Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:65-72

65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
    ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
    ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
    ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
    ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
    ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
    ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
    ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.

2 ಪೂರ್ವಕಾಲವೃತ್ತಾಂತ 12:1-12

ಈಜಿಪ್ಟಿನ ರಾಜನಾದ ಶೀಶಕನು ಜೆರುಸಲೇಮಿನ ಮೇಲೆ ಧಾಳಿಮಾಡಿದ್ದು

12 ರೆಹಬ್ಬಾಮನು ಬಲಾಢ್ಯನಾದ ರಾಜನಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ ನಂತರ ಅವನೂ ಯೆಹೂದದ ಜನರೂ ದೇವರಾದ ಯೆಹೋವನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದರು.

ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಶೀಶಕನು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಶೀಶಕನು ಈಜಿಪ್ಟಿನ ರಾಜ. ರೆಹಬ್ಬಾಮನೂ ಯೆಹೂದ ಪ್ರಾಂತ್ಯದ ಜನರೂ ಯೆಹೋವನಿಗೆ ಅವಿಧೇಯರಾದದ್ದೇ ಈ ಮುತ್ತಿಗೆಗೆ ಕಾರಣ. ಶೀಶಕನ ಬಳಿಯಲ್ಲಿ ಹನ್ನೆರಡು ಸಾವಿರ ರಥಗಳು, ಅರವತ್ತುಸಾವಿರ ರಾಹುತರು ಮತ್ತು ಲೆಕ್ಕಿಸಲಾರದಷ್ಟು ಸೈನಿಕರು ಇದ್ದರು. ಅವನ ಆ ದೊಡ್ಡ ಸೈನ್ಯದಲ್ಲಿ ಲಿಬ್ಯ, ಇಥಿಯೋಪ್ಯ ಮತ್ತು ಸುಕ್ಕೀಯ ದೇಶದ ಸಿಪಾಯಿಗಳಿದ್ದರು. ಶೀಶಕನು ಯೆಹೂದ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಂಡು ಜೆರುಸಲೇಮಿನತ್ತ ನಡೆದನು.

ಆಗ ಪ್ರವಾದಿಯಾದ ಶೆಮಾಯನು, ಶೀಶಕನಿಗೆ ಹೆದರಿಕೊಂಡು ಜೆರುಸಲೇಮಿನಲ್ಲಿ ಒಟ್ಟಾಗಿ ಸೇರಿ ಬಂದಿದ್ದ ರೆಹಬ್ಬಾಮನ ಮತ್ತು ಇಸ್ರೇಲಿನ ಪ್ರಧಾನರ ಬಳಿಗೆ ಬಂದು, “ಯೆಹೋವನು ಹೇಳುವುದೇನೆಂದರೆ, ರೆಹಬ್ಬಾಮನೇ, ನೀನು ಮತ್ತು ಯೆಹೂದದ ಜನರು ನನ್ನನ್ನು ತೊರೆದಿದ್ದೀರಿ. ನನ್ನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದ್ದೀರಿ. ಈಗ ನಾನು ನಿಮಗೆ ಸಹಾಯ ಮಾಡದೆ ಶೀಶಕನನ್ನು ಎದುರಿಸಲು ನಿಮ್ಮನ್ನು ಬಿಟ್ಟುಬಿಡುವೆನು” ಎಂದು ಹೇಳಿದನು.

ಆಗ ಯೆಹೂದ ಪ್ರಾಂತ್ಯದ ನಾಯಕರುಗಳೂ ರೆಹಬ್ಬಾಮನೂ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ತಮ್ಮನ್ನು ದೇವರ ಮುಂದೆ ತಗ್ಗಿಸಿಕೊಂಡರು. “ಯೆಹೋವನು ನೀತಿವಂತನೇ ಸರಿ” ಎಂದರು.

ಅರಸನೂ ಯೆಹೂದದ ನಾಯಕರೂ ತನ್ನೆದುರಿನಲ್ಲಿ ತಗ್ಗಿಸಿಕೊಂಡದ್ದನ್ನು ಯೆಹೋವನು ನೋಡಿ ಶೆಮಾಯನ ಮೂಲಕ ಈ ಸಂದೇಶವನ್ನು ಕಳುಹಿಸಿದನು. “ಅರಸನೂ ನಾಯಕರೂ ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಪಡಿಸದೆ ಬೇಗನೆ ರಕ್ಷಿಸುವೆನು. ಜೆರುಸಲೇಮಿನ ಮೇಲೆ ನನ್ನ ಕೋಪವು ಸುರಿಯುವಂತೆ ನಾನು ಶೀಶಕನನ್ನು ಉಪಯೋಗಿಸುವದಿಲ್ಲ. ಆದರೆ ಜೆರುಸಲೇಮಿನ ಜನರು ಶೀಶಕನ ಸೇವಕರಾಗುವರು. ಯಾಕೆಂದರೆ ನನ್ನ ಸೇವೆಮಾಡುವುದಕ್ಕೂ ಇತರ ರಾಜರುಗಳ ಸೇವೆಮಾಡುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ.”

ಶೀಶಕನು ಜೆರುಸಲೇಮಿನೊಳಗೆ ನುಗ್ಗಿ ದೇವಾಲಯದಲ್ಲಿಟ್ಟಿದ್ದ ಭಂಡಾರಗಳನ್ನೆಲ್ಲಾ ಸೂರೆಮಾಡಿದನು. ರಾಜನ ಅರಮನೆಯದಲ್ಲಿದ್ದ ವಸ್ತುಗಳನ್ನೂ ಸೊಲೊಮೋನನು ಮಾಡಿಸಿದ್ದ ಬಂಗಾರದ ಗುರಾಣಿಗಳನ್ನೂ ಸೂರೆಮಾಡಿ ತನ್ನ ದೇಶಕ್ಕೆ ಒಯ್ದನು. 10 ರೆಹಬ್ಬಾಮನು ಬಂಗಾರದ ಗುರಾಣಿಗಳ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ ರಾಜನ ಅರಮನೆಯನ್ನು ಕಾಯುವ ಕಾವಲುಗಾರರ ವಶಕ್ಕೆ ಅವುಗಳನ್ನು ಕೊಟ್ಟನು. 11 ರಾಜನು ದೇವಾಲಯವನ್ನು ಪ್ರವೇಶಿಸುವಾಗ, ಕಾವಲುಗಾರರು ಆ ಗುರಾಣಿಗಳನ್ನು ಹೊರತರುವರು. ತರುವಾಯ ಅವುಗಳನ್ನು ಮೊದಲಿದ್ದ ಸ್ಥಳದಲ್ಲಿಯೇ ಇಡುವರು.

12 ರೆಹಬ್ಬಾಮನು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಮೇಲಿದ್ದ ದೇವರ ಕೋಪವು ಶಾಂತವಾಯಿತು. ಹೀಗೆ ಯೆಹೋವನು ಅವನನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. ಯಾಕೆಂದರೆ ಯೆಹೂದದಲ್ಲಿ ಇನ್ನೂ ಕೆಲವು ನೀತಿವಂತರಿದ್ದರು.[a]

ಇಬ್ರಿಯರಿಗೆ 13:7-21

ನಿಮ್ಮ ಸಭಾನಾಯಕರನ್ನು ನೆನಪು ಮಾಡಿಕೊಳ್ಳಿ. ಅವರು ನಿಮಗೆ ದೇವರ ಸಂದೇಶವನ್ನು ಬೋಧಿಸಿದರು. ಅವರು ಹೇಗೆ ಜೀವಿಸಿದ್ದರು ಮತ್ತು ಹೇಗೆ ಸತ್ತರು ಎಂಬುದನ್ನು ನೆನಪಿಸಿಕೊಳ್ಳಿ. ಅವರ ನಂಬಿಕೆಯನ್ನು ಅನುಸರಿಸಿರಿ. ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ಸದಾಕಾಲ ಹಾಗೆಯೇ ಇರುವನು. ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.

10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ. 11 ಪ್ರಧಾನಯಾಜಕನು ಪಶುಗಳ ರಕ್ತವನ್ನು ಮಹಾ ಪವಿತ್ರಸ್ಥಳದೊಳಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನು ಪಾಪಗಳಿಗಾಗಿ ಆ ರಕ್ತವನ್ನು ಅರ್ಪಿಸುತ್ತಾನೆ. ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವೆ. 12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು. 13 ನಾವು ಪಾಳೆಯದ ಹೊರಗಡೆಯಲ್ಲಿರುವ ಆತನ ಬಳಿಗೆ ಹೋಗಬೇಕು. ಆತನಿಗಾದ ಅಪಮಾನವನ್ನು ನಾವೂ ಸ್ವೀಕರಿಸಿಕೊಳ್ಳಬೇಕು. 14 ಈ ಲೋಕದಲ್ಲಿ ಶಾಶ್ವತವಾಗಿರುವ ನಗರವೇ ಇಲ್ಲ. ಆದರೆ ನಾವು ಮುಂದೆ ಬರುವ ನಗರಕ್ಕಾಗಿ ಕಾಯುತ್ತಿದ್ದೇವೆ. 15 ಆದ್ದರಿಂದ ಆತನ ಮೂಲಕ ನಾವು ದೇವರಿಗೆ ಯಜ್ಞಗಳನ್ನು ಅರ್ಪಿಸುವುದನ್ನು ನಿಲ್ಲಿಸಬಾರದು. ಆತನೇ ಪ್ರಭುವೆಂದು ನಮ್ಮ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರವನ್ನೂ ದಾನಧರ್ಮವನ್ನೂ ಮರೆಯದಿರಿ. ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.

17 ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ ಮತ್ತು ಅವರ ಅಧಿಕಾರದ ಅಧೀನದಲ್ಲಿರಿ. ಅವರೇ ನಿಮಗೆ ಜವಾಬ್ದಾರರು. ಅವರು ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಈ ಕಾರ್ಯವನ್ನು ವ್ಯಸನದಿಂದ ಮಾಡದೆ ಸಂತೋಷದಿಂದ ಮಾಡಲು ಸಾಧ್ಯವಾಗುವಂತೆ ಅವರಿಗೆ ವಿಧೇಯರಾಗಿರಿ. ಅವರ ಕಾರ್ಯವನ್ನು ಕಷ್ಟಕರವನ್ನಾಗಿ ಮಾಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ.

18 ನಮಗೋಸ್ಕರ ಪ್ರಾರ್ಥಿಸುವುದನ್ನು ಮುಂದುವರಿಸಿರಿ. ನಾವು ಯಾವಾಗಲೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದರಿಂದ, ನಮ್ಮ ಹೃದಯಗಳು ಶುದ್ಧವಾಗಿವೆ ಎಂಬ ನಂಬಿಕೆ ನಮಗಿದೆ. 19 ದೇವರು ನನ್ನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸುವಂತೆ ನೀವು ಆತನಲ್ಲಿ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನಗೆ ಅತ್ಯಗತ್ಯವಾದದ್ದು ಇದೇ.

20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International