Revised Common Lectionary (Complementary)
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.
ಯೆಹೋವನಿಗೆ ಇಸ್ರೇಲ್ ವಿಮುಖಗೊಂಡದ್ದು
20 ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳಲು ಒಂದು ದಿನ ಇಸ್ರೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದರು. ಅದು ಸೆರೆವಾಸದ ಏಳನೆ ವರ್ಷದ ಐದನೆ ತಿಂಗಳಿನ ಹತ್ತನೆಯ ದಿನ. ಹಿರಿಯರು ನನ್ನ ಎದುರಿನಲ್ಲಿ ಕುಳಿತುಕೊಂಡರು.
2 ಆಗ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 3 “ನರಪುತ್ರನೇ, ಇಸ್ರೇಲಿನ ಹಿರಿಯರೊಂದಿಗೆ ಮಾತಾಡಿ ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನೀವು ನನ್ನ ಬುದ್ಧಿವಾದವನ್ನು ಕೇಳಲು ಬಂದಿರುವಿರಾ? ನನ್ನ ಜೀವದಾಣೆ, ನನ್ನ ಬುದ್ಧಿವಾದವನ್ನು ನಿಮಗೆ ಹೇಳುವದಿಲ್ಲವೆಂದು ನಾನು ಪ್ರಮಾಣಮಾಡುತ್ತೇನೆ. ನನ್ನ ಒಡೆಯನಾದ ಯೆಹೋವನ ವಾಕ್ಯವಿದು.’ 4 ನರಪುತ್ರನೇ, ನೀನು ಅವರ ನ್ಯಾಯತೀರಿಸುವಿಯಾ? ಅವರ ಪೂರ್ವಿಕರು ಮಾಡಿದ ಭಯಂಕರ ಸಂಗತಿಗಳನ್ನು ನೀನು ಅವರಿಗೆ ಹೇಳಬೇಕು. 5 ನೀನು ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಇಸ್ರೇಲನ್ನು ಆರಿಸಿಕೊಂಡ ದಿವಸ ನಾನು ನನ್ನನ್ನು ಈಜಿಪ್ಟ್ ದೇಶದಲ್ಲಿ ಅವರಿಗೆ ಪ್ರಕಟಿಸಿಕೊಂಡೆನು. ನಾನು ನನ್ನ ಕೈಯನ್ನು ಮೇಲೆತ್ತಿ ಯಾಕೋಬನ ಕುಟುಂಬಕ್ಕೆ ವಾಗ್ದಾನ ಮಾಡಿದೆನು. ನಾನು ಅವರಿಗೆ, “ನಿಮ್ಮ ಒಡೆಯನಾದ ಯೆಹೋವನು ನಾನೇ.” ಎಂದು ಹೇಳಿದೆನು. 6 ಅವರನ್ನು ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.[a]
7 “‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನ್ನು ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಬಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಬುದಾಗಿ ಹೇಳಿದೆನು. 8 ಆದರೆ ಅವರು ನನ್ನ ವಿರುದ್ಧವಾಗಿ ಎದ್ದು ನನ್ನ ಮಾತುಗಳನ್ನು ಕೇಳದೆ ಹೋದರು. ತಮ್ಮ ವಿಗ್ರಹಗಳನ್ನು ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಆದ್ದರಿಂದ ನಾನು ಅವರನ್ನು (ಇಸ್ರೇಲರನ್ನು) ಈಜಿಪ್ಟಿನಲ್ಲಿಯೇ ನಾಶಮಾಡಿ ನನ್ನ ರೋಷಾಗ್ನಿಯನ್ನು ತೀರಿಸಿಕೊಳ್ಳಲು ಆಲೋಚಿಸಿದೆನು. 9 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಇಸ್ರೇಲರು ವಾಸವಾಗಿರುವ ಸ್ಥಳದಲ್ಲಿ ಜನರ ಮುಂದೆ ನನ್ನ ಹೆಸರನ್ನು ಅವಮಾನಕ್ಕೆ ಗುರಿಮಾಡಲು ನನಗೆ ಇಷ್ಟವಿರಲಿಲ್ಲ. ಈಜಿಪ್ಟಿನಿಂದ ಹೊರಗೆ ತರುತ್ತೇನೆಂಬ ವಾಗ್ದಾನದೊಡನೆ ನಾನು ಇಸ್ರೇಲರಿಗೆ ಪ್ರಕಟಿಸಿಕೊಂಡಿದ್ದನ್ನು ಅವರು ನೋಡಿದ್ದರು. ಆದ್ದರಿಂದ ನಾನು ಇಸ್ರೇಲರನ್ನು ಅವರ ಮುಂದೆ ನಾಶಮಾಡಲಿಲ್ಲ. 10 ನಾನು ಇಸ್ರೇಲ್ ಜನಾಂಗವನ್ನು ಈಜಿಪ್ಟಿನಿಂದ ಹೊರತಂದು ಅಡವಿ ಪ್ರದೇಶದಲ್ಲಿ ನಡೆಸಿದೆನು. 11 ಅಲ್ಲಿ ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟೆನು. ನನ್ನ ವಿಧಿನಿಯಮಗಳನ್ನು ತಿಳಿಸಿದೆನು. ಅವುಗಳನ್ನು ಕೈಕೊಂಡು ನಡೆಯುವ ಎಲ್ಲರೂ ಜೀವಿಸುತ್ತಾರೆ. 12 ಅವರ ವಿಶ್ರಾಂತಿ ದಿವಸಗಳ ಬಗ್ಗೆ ತಿಳಿಸಿದೆನು. ಆ ವಿಶೇಷ ದಿವಸಗಳು ನನಗೂ ಅವರಿಗೂ ಇರುವ ಸಂಬಂಧಕ್ಕೆ ಒಂದು ಗುರುತಾಗಿತ್ತು. ನಾನೇ ಯೆಹೋವನೆಂದೂ ನಾನು ಅವರನ್ನು ನನಗೆ ವಿಶೇಷವಾದವರನ್ನಾಗಿ ಮಾಡಿಕೊಳ್ಳುತ್ತಿರುವೆನೆಂದೂ ಅವು ತೋರಿಸುತ್ತಿದ್ದವು.
13 “‘ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನ್ನ ಆಜ್ಞೆಗಳನ್ನು ಅವರು ಅನುಸರಿಸಲಿಲ್ಲ. ನನ್ನ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಬ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಬಾಳುವನು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನ್ನ ರೌದ್ರದ ತೀವ್ರತೆಯನ್ನು ಅವರು ಅರಿತುಕೊಳ್ಳಲೆಂದು ನಾನು ಅವರನ್ನು ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು. 14 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಬೇರೆ ದೇಶದವರು ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ತರುವುದನ್ನು ನೋಡಿದರು. ನನ್ನ ಒಳ್ಳೆಯ ಹೆಸರನ್ನು ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಮುಂದೆ ಇಸ್ರೇಲನ್ನು ನಾಶಮಾಡಲಿಲ್ಲ. 15 ಅವರು ಅಡವಿಯಲ್ಲಿದ್ದಾಗ ನಾನು ಮತ್ತೊಂದು ಪ್ರಮಾಣವನ್ನು ಮಾಡಿದೆನು. ನಾನು ಅವರಿಗೆ ಕೊಟ್ಟಿದ್ದ ದೇಶಕ್ಕೆ ಅವರನ್ನು ಹೋಗಗೊಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಆ ದೇಶವು ಅತ್ಯುತ್ತಮವಾಗಿತ್ತು. ಎಲ್ಲಾ ದೇಶಗಳಿಗಿಂತ ಬಹು ಸುಂದರವಾದ ದೇಶ.[b]
16 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನನ್ನ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಅವರ ಮನಸ್ಸು ಆ ಹೊಲಸು ದೇವರುಗಳ ಮೇಲೆ ನೆಟ್ಟಿದ್ದರಿಂದ ಅವರು ಹಾಗೆಲ್ಲಾ ಮಾಡಿದರು. 17 ಆದರೆ ನಾನು ಅವರಿಗಾಗಿ ದುಃಖಗೊಂಡೆನು. ಆದ್ದರಿಂದ ಅವರನ್ನು ನಾನು ನಾಶಮಾಡಲಿಲ್ಲ. ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ.
ನಾವು ದೇವರನ್ನು ಅನುಸರಿಸಲೇಬೇಕು
7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8 ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.
ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
9 ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ
ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
10 ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು.
‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ.
ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
11 ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’
ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(A)
12 ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ. 13 ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ. 14 ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ. 15 ಪವಿತ್ರ ಗ್ರಂಥವು ಹೇಳುವುದೇನೆಂದರೆ:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(B)
16 ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ? 17 ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು. 18 ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ? 19 ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.
4 ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. 2 ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. 3 ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ:
“ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು
ನಾನು ಕೋಪಗೊಂಡು ಪ್ರಮಾಣ ಮಾಡಿದೆನು.”(C)
ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. 4 ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.”(D) 5 ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ”(E) ವೆಂದೂ ಹೇಳಿದ್ದಾನೆ.
6 ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. 7 ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು:
“ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.”(F)
8 ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. 9 ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 10 ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. 11 ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ.
Kannada Holy Bible: Easy-to-Read Version. All rights reserved. © 1997 Bible League International