Revised Common Lectionary (Complementary)
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
30 “ಯೆರೆಮೀಯನೇ, ನೀನು ಅವರಿಗೆ ಈ ಸಂದೇಶವನ್ನು ಕೊಡು:
‘ಉನ್ನತವಾದ ಮತ್ತು ಪವಿತ್ರವಾದ
ಆಲಯದಿಂದ ಯೆಹೋವನು ಗರ್ಜಿಸುವನು.
ಯೆಹೋವನು ಗಟ್ಟಿಯಾಗಿ ಗರ್ಜಿಸಿ ತನ್ನ ಹುಲ್ಲುಗಾವಲಿನ ಮಂದೆಯನ್ನು ಬೆದರಿಸುವನು.
ದ್ರಾಕ್ಷಾರಸವನ್ನು ತಯಾರಿಸುವಾಗ ದ್ರಾಕ್ಷೆಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭಯಂಕರವಾಗಿ ಕೂಗುವನು.
31 ಆ ಧ್ವನಿಯು ಭೂಲೋಕದ ಎಲ್ಲಾ ಕಡೆಗೂ ಹಬ್ಬುತ್ತದೆ.
ಈ ಧ್ವನಿಯೆಲ್ಲಾ ಏತಕ್ಕೆ?
ಯೆಹೋವನು ಎಲ್ಲಾ ಜನಾಂಗದ ಜನರನ್ನು ದಂಡಿಸುತ್ತಿದ್ದಾನೆ.
ಯೆಹೋವನು ಜನರ ವಿರುದ್ಧ ತನ್ನ ವಾದವನ್ನು ಹೇಳಿದನು.
ಜನರ ಬಗ್ಗೆ ತೀರ್ಪನ್ನು ಕೊಟ್ಟನು.
ಆತನು ದುಷ್ಟರನ್ನು ಖಡ್ಗದಿಂದ ಕೊಲ್ಲುತ್ತಿದ್ದಾನೆ.’”
ಈ ಸಂದೇಶವು ಯೆಹೋವನಿಂದ ಬಂದದ್ದು.
32 “ವಿಪತ್ತುಗಳು ಬಹುಬೇಗ
ದೇಶದಿಂದ ದೇಶಕ್ಕೆ ಹರಡುವವು.
ಅವು ಭೂಲೋಕದ ಎಲ್ಲಾ ದೂರದೂರದ ದೇಶಗಳಲ್ಲಿ
ಭಯಂಕರವಾದ ಬಿರುಗಾಳಿಯಂತೆ ಬರುವವು.”
33 ಆ ಜನರ ಮೃತ ಶರೀರಗಳು ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಬಿದ್ದಿರುವವು. ಆ ಸತ್ತಜನರಿಗಾಗಿ ಯಾರೂ ಅಳುವದಿಲ್ಲ. ಯಾರೂ ಅವರ ಶವಗಳನ್ನು ಒಟ್ಟುಗೂಡಿಸಿ ಹೂಳುವದಿಲ್ಲ. ಅವುಗಳು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವವು.
34 ಕುರುಬರೇ, ನೀವು ಕುರಿಗಳಿಗೆ (ಜನಗಳಿಗೆ) ಮುಂದಾಳಾಗಿ ನಡೆಯಬೇಕು.
ಮಹಾನಾಯಕರೇ, ನೀವು ಗೋಳಾಡಲು ಪ್ರಾರಂಭಿಸಿರಿ.
ಕುರಿಗಳ ಮುಂದಾಳುಗಳಾದ ನೀವು ನೋವಿನಿಂದ ನೆಲದ ಮೇಲೆ ಹೊರಳಾಡಿರಿ.
ಏಕೆಂದರೆ ಈಗ ನಿಮ್ಮನ್ನು ವಧಿಸುವ ಕಾಲ ಬಂದಿದೆ.
ನಾನು ನಿಮ್ಮ ಕುರಿಗಳನ್ನು ದಿಕ್ಕಾಪಾಲು ಮಾಡಿಬಿಡುತ್ತೇನೆ.
ಅವುಗಳು ಒಡೆದ ಪಾತ್ರೆಯ ಚೂರುಗಳಂತೆ ಚೆಲ್ಲಾಪಿಲ್ಲಿಯಾಗುತ್ತವೆ.
35 ಕುರುಬರಿಗೆ ಅಡಗಿಕೊಳ್ಳಲು ಸ್ಥಳ ಸಿಕ್ಕುವದಿಲ್ಲ.
ಆ ನಾಯಕರುಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕುವದಿಲ್ಲ.
36 ಕುರುಬರ ಕೂಗಾಟ ನನಗೆ ಕೇಳುತ್ತಿದೆ.
ಕುರಿಗಳ ಗೋಳಾಟ ನನಗೆ ಕೇಳಿಬರುತ್ತಿದೆ.
ಯೆಹೋವನು ಅವರ ದೇಶವನ್ನು ನಾಶಮಾಡುತ್ತಿದ್ದಾನೆ.
37 ನೆಮ್ಮದಿಯಿಂದ ಕೂಡಿದ ಆ ಹುಲ್ಲುಗಾವಲುಗಳು ಬರಿದಾದ ಮರುಭೂಮಿಗಳಂತಾಗಿವೆ.
ಏಕೆಂದರೆ ಯೆಹೋವನು ತುಂಬಾ ಕೋಪಗೊಂಡಿದ್ದಾನೆ.
38 ಯೆಹೋವನು, ತನ್ನ ಗುಹೆಯಿಂದ ಹೊರಬರುತ್ತಿರುವ ಭಯಂಕರವಾದ ಸಿಂಹದಂತಿದ್ದಾನೆ.
ಯೆಹೋವನು ಕೋಪಗೊಂಡಿದ್ದಾನೆ.
ಯೆಹೋವನ ಕೋಪವು ಆ ಜನರನ್ನು ಪೀಡಿಸುವುದು.
ಅವರ ದೇಶವು ಬರಿದಾದ ಮರುಭೂಮಿಯಾಗುವುದು.
ದೇವಾಲಯಕ್ಕೆ ಯೇಸುವಿನ ಪ್ರವೇಶ
(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)
45 ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ, 46 ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’”(B) ಎಂದನು.
47 ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು. 48 ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International