹೋವನು ನಡಿಸಿದ ಕಾರ್ಯಗಳನ್ನೆಲ್ಲಾ ನೀವು ನೋಡಿದ್ದೀರಿ. ಆತನು ಫರೋಹನಿಗೂ ಅವನ ಪರಿವಾರದವರಿಗೂ ಮತ್ತು ಇಡೀ ಈಜಿಪ್ಟಿನವರಿಗೂ ಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ. 3 ಅವರಿಗೆ ಕೊಟ್ಟಂಥ ಭಯಂಕರ ಸಂಕಟಗಳನ್ನು ನೋಡಿದಿರಿ; ಆತನು ನಡಿಸಿದ ಅದ್ಭುತಕಾರ್ಯಗಳನ್ನು ನೋಡಿದಿರಿ. 4 ಆದರೆ ಇಂದಿನ ತನಕವೂ ನೀವು ಅದನ್ನು ಸಂಪೂರ್ಣವಾಗಿ ಅರಿಯಲಿಲ್ಲ. ನೀವು ಕಂಡವುಗಳನ್ನು ಮತ್ತು ಕೇಳಿದವುಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದಂತೆ ಯೆಹೋವನು ಮಾಡಿದನು. 5 ನಲವತ್ತು ವರ್ಷಗಳ ತನಕ ಯೆಹೋವನು ನಿಮ್ಮನ್ನು ಅಡವಿಯಲ್ಲಿ ನಡೆಸಿದನು. ಆದರೆ ನಿಮ್ಮ ಮೈಮೇಲಿದ್ದ ಬಟ್ಟೆಗಳು ಹರಿದುಹೋಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ. 6 ನಿಮ್ಮಲ್ಲಿ ಆಹಾರವಿರಲಿಲ್ಲ; ಕುಡಿಯಲು ದ್ರಾಕ್ಷಾರಸವಾಗಲಿ ಪಾನೀಯವಾಗಲಿ ಇರಲಿಲ್ಲ. ಆದರೆ ಯೆಹೋವನು ಮನ್ನವನ್ನು ಮತ್ತು ನೀರನ್ನು ಕೊಟ್ಟನು. ಆತನೇ ನಿಮ್ಮ ದೇವರಾದ ಯೆಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.
7 “ನಾವು ಈ ಸ್ಥಳಕ್ಕೆ ಬಂದಾಗ ಹೆಪ್ಬೋನಿನ ರಾಜ ಸೀಹೋನ ಮತ್ತು ಬಾಷಾನಿನ ರಾಜ ಓಗನು ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ನಾವು ಅವರನ್ನು ಸೋಲಿಸಿದೆವು. 8 ನಾವು ಅವರ ದೇಶವನ್ನು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರಿಗೆ ಹಂಚಿದೆವು. 9 ನೀವು ದೇವರೊಡನೆ ಮಾಡಿದ ಒಪ್ಪಂದವನ್ನು ಪಾಲಿಸುತ್ತಾ ಬಂದರೆ ನೀವು ನಿಮ್ಮ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
10 “ಈ ದಿನ ನೀವೆಲ್ಲರೂ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ನಾಯಕರು, ಹಿರಿಯರು, ನಿಮ್ಮ ಜನರೆಲ್ಲಾ ಇಲ್ಲಿ ಇರುವಿರಿ. 11 ನಿಮ್ಮ ಹೆಂಡತಿಮಕ್ಕಳೂ, ನಿಮ್ಮೊಂದಿಗಿರುವ ಪರದೇಶಸ್ಥರೂ ನಿಮ್ಮ ಸೇವೆ ಮಾಡುವವರೂ ಇದ್ದಾರೆ. 12 ನೀವೆಲ್ಲಾ ನಿಮ್ಮ ದೇವರಾದ ಯೆಹೋವನೊಂದಿಗೆ ಒಡಂಬಡಿಕೆಯನ್ನು ಮಾಡುವುದಕ್ಕೋಸ್ಕರ ನಿಂತಿದ್ದೀರಿ. ದೇವರು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡುತ್ತಾನೆ. 13 ಈ ಒಡಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವಕೀಯ ಜನರನ್ನಾಗಿ ಮಾಡುತ್ತಾನೆ. ಆತನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ. 14 ಯೆಹೋವನು ವಾಗ್ದಾನಗಳನ್ನು ಒಳಗೊಂಡ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾತ್ರ ಮಾಡದೆ ಇಲ್ಲಿ ಕೂಡಿಬಂದಿರುವ ಎಲ್ಲರೊಂದಿಗೂ ಮಾಡುತ್ತಾನೆ. 15 ಇಂದು ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಇಲ್ಲಿ ನಿಂತಿರುವ ನಮ್ಮೆಲ್ಲರೊಂದಿಗೂ ಇಂದು ನಮ್ಮೊಂದಿಗಿಲ್ಲದ ನಮ್ಮ ಸಂತತಿಯವರಿಗೂ ಆತನು ಈ ಒಡಂಬಡಿಕೆಯನ್ನು ಮಾಡುತ್ತಿದ್ದಾನೆ. 16 ನಾನು ಈಜಿಪ್ಟಿನಲ್ಲಿ ಹೇಗೆ ಜೀವಿಸುತ್ತಿದ್ದೆವೆಂಬುದನ್ನೂ, ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಟಿಕೊಂಡು ಬಂದೆವೆಂಬುದನ್ನೂ ಸ್ಮರಿಸಿರಿ. 17 ನೀವು ಅವರ ಅಸಹ್ಯವಾದ ವಿಗ್ರಹಗಳನ್ನು ನೋಡಿದಿರಿ. ಅವುಗಳು ಮರ, ಕಲ್ಲು, ಬೆಳ್ಳಿಬಂಗಾರಗಳಿಂದ ಕೆತ್ತಲ್ಪಟ್ಟವುಗಳಾಗಿದ್ದವು. 18 ಇಲ್ಲಿರುವ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಯಾವ ಗೋತ್ರದವರಾಗಲಿ ನಿಮ್ಮ ದೇವರಾದ ಯೆಹೋವನನ್ನು ಬಿಟ್ಟುಹೋಗದಂತೆ ನೋಡಿಕೊಳ್ಳಿರಿ. ಯಾವನೂ ಹೋಗಿ ಬೇರೆ ಜನಾಂಗಗಳ ದೇವರುಗಳ ಸೇವೆಮಾಡಬಾರದು. ಅಂಥದ್ದನ್ನು ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.
19 “ನಾನು ತಿಳಿಸಿದ ಶಾಪವನ್ನೆಲ್ಲಾ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ. 20-21 ಯೆಹೋವನು ಆ ಮನುಷ್ಯನನ್ನು ಕ್ಷಮಿಸುವುದಿಲ್ಲ. ಅವನ ಮೇಲೆ ಕೋಪಗೊಂಡು ಅವನನ್ನು ಶಿಕ್ಷಿಸುವನು. ಅವನನ್ನು ಇಸ್ರೇಲ್ ಕುಲಗಳಿಂದ ತೆಗೆದುಹಾಕುವನು. ಈ ಪುಸ್ತಕದಲ್ಲಿ ಬರೆದ ಎಲ್ಲಾ ಶಾಪಗಳಿಂದ ಬಾಧಿಸಿ ನಾಶಪಡಿಸುವನು. ಈ ಬೋಧನಾ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಗೆ ಅದು ಸೇರಿರುತ್ತದೆ.
ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು
(ಲೂಕ 12:51-53; 14:26-27)
34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:
‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)
37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.
ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ
(ಮಾರ್ಕ 9:41)
40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International