Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 58:9-14

ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.

ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು. 10 ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.

11 ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.

12 ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.

13 ಸಬ್ಬತ್ತಿನ ವಿಷಯವಾಗಿ ಯೆಹೋವನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ನೀವು ಅನುಸರಿಸಿದರೆ ಮತ್ತು ಆ ವಿಶೇಷ ದಿನದಲ್ಲಿ ಸ್ವೇಚ್ಛೆಯಾಗಿ ನಡೆಯದಿದ್ದರೆ ಇದೆಲ್ಲಾ ನಿಮಗೆ ದೊರೆಯುವುದು. ಸಬ್ಬತ್‌ದಿವಸವನ್ನು ನೀವು ಸಂತಸದ ದಿವಸವೆಂದು ಕರೆಯಬೇಕು. ದೇವರ ಆ ವಿಶೇಷ ದಿವಸವನ್ನು ನೀವು ಸನ್ಮಾನಿಸಿ ಆ ದಿವಸದಲ್ಲಿ ನಿಮ್ಮ ಸ್ವಕಾರ್ಯಗಳನ್ನು ಮಾಡಕೂಡದು; ಹರಟೆ ಹೊಡೆಯಕೂಡದು. 14 ಆಗ ನೀವು ಯೆಹೋವನಲ್ಲಿ ಉಲ್ಲಾಸಿಸುವಿರಿ. ಆತನು ನಿಮ್ಮನ್ನು ಭೂಮಿಯಿಂದ ಮೇಲಕ್ಕಿರುವ ಉನ್ನತಸ್ಥಾನಕ್ಕೆ ಕೊಂಡೊಯ್ಯುವನು; ನಿಮ್ಮ ಪೂರ್ವಿಕನಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಆತನು ನಿಮಗೆ ಅದನ್ನು ಕೊಡುವನು. ಇದು ಯೆಹೋವನ ನುಡಿ.

ಕೀರ್ತನೆಗಳು 103:1-8

ರಚನೆಗಾರ: ದಾವೀದ.

103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
    ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
    ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
    ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
ಯೆಹೋವನು ನೀತಿವಂತನಾಗಿದ್ದಾನೆ.
    ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
    ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
    ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.

ಇಬ್ರಿಯರಿಗೆ 12:18-29

18 ನೀವು ಒಂದು ಹೊಸ ಸ್ಥಳಕ್ಕೆ ಬಂದಿರುವಿರಿ. ಅದು ಇಸ್ರೇಲಿನ ಜನರು ಬಂದ ಬೆಟ್ಟದ ಸ್ಥಳವಲ್ಲ. ಮುಟ್ಟುವುದಕ್ಕೆ ಸಾಧ್ಯವಾಗುವಂತಹ ಮತ್ತು ಬೆಂಕಿ ಹತ್ತಿಕೊಂಡಿರುವಂತಹ ಬೆಟ್ಟದ ಬಳಿಗೆ ನೀವು ಬಂದಿಲ್ಲ. ನೀವು ಕಗ್ಗತ್ತಲೆ, ದುಃಖ ಮತ್ತು ಬಿರಗಾಳಿಯ ಬಳಿಗೆ ಬಂದಿಲ್ಲ. 19 ನೀವು ತುತೂರಿಯ ಧ್ವನಿಯ ಬಳಿಗಾಗಲಿ ಅಥವಾ ನಿಮ್ಮೊಂದಿಗೆ ಮಾತನಾಡುವ ಸ್ವರದ ಬಳಿಗಾಗಲಿ ಬಂದಿಲ್ಲ. ಜನರು ಆ ಧ್ವನಿಯನ್ನು ಕೇಳಿದಾಗ, ಮತ್ತೊಂದು ಮಾತನ್ನು ತಮಗೆ ಹೇಳಬಾರದೆಂದು ಬೇಡಿಕೊಂಡರು. 20 “ಆ ಬೆಟ್ಟವನ್ನು ಮುಟ್ಟುವ ಏನನ್ನಾದರೂ ಸರಿ, ಅದು ಒಂದು ಪ್ರಾಣಿಯಾಗಿದ್ದರೂ ಅದನ್ನು ಕಲ್ಲೆಸೆದು ಕೊಂದುಹಾಕಿರಿ”(A) ಎಂಬ ಆಜ್ಞೆಯನ್ನು ಕೇಳಲು ಅವರು ಇಷ್ಟಪಡಲಿಲ್ಲ. 21 ಆ ಜನರು ಅಂದು ಕಂಡದ್ದು ಭಯಂಕರವಾಗಿದ್ದುದರಿಂದ ಮೋಶೆಯು, “ನಾನು ಭಯದಿಂದ ನಡುಗುತ್ತಿದ್ದೇನೆ”(B) ಎಂದು ಹೇಳಿದನು.

22 ಆದರೆ ನೀವು ಅಂಥ ಸ್ಥಳಕ್ಕೆ ಬಂದಿಲ್ಲ. ನೀವು ಬಂದಿರುವ ಹೊಸ ಸ್ಥಳ ಚೀಯೋನ್ ಬೆಟ್ಟ, ಜೀವಸ್ವರೂಪನಾದ ದೇವರು ವಾಸವಾಗಿರುವ ಪರಲೋಕದ ಜೆರುಸಲೇಮಿಗೂ ಸಹಸ್ರಾರು ದೇವದೂತರು ಸಂತೋಷದಿಂದ ಒಟ್ಟುಗೂಡಿರುವ ಸ್ಥಳಕ್ಕೂ ಬಂದಿರುವಿರಿ. 23 ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ. 24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

25 ದೇವರು ಮಾತನಾಡುವಾಗ ಆಲಿಸದೆ ಇರಬೇಡಿ. ಆತನು ಇಸ್ರೇಲರಿಗೆ ಈ ಲೋಕದಲ್ಲಿ ಎಚ್ಚರಿಕೆ ನೀಡಿದಾಗ, ಅವರು ಆತನ ಮಾತನ್ನು ಕೇಳಲಿಲ್ಲ. ಆದರೆ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ದೇವರು ಪರಲೋಕದಿಂದ ಮಾತಾಡುತ್ತಿದ್ದಾನೆ. ಆತನ ಮಾತನ್ನು ಆಲಿಸದ ಜನರು ಹೇಗೆ ತಪ್ಪಿಸಿಕೊಳ್ಳಲಾದೀತು? 26 ಆತನು ಮುಂಚೆ ಮಾತನಾಡಿದಾಗ, ಆತನ ಧ್ವನಿಯು ಭೂಮಿಯನ್ನು ನಡುಗಿಸಿತು. ಆದರೆ ಈಗ ಆತನು, “ಮತ್ತೊಂದು ಸಾರಿ ನಾನು ಭೂಮಿಯನ್ನು ನಡುಗಿಸುತ್ತೇನೆ, ಪರಲೋಕವನ್ನೂ ನಡುಗಿಸುತ್ತೇನೆ”(C) ಎಂದು ವಾಗ್ದಾನ ಮಾಡಿದ್ದಾನೆ. 27 “ಮತ್ತೊಂದು ಸಾರಿ” ಎಂಬ ಮಾತುಗಳು ಸೃಷ್ಟಿಗೊಂಡ ಎಲ್ಲವೂ ನಾಶವಾಗುತ್ತವೆ ಎಂಬುದನ್ನು ನಮಗೆ ಸ್ಪಷ್ಟಪಡಿಸುತ್ತವೆ. ಅವುಗಳನ್ನು ನಡುಗಿಸಲು ಸಾಧ್ಯ. ನಡುಗಿಸಲಾಗದಂಥವುಗಳು ಮಾತ್ರ ಸ್ಥಿರವಾಗಿರುತ್ತವೆ.

28 ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು. 29 ಏಕೆಂದರೆ ನಮ್ಮ “ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.”(D)

ಲೂಕ 13:10-17

ಯೇಸುವಿನಿಂದ ಗುಣಹೊಂದಿದ ಸ್ತ್ರೀ

10 ಒಂದು ಸಬ್ಬತ್‌ದಿನ ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. 11 ದೆವ್ವದಿಂದ ಪೀಡಿತಳಾಗಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆ ದೆವ್ವದಿಂದಾಗಿ ಆಕೆಗೆ ಹದಿನೆಂಟು ವರ್ಷಗಳಿಂದ ನಡು ಬಗ್ಗಿಕೊಂಡಿತ್ತು. ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಸಾಧ್ಯವಿರಲಿಲ್ಲ. 12 ಯೇಸು ಆಕೆಯನ್ನು ಕಂಡು, ತನ್ನ ಬಳಿಗೆ ಕರೆದು, “ಅಮ್ಮಾ, ನಿನ್ನ ಕಾಯಿಲೆ ನಿನ್ನನ್ನು ಬಿಟ್ಟುಹೋಗಿದೆ!” ಎಂದು ಹೇಳಿದನು. 13 ಯೇಸು ಆಕೆಯ ಮೇಲೆ ತನ್ನ ಕೈಗಳನ್ನಿಟ್ಟಾಗ ಆಕೆ ನೆಟ್ಟಗೆ ನಿಲ್ಲಲು ಶಕ್ತಳಾದಳು. ಆಕೆ ದೇವರನ್ನು ಕೊಂಡಾಡಿದಳು.

14 ಯೇಸು ಸಬ್ಬತ್‌ದಿನದಲ್ಲಿ ವಾಸಿಮಾಡಿದ್ದರಿಂದ ಸಭಾಮಂದಿರದ ಅಧಿಕಾರಿ ಕೋಪಗೊಂಡು ಜನರಿಗೆ, “ಕೆಲಸಕ್ಕಾಗಿ ವಾರದಲ್ಲಿ ಆರು ದಿನಗಳಿವೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ. ಸಬ್ಬತ್‌ದಿನದಲ್ಲಿ ವಾಸಿಮಾಡಿಸಿಕೊಳ್ಳಬಾರದು” ಎಂದು ಹೇಳಿದನು.

15 ಅದಕ್ಕೆ ಪ್ರಭುವು (ಯೇಸು), “ನೀವು ಕಪಟಿಗಳು! ನೀವೆಲ್ಲರೂ ನಿಮ್ಮ ದುಡಿಮೆಯ ಪಶುಗಳನ್ನು ಪ್ರತಿದಿನ ಬಿಚ್ಚಿ ನೀರು ಕುಡಿಸಲು ಕರೆದೊಯ್ಯುತೀರಿ. ಸಬ್ಬತ್‌ದಿನದಲ್ಲಿಯೂ ನೀವು ಹಾಗೆಯೇ ಮಾಡುತ್ತೀರಿ! 16 ನಾನು ವಾಸಿಮಾಡಿದ ಈ ಸ್ತ್ರೀಯಾದರೋ ಯೆಹೂದ್ಯಳು. ಸೈತಾನನು ಆಕೆಯನ್ನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು. ಆದ್ದರಿಂದ ಆಕೆಯನ್ನು ಸಬ್ಬತ್‌ದಿನದಂದು ಕಾಯಿಲೆಯಿಂದ ಬಿಡುಗಡೆ ಮಾಡುವುದು ಖಂಡಿತವಾಗಿಯೂ ತಪ್ಪಲ್ಲ!” ಎಂದು ಹೇಳಿದನು. 17 ಈ ಮಾತನ್ನು ಕೇಳಿದಾಗ, ಆತನನ್ನು ಟೀಕಿಸುತ್ತಿದ್ದ ಜನರೆಲ್ಲರಿಗೂ ತಮ್ಮ ಬಗ್ಗೆ ನಾಚಿಕೆಯಾಯಿತು. ಯೇಸು ಮಾಡುತ್ತಿದ್ದ ಅದ್ಭುತಕಾರ್ಯಗಳಿಗಾಗಿ ಜನರೆಲ್ಲರೂ ಸಂತೋಷಪಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International