Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:65-72

65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
    ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
    ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
    ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
    ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
    ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
    ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
    ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.

ಯೆಶಾಯ 57:14-21

ಯೆಹೋವನು ತನ್ನ ಜನರನ್ನು ಕಾಪಾಡುವನು

14 ದಾರಿಯನ್ನು ಸರಿಪಡಿಸಿರಿ, ದಾರಿಯನ್ನು ಸರಿಪಡಿಸಿರಿ!
    ನನ್ನ ಜನರಿಗೆ ದಾರಿಯು ಸರಾಗವಾಗಿರುವಂತೆ ಅಡತಡೆಗಳನ್ನು ತೆಗೆದುಹಾಕಿರಿ ಎಂದು ಒಂದು ಸ್ವರವು ನುಡಿಯುತ್ತದೆ.

15 ದೇವರು ಉನ್ನತಸ್ಥಾನದಲ್ಲಿ ಎತ್ತಲ್ಪಟ್ಟಿದ್ದಾನೆ.
    ಆತನು ಸದಾಕಾಲ ಜೀವಿಸುತ್ತಾನೆ.
    ಆತನ ಹೆಸರು ಪರಿಶುದ್ಧವಾದದ್ದು.
ದೇವರು ಹೇಳುವುದೇನೆಂದರೆ, “ನಾನು ಉನ್ನತಲೋಕವೆಂಬ ಪವಿತ್ರಸ್ಥಳದಲ್ಲಿ ವಾಸಿಸುತ್ತೇನೆ.
    ಅದೇ ಸಮಯದಲ್ಲಿ ದುಃಖಪಡುವವರೂ ದೀನರೂ ಆಗಿರುವ ಜನರೊಂದಿಗೆ ವಾಸಮಾಡುತ್ತೇನೆ.
ಆತ್ಮದಲ್ಲಿ ದೀನರಾಗಿರುವವರಿಗೆ ನಾನು ಹೊಸಜನ್ಮ ಕೊಡುತ್ತೇನೆ.
    ಹೃದಯದಲ್ಲಿ ದುಃಖಿಸುವವರಿಗೆ ನಾನು ಹೊಸ ಜೀವ ಕೊಡುತ್ತೇನೆ.
16 ನಾನು ನಿತ್ಯಕಾಲಕ್ಕೂ ಯುದ್ಧ ಮಾಡುವವನಲ್ಲ.
    ನಾನು ಎಂದೆಂದಿಗೂ ಕೋಪಗೊಳ್ಳುವವನಲ್ಲ.
ನಾನು ಹಾಗೆ ಮಾಡುವವನಾದರೆ
    ನಾನು ಕೊಟ್ಟಿರುವ ಮನುಷ್ಯನ ಆತ್ಮವು ನನ್ನ ಮುಂದೆಯೇ ಸಾಯುವದು.
17 ಈ ಜನರು ದುಷ್ಕೃತ್ಯಗಳನ್ನು ನಡಿಸಿ ನನಗೆ ಕೋಪವನ್ನೆಬ್ಬಿಸಿದರು.
    ಆದ್ದರಿಂದ ನಾನು ಇಸ್ರೇಲನ್ನು ಶಿಕ್ಷಿಸಿದೆನು.
ನಾನು ಕೋಪಗೊಂಡು ಅವರಿಗೆ ವಿಮುಖನಾದೆನು.
    ಇಸ್ರೇಲ್ ನನ್ನನ್ನು ತೊರೆದು ತನಗಿಷ್ಟವಾದ ಸ್ಥಳಕ್ಕೆ[a] ಹೋದನು.
18 ಇಸ್ರೇಲ್ ಎಲ್ಲಿಗೆ ಹೋದನೆಂದು ನಾನು ನೋಡಿದೆನು.
    ನಾನು ಅವನನ್ನು ಸ್ವಸ್ಥ ಮಾಡುವೆನು.
ಅವನನ್ನು ಆದರಿಸುವೆನು.
    ಒಳ್ಳೆಯ ಮಾತುಗಳಿಂದ ಅವನನ್ನು ರಮಿಸುವೆನು.
    ಆಗ ಅವನೂ ಅವನ ಜನರೂ ವ್ಯಸನಪಡುವದಿಲ್ಲ.
19 ನಾನು ಅವರಿಗೆ ‘ಸಮಾಧಾನ’ ಎಂಬ ಹೊಸ ಪದವನ್ನು ಕಲಿಸುತ್ತೇನೆ.
    ನನ್ನ ಬಳಿಯಲ್ಲಿರುವವರಿಗೂ ನನ್ನಿಂದ ದೂರದಲ್ಲಿರುವವರಿಗೂ ಸಮಾಧಾನವನ್ನು ಅನುಗ್ರಹಿಸುವೆನು.
ನಾನು ಅವರನ್ನು ಗುಣಪಡಿಸುವೆನು.”
ಇದು ಯೆಹೋವನ ನುಡಿ.

20 ದುಷ್ಟಜನರು ರೊಚ್ಚಿಗೆದ್ದ ಸಾಗರದಂತೆ,
    ಸಮಾಧಾನವಾಗಿಯೂ ಮೌನವಾಗಿಯೂ ಇರಲಾರರು.
ಅವರು ಸಿಟ್ಟುಗೊಂಡು ಸಾಗರದಂತೆ
    ಕೆಸರನ್ನು ಕದಡಿಸುವರು.
21 ನನ್ನ ದೇವರು ಹೇಳುವುದೇನೆಂದರೆ:
    “ದುಷ್ಟ ಜನರಿಗೆ ಸಮಾಧಾನವಿಲ್ಲ.”

ಲೂಕ 14:15-24

ಔತಣಕೂಟದ ಸಾಮ್ಯ

(ಮತ್ತಾಯ 22:1-10)

15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.

16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International