Revised Common Lectionary (Complementary)
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
12 ಸರ್ವಶಕ್ತನಾದ ಯೆಹೋವನು ಒಂದು ವಿಶೇಷ ದಿನವನ್ನು ಯೋಜಿಸಿರುತ್ತಾನೆ. ಆ ದಿನದಲ್ಲಿ ಯೆಹೋವನು ಅಹಂಕಾರಿಗಳನ್ನೂ ಜಂಬಕೊಚ್ಚಿಕೊಳ್ಳುವವರನ್ನೂ ಶಿಕ್ಷಿಸುವನು. ಆಗ ಆ ಅಹಂಕಾರಿಗಳನ್ನು ಜನರು ದೊಡ್ಡಜನರೆಂದು ಪರಿಗಣಿಸುವುದಿಲ್ಲ. 13 ಆ ಅಹಂಕಾರದ ಜನರು ಲೆಬನೋನಿನ ದೇವದಾರು ಮರಗಳಂತಿರುವರು. ಬಾಷಾನಿನ ಮಹಾದೇವದಾರು ಮರಗಳಂತಿರುವರು. ಆದರೆ ಯೆಹೋವನು ಅವರನ್ನು ಶಿಕ್ಷಿಸುವನು. 14 ಆ ಅಹಂಕಾರಿಗಳು ಉನ್ನತವಾದ ಪರ್ವತಗಳಂತೆಯೂ, ಎತ್ತರವಾದ ಬೆಟ್ಟಗಳಂತೆಯೂ ಇದ್ದಾರೆ. 15 ಅವರು ಎತ್ತರವಾದ ಬುರುಜುಗಳಂತೆಯೂ ಬಲಿಷ್ಠವಾದ ಕೋಟೆಗೋಡೆಯಂತೆಯೂ ಇರುವರು. ಆದರೆ ದೇವರು ಅವರನ್ನು ಶಿಕ್ಷಿಸುವನು. 16 ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.
17 ಆ ಸಮಯದಲ್ಲಿ ಜನರು ತಮ್ಮ ಅಹಂಕಾರವನ್ನು ತೋರಿಸುವುದಿಲ್ಲ. ಈಗ ಅಹಂಕಾರಿಗಳಾಗಿರುವವರು ನೆಲದತನಕ ಬಗ್ಗಿಹೋಗುವರು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.
1 ದೇವರ ಸೇವಕನಾದ ಮತ್ತು ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಬರೆಯುವ ಪತ್ರ. ದೇವರು ಆರಿಸಿಕೊಂಡ ಜನರ ನಂಬಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಮತ್ತು ಅವರಿಗೆ ಸತ್ಯವನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಲಾಯಿತು. ದೇವರ ಸೇವೆಯನ್ನು ಹೇಗೆ ಮಾಡಬೇಕೆಂಬುದನ್ನು ಆ ಸತ್ಯವು ತೋರ್ಪಡಿಸುತ್ತಿದೆ. 2 ನಿತ್ಯಜೀವದ ಮೇಲೆ ನಮಗಿರುವ ನಿರೀಕ್ಷೆಯಿಂದಲೇ ಆ ನಂಬಿಕೆ ಮತ್ತು ಜ್ಞಾನಗಳು ಉಂಟಾಗಿವೆ. ನಿತ್ಯಜೀವವನ್ನು ಕೊಡುವುದಾಗಿ ದೇವರು ನಮಗೆ ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ್ದನು. ದೇವರು ಸುಳ್ಳು ಹೇಳುವುದಿಲ್ಲ. 3 ತಕ್ಕಕಾಲ ಬಂದಾಗ ದೇವರು ಆ ನಿತ್ಯಜೀವವನ್ನು ಲೋಕಕ್ಕೆ ಪ್ರಕಟಿಸಿದನು. ನನಗೊಪ್ಪಿಸಿರುವ ಈ ಸಂದೇಶವನ್ನು ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರವಾಗಿ ಸಾರುತ್ತಿದ್ದೇನೆ.
4 ನಾನು ಈ ಪತ್ರವನ್ನು ತೀತನಿಗೆ ಬರೆಯುತ್ತಿದ್ದೇನೆ. ನಮ್ಮೆಲ್ಲರ ನಂಬಿಕೆಯ ಸಂಬಂಧದಲ್ಲಿ ನೀನು ನನಗೆ ನಿಜವಾದ ಮಗನಂತಿರುವೆ.
ನಮ್ಮ ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಲಭಿಸಲಿ.
ಕ್ರೇತದಲ್ಲಿ ತೀತನ ಕಾರ್ಯ
5 ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. 6 ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. 7 ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. 8 ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. 9 ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.
Kannada Holy Bible: Easy-to-Read Version. All rights reserved. © 1997 Bible League International