Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆರೆಮೀಯ 23:23-29

23 ಈ ಸಂದೇಶ ಯೆಹೋವನಿಂದ ಬಂದಿತು:
“ನಾನೇ ಯೆಹೋವನು. ನಾನು ಯಾವಾಗಲೂ ಸಮೀಪವಾಗಿದ್ದೇನೆ.
    ನಾನು ಬಹಳ ದೂರವಿಲ್ಲ.
24 ಒಬ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೂ
ನಾನು ಅವನನ್ನು ಸರಾಗವಾಗಿ ನೋಡಬಲ್ಲೆನು.
    ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.”

ಯೆಹೋವನೇ ಇವುಗಳನ್ನು ಹೇಳಿದ್ದಾನೆ. 25 “ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುವ ಪ್ರವಾದಿಗಳಿದ್ದಾರೆ. ಅವರು ‘ನಾನೊಂದು ಕನಸು ಕಂಡೆ, ನಾನೊಂದು ಕನಸು ಕಂಡೆ’ ಎಂದು ಹೇಳುತ್ತಾರೆ. 26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನ್ನೇ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನ್ನೇ ಜನರಿಗೆ ಬೋಧಿಸುತ್ತಾರೆ. 27 ಯೆಹೂದದ ಜನರು ನನ್ನ ಹೆಸರನ್ನು ಮರೆಯುವಂತೆ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು ಈ ಸುಳ್ಳು ಕನಸುಗಳ ಬಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತಂತೆಯೇ ನನ್ನ ಜನರು ಸಹ ನನ್ನನ್ನು ಮರೆಯಲೆಂದು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನನ್ನು ಮರೆತು ಸುಳ್ಳುದೇವರಾದ ಬಾಳನನ್ನು ಪೂಜಿಸಿದರು. 28 ಹೊಟ್ಟು, ಗೋಧಿಯ ಕಾಳಲ್ಲ. ಅದೇ ರೀತಿ, ಆ ಪ್ರವಾದಿಗಳ ಕನಸುಗಳು ನನ್ನ ಸಂದೇಶಗಳಲ್ಲ. ಒಬ್ಬ ವ್ಯಕ್ತಿಗೆ ತನ್ನ ಕನಸಿನ ಬಗ್ಗೆ ಹೇಳಬೇಕೆನಿಸಿದರೆ, ಅವನು ಹೇಳಲಿ. ಆದರೆ ನನ್ನ ಸಂದೇಶವನ್ನು ಕೇಳಿದ ಮನುಷ್ಯನು ಆ ಸಂದೇಶವನ್ನು ಯಥಾರ್ಥವಾಗಿ ಹೇಳಲಿ. 29 ನನ್ನ ಸಂದೇಶವು ಬೆಂಕಿಯ ಜ್ವಾಲೆಯಂತಿದೆ. ಅದು ಕಲ್ಲುಬಂಡೆಯನ್ನು ಒಡೆದುಹಾಕುವ ಸುತ್ತಿಗೆಯಂತಿದೆ” ಇದು ಯೆಹೋವನ ನುಡಿ.

ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

ಇಬ್ರಿಯರಿಗೆ 11:29-12:2

29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.

30 ದೇವಜನರ ನಂಬಿಕೆಯಿಂದಲೇ ಜೆರಿಕೊ ಪಟ್ಟಣದ ಗೋಡೆಗಳ ಸುತ್ತಲೂ ಏಳು ದಿನಗಳವರೆಗೆ ಸುತ್ತಿದಾಗ ಅವು ಬಿದ್ದುಹೋದವು.

31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.

32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.

39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.

ಯೇಸುವನ್ನೇ ಅನುಸರಿಸಿರಿ

12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು.

ಲೂಕ 12:49-56

ಯೇಸುವಿನ ಬಗ್ಗೆ ಭಿನ್ನಾಭಿಪ್ರಾಯ

(ಮತ್ತಾಯ 10:34-36)

49 ಯೇಸು ತನ್ನ ಮಾತನ್ನು ಮುಂದುವರೆಸಿ ಹೀಗೆಂದನು: “ನಾನು ಈ ಲೋಕಕ್ಕೆ ಬೆಂಕಿಹಾಕಲು ಬಂದೆನು! ಅದು ಇಷ್ಟರೊಳಗೆ ಉರಿಯುತ್ತಿದ್ದರೆ ನನಗೆ ಸಂತೋಷ! 50 ನಾನು ಬೇರೊಂದು ರೀತಿಯ ದೀಕ್ಷಾಸ್ನಾನ ಹೊಂದಬೇಕು. ಅದನ್ನು ಹೊಂದುವ ತನಕ ನಾನು ಬಹಳ ತೊಂದರೆಯಲ್ಲಿದ್ದೇನೆ. 51 ನಾನು ಲೋಕಕ್ಕೆ ಸಮಾಧಾನವನ್ನು ಕೊಡುವುದಕ್ಕೆ ಬಂದೆನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ಲೋಕದಲ್ಲಿ ಭೇದವನ್ನು ಉಂಟುಮಾಡಲು ಬಂದೆನು! 52 ಇಂದಿನಿಂದ, ಐದು ಜನರಿರುವ ಕುಟುಂಬದಲ್ಲಿ ಭೇದ ಉಂಟಾಗುವುದು. ಅವರಲ್ಲಿ ಮೂವರು ಇಬ್ಬರಿಗೆ ವಿರೋಧವಾಗುವರು ಮತ್ತು ಇಬ್ಬರು ಮೂವರಿಗೆ ವಿರೋಧವಾಗುವರು.

53 ತಂದೆಗೂ ಮಗನಿಗೂ ಭೇದ ಉಂಟಾಗುವುದು.
    ಮಗನು ತನ್ನ ತಂದೆಗೆ ವಿರೋಧವಾಗುವನು.
    ತಂದೆಯು ತನ್ನ ಮಗನಿಗೆ ವಿರೋಧವಾಗುವನು,
ತಾಯಿಗೂ ಮಗಳಿಗೂ ಭೇದ ಉಂಟಾಗುವುದು.
    ಮಗಳು ತನ್ನ ತಾಯಿಗೆ ವಿರೋಧವಾಗುವಳು,
    ತಾಯಿ ತನ್ನ ಮಗಳಿಗೆ ವಿರೋಧವಾಗುವಳು.
ಅತ್ತೆಗೂ ಸೊಸೆಗೂ ಭೇದವಿರುವುದು.
    ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು,
    ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”[a]

ಕಾಲಮಾನವನ್ನು ಗ್ರಹಿಸಿಕೊಳ್ಳಿರಿ

(ಮತ್ತಾಯ 16:2-3)

54 ಬಳಿಕ ಯೇಸು ಜನರಿಗೆ ಹೀಗೆಂದನು: “ಮೋಡವು ಪಶ್ಚಿಮ ದಿಕ್ಕಿನಲ್ಲಿ ದೊಡ್ಡದಾಗುತ್ತಿರುವುದನ್ನು ನೀವು ನೋಡುವಾಗ ‘ಇಂದು ಮಳೆ ಬರುತ್ತದೆ’ ಎಂದು ಹೇಳುತ್ತೀರಿ. ಅಂತೆಯೇ ಅಂದು ಮಳೆಯಾಗುತ್ತದೆ. 55 ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದಾಗ, ‘ಈ ದಿನ ತುಂಬಾ ಸೆಕೆ ಇರುವುದು’ ಎನ್ನುತ್ತೀರಿ. ಅಂತೆಯೇ ಸೆಕೆ ಇರುವುದು. 56 ನೀವು ಕಪಟಿಗಳು! ಹವಾಮಾನವನ್ನು ತಿಳಿದುಕೊಳ್ಳಬಲ್ಲ ನೀವು ಈಗ ನಡೆಯುತ್ತಿರುವುದನ್ನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲವೇ?

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International