Revised Common Lectionary (Complementary)
112 ಯೆಹೋವನಿಗೆ ಸ್ತೋತ್ರವಾಗಲಿ!
ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
2 ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
3 ಅವನ ಕುಟುಂಬದವರು ಐಶ್ವರ್ಯವಂತರಾಗುವರು.
ಅವನ ನೀತಿಯು ಶಾಶ್ವತವಾಗಿರುವುದು.
4 ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
5 ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
6 ಅವನೆಂದಿಗೂ ಬೀಳುವುದಿಲ್ಲ.
ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
7 ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
8 ಅವನ ಮನಸ್ಸು ದೃಢವಾಗಿರುವುದರಿಂದ
ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
9 ಅವನು ಬಡವರಿಗೆ ಉದಾರವಾಗಿ ಕೊಡುವನು.
ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
ಅವರ ದುರಾಶೆಯು ಈಡೇರದು.
21 ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.
2 ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.
3 ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
4 ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.
24 ಗರ್ವಿಷ್ಠನೂ ದುರಾಭಿಮಾನಿಯೂ ಆಗಿರುವವನಿಗೆ ಗೇಲಿಗಾರನೆಂದು ಹೆಸರು. ಅವನ ನಡತೆಯು ಗರ್ವದ ಮದದಿಂದ ಕೂಡಿರುತ್ತದೆ.
25 ಸೋಮಾರಿಯ ಆಸೆ ಅವನನ್ನು ಉಪವಾಸದಿಂದ ಸಾಯಿಸುವುದು, ಯಾಕೆಂದರೆ ಅವನು ದುಡಿಯುವುದಿಲ್ಲ.
26 ದುರಾಶೆಯುಳ್ಳವನು ಹೆಚ್ಚುಹೆಚ್ಚು ಅಪೇಕ್ಷಿಸುತ್ತಲೇ ಇರುವನು, ಆದರೆ ನೀತಿವಂತನು ಉದಾರವಾಗಿ ಕೊಡುವನು.
ತಾಯಿಯೊಬ್ಬಳ ವಿಶೇಷ ಕೋರಿಕೆ
(ಮಾರ್ಕ 10:35-45)
20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.
21 ಯೇಸು, “ನಿನ್ನ ಕೋರಿಕೆ ಏನು?” ಎಂದನು.
ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.
22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.
ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.
23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.
24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International