Revised Common Lectionary (Complementary)
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.
18 ಅವರ ಮಕ್ಕಳಿಗೆ ನಾನು ಬುದ್ಧಿಹೇಳುತ್ತಾ, “ನಿಮ್ಮ ಪೂರ್ವಿಕರಂತೆ ನೀವಾಗಬೇಡಿರಿ. ಅವರ ಅಸಹ್ಯವಾದ ವಿಗ್ರಹಗಳಿಂದ ನಿಮ್ಮನ್ನು ನೀವು ಅಶುದ್ಧಮಾಡಿಕೊಳ್ಳಬೇಡಿರಿ. ಅವರ ಕಟ್ಟಳೆಗಳನ್ನು ಅನುಸರಿಸಬೇಡಿರಿ. ಅವರ ಆಜ್ಞೆಗಳಿಗೆ ವಿಧೇಯರಾಗಬೇಡಿರಿ. 19 ನಾನೇ ನಿಮ್ಮ ದೇವರಾದ ಯೆಹೋವನು. ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಿ, ನನ್ನ ಆಜ್ಞೆಗಳನ್ನು ಅನುಸರಿಸಿರಿ. ನಾನು ಹೇಳಿದವುಗಳನ್ನು ಮಾಡಿರಿ. 20 ನಾನು ನೇಮಿಸಿದ ಸಬ್ಬತ್ ದಿವಸಗಳು ಮಹತ್ವವಾದವುಗಳೆಂದು ಎಣಿಸಿರಿ. ನನ್ನ ಮತ್ತು ನಿಮ್ಮ ಸಂಬಂಧಕ್ಕೆ ಅವು ಗುರುತುಗಳಾಗಿವೆ. ನಾನು ನಿಮ್ಮ ಕರ್ತನು. ನಾನೇ ನಿಮ್ಮ ದೇವರಾದ ಯೆಹೋವನೆಂದು ತಿಳಿದುಕೊಳ್ಳಲು ಇವುಗಳು ಸಾಕ್ಷಿಗಳಾಗಿವೆ.”
21 “‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ಅವರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನ್ನು ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನ್ನ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಆದ್ದರಿಂದ ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನ್ನ ಕೋಪದ ತೀಕ್ಷ್ಣತೆಯನ್ನು ಅವರು ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆನು. 22 ಆದರೆ ನಾನು ನನ್ನನ್ನು ಹಾಗೆ ಮಾಡದಂತೆ ತಡೆದೆನು. ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದನ್ನು ಬೇರೆ ಜನಾಂಗದವರು ನೋಡಿರುತ್ತಾರೆ. ಆದ್ದರಿಂದ ನಾನು ಅವರನ್ನು ನಾಶಮಾಡಲಿಲ್ಲ. ನನ್ನ ಹೆಸರಿನ ಘನತೆಯನ್ನು ಉಳಿಸಿಕೊಂಡೆನು. 23 ಆಗ ನಾನು ಅಡವಿಯಲ್ಲಿ ಅವರೊಂದಿಗೆ ಇನ್ನೊಂದು ಮಾತುಕೊಟ್ಟೆನು. ನಾನು ಅವರನ್ನು ನಾನಾ ದೇಶಗಳಿಗೆ ಚದರಿಸಿಬಿಡುವೆನೆಂದು ಅವರಿಗೆ ತಿಳಿಸಿದೆನು.
24 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನ್ನು ಪೂಜಿಸಿದರು. 25 ಆಗ ನಾನು ಅವರಿಗೆ ಒಳ್ಳೆಯದಲ್ಲದ ಕಟ್ಟಳೆಗಳನ್ನು ಕೊಟ್ಟೆನು. ಜೀವವನ್ನು ಕೊಡಲು ಅಸಾಧ್ಯವಾದ ನಿಯಮಗಳನ್ನು ವಿಧಿಸಿದೆನು. 26 ಅವರು ತಮ್ಮ ಕಾಣಿಕೆಗಳಿಂದ ತಮ್ಮನ್ನೆ ಹೊಲಸು ಮಾಡಿಕೊಳ್ಳಲು ಅವರನ್ನು ಬಿಟ್ಟುಕೊಟ್ಟೆನು. ಅವರು ತಮ್ಮ ವಿಗ್ರಹಗಳಿಗೆ ತಮ್ಮ ಸ್ವಂತ ಚೊಚ್ಚಲು ಗಂಡುಮಕ್ಕಳನ್ನು ಆಹುತಿಕೊಡಲು ಪ್ರಾರಂಭಿಸಿದರು. ಈ ರೀತಿಯಾಗಿ ನಾನು ಆ ಜನರನ್ನು ನಾಶಮಾಡುವೆನು. ಆಗ ಅವರು ನಾನು ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.’ 27 ಆದ್ದರಿಂದ ನರಪುತ್ರನೇ, ಇಸ್ರೇಲ್ ಜನಾಂಗದವರೊಂದಿಗೆ ಮಾತನಾಡು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನಿಮ್ಮ ಪೂರ್ವಿಕರು ನನಗೆ ಅಪಮಾನ ಮಾಡಿದರು ಮತ್ತು ದ್ರೋಹ ಮಾಡಿದರು. 28 ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು. 29 ನಾನು ಇಸ್ರೇಲರಿಗೆ, “ನೀವು ಎತ್ತರದಲ್ಲಿರುವ ಪೂಜಾಸ್ಥಳಗಳಿಗೆ ಯಾಕೆ ಹೋಗುತ್ತೀರಿ?” ಎಂದು ಪ್ರಶ್ನಿಸಿದೆನು. ಆ ಪೂಜಾಸ್ಥಳಗಳು ಇಂದಿಗೂ “ಎತ್ತರವಾದ ಸ್ಥಳ” ಎಂದು ಕರೆಯಲ್ಪಡುತ್ತಿವೆ. ಈಗಲೂ ಆ ಪೂಜಾಸ್ಥಳಗಳು ಅಲ್ಲಿವೆ.’”
30 ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ನೀನು ಹೋಗಿ ಅವರಿಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನ್ನನ್ನು ನೀವು ತೊರೆದುಬಿಟ್ಟಿರಿ. 31 ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನ್ನರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನ್ನು ಬೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನ್ನ ಬಳಿಗೆ ಬಂದು ನನ್ನ ಸಲಹೆಗಳನ್ನು ಕೇಳಲು ನಿಮ್ಮನ್ನು ನಾನು ಸ್ವಾಗತಿಸಬೇಕೋ? ನಾನು ಒಡೆಯನಾದ ಯೆಹೋವನು. ನನ್ನ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನ್ನೂ ಕೊಡುವದಿಲ್ಲ. 32 ನಾವು ಮರದ ಮತ್ತು ಕಲ್ಲಿನ ವಸ್ತುಗಳನ್ನು ಪೂಜಿಸುತ್ತಾ ಇತರ ಜನಾಂಗಗಳಂತೆ ಇರೋಣ ಎಂದು ನೀವು ಯೋಚಿಸುತ್ತಲೇ ಇರುತ್ತೀರಿ. ನಿಮ್ಮ ಮನಸ್ಸುಗಳಲ್ಲಿರುವ ಈ ಆಲೋಚನೆಯು ಎಂದಿಗೂ ನೆರವೇರುವುದಿಲ್ಲ.’”
ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ
7 “ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.
8 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. 9 ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.
11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
Kannada Holy Bible: Easy-to-Read Version. All rights reserved. © 1997 Bible League International