Revised Common Lectionary (Complementary)
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.
33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ರಾಜನಾಗಿ ನಿಮ್ಮ ಮೇಲೆ ದೊರೆತನ ಮಾಡುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ದಂಡಿಸುವೆನು. ನಿಮ್ಮ ವಿರುದ್ಧವಾಗಿ ನನ್ನ ಕೋಪವನ್ನು ತೋರ್ಪಡಿಸುವೆನು. 34 ಪರದೇಶಗಳಿಂದ ನಾನು ನಿಮ್ಮನ್ನು ಹೊರತರುವೆನು. ನಾನು ಆ ದೇಶಗಳಲ್ಲಿ ನಿಮ್ಮನ್ನು ಚದರಿಸಿದೆನು. ಆದರೆ ಆ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸಿ ಹಿಂದಕ್ಕೆ ಬರಮಾಡುವೆನು. ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ಶಿಕ್ಷಿಸಿ ನನ್ನ ಕೋಪವನ್ನು ಪ್ರದರ್ಶಿಸುವೆನು. 35 ನಾನು ಹಿಂದಿನ ಕಾಲದಲ್ಲಿ ಮಾಡಿದಂತೆ ಮರುಭೂಮಿಗೆ ನಿಮ್ಮನ್ನು ನಡೆಸುವೆನು. ಆದರೆ ಇದು ಅನ್ಯಜನಾಂಗಗಳು ವಾಸಿಸುವ ಸ್ಥಳದಲ್ಲಿರುವುದು ಮತ್ತು ನಾನು ಎದುರುಬದುರಾಗಿ ನಿಂತು ನಿಮಗೆ ನ್ಯಾಯತೀರಿಸುವೆನು. 36 ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪೂರ್ವಿಕರನ್ನು ದಂಡಿಸಿದಂತೆ ನಿಮ್ಮನ್ನೂ ದಂಡಿಸುವೆನು.” ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.
37 “ನಾನು ನಿಮ್ಮ ನ್ಯಾಯವಿಚಾರಣೆ ಮಾಡಿ ನೀವು ಮಾಡಿದ ತಪ್ಪುಗಳಿಗೆ ನನ್ನ ಒಡಂಬಡಿಕೆಯ ಪ್ರಕಾರ ನಿಮ್ಮನ್ನು ಶಿಕ್ಷಿಸುವೆನು. 38 ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನ್ನು ಅವರ ಸ್ವದೇಶದಿಂದ ತೆಗೆದುಬಿಡುವೆನು. ಅವರು ಇನ್ನೆಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಬರುವುದೇ ಇಲ್ಲ. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.”
39 ಇಸ್ರೇಲ್ ಜನರೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ಹೊಲಸು ವಿಗ್ರಹಗಳನ್ನು ಆರಾಧಿಸಬೇಕೆನ್ನುವವನು ಹೋಗಿ ಆರಾಧಿಸಲಿ. ಮುಂದಿನ ಕಾಲದಲ್ಲಂತೂ ನೀವು ನನ್ನ ಬುದ್ಧಿಮಾತನ್ನು ಕೇಳೇ ಕೇಳುವಿರಿ. ನನ್ನ ಪರಿಶುದ್ಧ ಹೆಸರನ್ನು ನೀವು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
40 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ. 41 ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನ್ನು ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆತಂದಾಗ ಆಗುವದು. ನಾನು ನಿಮ್ಮನ್ನು ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಮೂಲಕ ನನ್ನ ಪವಿತ್ರತೆಯನ್ನು ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನ್ನು ನೋಡುವರು. 42 ನಾನು ನಿಮ್ಮನ್ನು ತಿರುಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಇಸ್ರೇಲ್ ದೇಶಕ್ಕೆ ಬರಮಾಡಿದಾಗ ನಾನೇ ಯೆಹೋವನೆಂದು ಅರಿತುಕೊಳ್ಳುವಿರಿ. 43 ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ. 44 ಇಸ್ರೇಲ್ ಜನಾಂಗಗಳೇ, ನೀವು ಅನೇಕ ಕೆಟ್ಟ ವಿಷಯಗಳನ್ನು ಮಾಡಿರುತ್ತೀರಿ. ಆ ದುಷ್ಕೃತ್ಯಗಳಿಗಾಗಿ ನೀವು ನಾಶವಾಗಿ ಹೋಗಬೇಕಾಗಿತ್ತು. ಆದರೆ ನನ್ನ ಒಳ್ಳೆಯ ಹೆಸರಿನ ಸಲುವಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ನಾನು ನಿಮಗೆ ವಿಧಿಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಸಬ್ಬತ್‌ದಿನದಲ್ಲಿ ಗುಣಹೊಂದಿದ ವ್ಯಕ್ತಿ
(ಮತ್ತಾಯ 12:9-14; ಮಾರ್ಕ 3:1-6)
6 ಮತ್ತೊಂದು ಸಬ್ಬತ್‌ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಿಸಿದನು. ಬಲಗೈ ಬತ್ತಿಹೋಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. 7 ಯೇಸು ಅವನನ್ನು ವಾಸಿಮಾಡಿದರೆ, ಆತನ ಮೇಲೆ ತಪ್ಪು ಹೊರಿಸಬಹುದೆಂದು ಧರ್ಮೋಪದೇಶಕರು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. 8 ಆದರೆ ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಯೇಸುವು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಬಂದು ಇಲ್ಲಿ ನಿಂತುಕೊ” ಎಂದು ಹೇಳಿದನು. ಅವನು ಎದ್ದುಬಂದು ನಿಂತನು. 9 ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು.
10 ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು. 11 ಫರಿಸಾಯರು ಮತ್ತು ಧರ್ಮೋಪದೇಶಕರು ಬಹಳವಾಗಿ ಕೋಪಗೊಂಡರು. ಅವರು, “ನಾವು ಯೇಸುವಿಗೆ ಏನು ಮಾಡೋಣ?” ಎಂದು ತಮ್ಮತಮ್ಮೊಳಗೆ ಸಂಚುಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International