Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 103:1-8

ರಚನೆಗಾರ: ದಾವೀದ.

103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
    ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
    ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
    ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
    ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
ಯೆಹೋವನು ನೀತಿವಂತನಾಗಿದ್ದಾನೆ.
    ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
    ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
    ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.

ನೆಹೆಮೀಯ 13:15-22

15 ಆ ದಿವಸಗಳಲ್ಲಿ ಯೆಹೂದದ ಜನರು ಸಬ್ಬತ್ ದಿನದಲ್ಲಿ ಕೆಲಸ ಮಾಡುವುದನ್ನು ನೋಡಿದೆನು. ಅವರು ದ್ರಾಕ್ಷಿಯನ್ನು ತುಳಿದು ದ್ರಾಕ್ಷಾರಸ ತಯಾರಿಸುತ್ತಿದ್ದರು. ದವಸಧಾನ್ಯಗಳನ್ನು ಕತ್ತೆಗಳ ಮೇಲೆ ಹೇರಿಸಿಕೊಂಡು ಹೋಗುತ್ತಿದ್ದರು. ಬೆಳೆಯನ್ನು ಮಾರಲು ಜೆರುಸಲೇಮಿಗೆ ಬರುತ್ತಿದ್ದರು. ನಾನು ಅವರನ್ನು ಕಟುವಾಗಿ ಎಚ್ಚರಿಸಿ ಇನ್ನು ಮುಂದೆ ಸಬ್ಬತ್ ದಿನದಲ್ಲಿ ಪಟ್ಟಣದೊಳಗೆ ಏನನ್ನೂ ತರಬಾರದೆಂದು ಆಜ್ಞಾಪಿಸಿದೆನು.

16 ಜೆರುಸಲೇಮ್ ನಗರದಲ್ಲಿ ತೂರ್ ದೇಶದ ಕೆಲವರು ವಾಸಿಸುತ್ತಿದ್ದರು. ಅವರು ಸಬ್ಬತ್ ದಿನದಲ್ಲಿ ಮೀನು ಮತ್ತು ಇತರ ವಸ್ತುಗಳನ್ನು ನಗರದೊಳಕ್ಕೆ ತಂದು ಮಾರುತ್ತಿದ್ದರು. ಯೆಹೂದ್ಯರು ಅವರಿಂದ ಕೊಂಡುಕೊಳ್ಳುತ್ತಿದ್ದರು. 17 ನಾನು ಯೆಹೂದ ಪ್ರಾಂತದ ಗೌರವಸ್ಥ ಜನರಿಗೆ, “ಇದು ತಪ್ಪು, ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ನೀವು ಸಬ್ಬತ್ ದಿನವನ್ನು ಅಶುದ್ಧವನ್ನಾಗಿ ಮಾಡುತ್ತಿದ್ದೀರಿ. ಅದನ್ನು ಸಾಮಾನ್ಯ ದಿನದಂತೆ ಮಾಡುತ್ತಿದ್ದೀರಿ. 18 ನಮ್ಮ ಪೂರ್ವಿಕರೂ ಇದೇ ರೀತಿ ಮಾಡಿದರು. ಆ ಕಾರಣದಿಂದ ನಮ್ಮ ದೇವರು ಇಂಥಾ ತೊಂದರೆಗಳನ್ನು ನಮ್ಮ ನಗರಕ್ಕೆ ತಂದೊಡ್ಡಿದನು. ನೀವು ಸಬ್ಬತ್ ದಿನವನ್ನು ಅಶುದ್ಧಮಾಡಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ಕೋಪವನ್ನು ಬರಮಾಡಿಕೊಳ್ಳುತ್ತಿದ್ದೀರಿ. ದೇವರು ಇದಕ್ಕಾಗಿ ಭಯಂಕರ ಶಿಕ್ಷೆಯನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದೆನು.

19 ಅಲ್ಲದೆ ಶುಕ್ರವಾರ ಸೂರ್ಯಸ್ತಮಾನಕ್ಕಿಂತ ಮುಂಚೆ ಜೆರುಸಲೇಮಿನ ಬಾಗಿಲ ಕದಗಳನ್ನು ಮುಚ್ಚಲು ಆಜ್ಞೆಯಿತ್ತೆನು. ಸಬ್ಬತ್‌ದಿನ ಮುಗಿದ ಬಳಿಕವೇ ಅವುಗಳನ್ನು ತೆರೆಯಲು ಅಪ್ಪಣೆಕೊಟ್ಟೆನು. ದ್ವಾರಗಳ ಬಳಿ ನನ್ನ ಕೆಲವು ಜನರನ್ನು ನಿಲ್ಲಿಸಿ, ಸಬ್ಬತ್ ದಿನದಲ್ಲಿ ಯಾವ ಮೂಟೆಯನ್ನೂ ನಗರದೊಳಗೆ ತರಲು ಬಿಡಬಾರದು ಎಂದು ಅವರಿಗೆ ಆಜ್ಞಾಪಿಸಿದೆನು.

20 ಒಂದೆರಡು ಬಾರಿ ವ್ಯಾಪಾರಸ್ತರು ನಗರದ ಹೊರಗಡೆಯೇ ರಾತ್ರಿಯಲ್ಲಿ ಉಳಿದುಕೊಳ್ಳಬೇಕಾಯಿತು. 21 ನಾನು ಆ ವ್ಯಾಪಾರಸ್ತರಿಗೆ, “ನೀವು ಬಾಗಿಲಿಗೆದುರಾಗಿ ನಗರದ ಹೊರಗೆ ರಾತ್ರಿ ಉಳಿದುಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಿಮ್ಮನ್ನು ದಸ್ತಗಿರಿ ಮಾಡಬೇಕಾಗುವದು” ಎಂದು ಎಚ್ಚರಿಸಿದೆನು. ಅಂದಿನಿಂದ ಅವರು ಸಬ್ಬತ್ ದಿನದಲ್ಲಿ ನಗರಕ್ಕೆ ವ್ಯಾಪಾರಕ್ಕಾಗಿ ಬರುವುದನ್ನು ನಿಲ್ಲಿಸಿದರು.

22 ಇದಾದ ಬಳಿಕ ತಮ್ಮನ್ನು ಶುದ್ಧಪಡಿಸಿಕೊಳ್ಳಲು ಲೇವಿಯರಿಗೆ ಆಜ್ಞಾಪಿಸಿದೆನು. ಅವರು ಶುದ್ಧಪಡಿಸಿಕೊಂಡ ಬಳಿಕ ಬಾಗಿಲುಗಳನ್ನು ಕಾಯಲು ಅವರನ್ನು ಕಳುಹಿಸಿದೆನು. ಯಾಕೆಂದರೆ ಸಬ್ಬತ್‌ದಿನವು ಪವಿತ್ರ ದಿನವೆಂದು ಎಲ್ಲರೂ ಆಚರಿಸುವಂತೆ ಹೀಗೆ ಮಾಡಿದೆನು.

ದೇವರೇ, ನನ್ನ ಈ ಕಾರ್ಯವನ್ನು ನಿನ್ನ ನೆನಪಿನಲ್ಲಿಟ್ಟುಕೋ. ನನ್ನ ಮೇಲೆ ದಯವಿಟ್ಟು ನಿನ್ನ ಪ್ರೀತಿಯನ್ನು ತೋರಿಸು.

ಲೂಕ 6:1-5

ಯೇಸು ಸಬ್ಬತ್‌ದಿನಕ್ಕೆ ಒಡೆಯನು

(ಮತ್ತಾಯ 12:1-8; ಮಾರ್ಕ 2:23-28)

ಒಂದಾನೊಂದು ಸಬ್ಬತ್‌ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದನು. ಆತನ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ಕಾಳನ್ನು ತಿಂದರು. ಕೆಲವು ಫರಿಸಾಯರು, “ನೀವು ಸಬ್ಬತ್‌ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.

ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಿದ್ದೀರಿ. ದಾವೀದನು ದೇವರ ಮಂದಿರದೊಳಕ್ಕೆ ಹೋಗಿ, ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ತೆಗೆದುಕೊಂಡು ತಿಂದನು. ತನ್ನ ಜೊತೆ ಇದ್ದ ಜನರಿಗೂ ಸ್ವಲ್ಪ ಕೊಟ್ಟನು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧ. ಯಾಜಕರು ಮಾತ್ರವೇ ಈ ರೊಟ್ಟಿಯನ್ನು ತಿನ್ನಬಹುದು ಎಂದು ಧರ್ಮಶಾಸ್ತ್ರ ಹೇಳುತ್ತದೆ” ಎಂದು ಉತ್ತರಿಸಿ, “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International