Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

1 ಸಮುವೇಲನು 6:1-16

ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸ್ವಂತ ಸ್ಥಳಕ್ಕೆ ಹಿಂತಿರುಗಿಸಿದ್ದು

ಫಿಲಿಷ್ಟಿಯರು ಪವಿತ್ರ ಪೆಟ್ಟಿಗೆಯನ್ನು ಏಳು ತಿಂಗಳ ಕಾಲ ತಮ್ಮ ಪ್ರದೇಶದಲ್ಲಿ ಇರಿಸಿಕೊಂಡಿದ್ದರು. ಫಿಲಿಷ್ಟಿಯರು ತಮ್ಮ ಅರ್ಚಕರನ್ನು ಮತ್ತು ಮಾಂತ್ರಿಕರನ್ನು ಕರೆದು, “ಯೆಹೋವನ ಪೆಟ್ಟಿಗೆಯನ್ನು ಏನು ಮಾಡೋಣ? ಇದನ್ನು ಮರಳಿ ಹಿಂದಕ್ಕೆ ಕಳುಹಿಸುವುದು ಹೇಗೆ?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ಹಿಂದಕ್ಕೆ ಕಳುಹಿಸುವುದಾದರೆ, ಬರಿದಾಗಿ ಕಳುಹಿಸಬೇಡಿ. ನೀವು ಕಾಣಿಕೆಗಳನ್ನು ಕಳುಹಿಸಲೇಬೇಕು. ಆಗ ಇಸ್ರೇಲರ ದೇವರು ನಿಮ್ಮ ಪಾಪಗಳನ್ನು ಪರಿಹರಿಸುತ್ತಾನೆ. ಆಗ ನೀವೆಲ್ಲಾ ಗುಣಹೊಂದುವಿರಿ; ಶುದ್ಧರಾಗುವಿರಿ. ದೇವರು ನಿಮ್ಮನ್ನು ದಂಡಿಸುವುದನ್ನು ನಿಲ್ಲಿಸಬೇಕಾದರೆ ನೀವು ಈ ಕಾರ್ಯಗಳನ್ನು ಮಾಡಬೇಕು. ಆಗ ದೇವರು ನಿಮ್ಮನ್ನು ಬಾಧಿಸುವುದಿಲ್ಲ” ಎಂದು ಉತ್ತರಿಸಿದರು.

ಫಿಲಿಷ್ಟಿಯರು, “ಇಸ್ರೇಲರ ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಐದು ಮಂದಿ ಅಧಿಪತಿಗಳಿದ್ದೀರಿ. ಪ್ರತಿಯೊಂದು ನಗರಕ್ಕೆ ಒಬ್ಬ ಅಧಿಪತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿಪತಿಗಳೆಲ್ಲರೂ ಒಂದೇ ರೀತಿಯಲ್ಲಿ ತೊಂದರೆಗೊಳಗಾಗಿದ್ದೀರಿ. ಆದ್ದರಿಂದ ಚಿನ್ನದಲ್ಲಿ ಐದು ಗಡ್ಡೆಗಳನ್ನು ಹಾಗೂ ಐದು ಇಲಿಗಳನ್ನು ಮಾಡಿಸಬೇಕು. ಹೀಗೆ ನಿಮ್ಮ ದೇಶವನ್ನು ನಾಶಗೊಳಿಸುತ್ತಿರುವ ಗಡ್ಡೆಗಳ, ಇಲಿಗಳ ಮಾದರಿಗಳನ್ನು ಮಾಡಿಸಿರಿ. ಇಸ್ರೇಲರ ದೇವರಿಗೆ ಚಿನ್ನದ ಆ ಮಾದರಿಗಳನ್ನು ಕಾಣಿಕೆಯಾಗಿ ಸಲ್ಲಿಸಿರಿ. ಆಗ ಇಸ್ರೇಲರ ದೇವರು ನಿಮ್ಮನ್ನೂ ನಿಮ್ಮ ದೇವರುಗಳನ್ನೂ ನಿಮ್ಮ ದೇಶವನ್ನೂ ಶಿಕ್ಷಿಸುವುದನ್ನು ನಿಲ್ಲಿಸಬಹುದು. ಫರೋಹನಂತೆ ಮತ್ತು ಈಜಿಪ್ಟಿನವರಂತೆ ಮೊಂಡರಾಗಬೇಡಿ. ದೇವರು ಈಜಿಪ್ಟಿನವರನ್ನು ದಂಡಿಸಿದನು. ಆದ್ದರಿಂದ ಇಸ್ರೇಲರನ್ನು ಕಳುಹಿಸಿಕೊಡುವಂತೆ ಈಜಿಪ್ಟಿನವರನ್ನು ಬಲವಂತ ಮಾಡಲಾಯಿತು.

“ಈಗ ಒಂದು ಹೊಸ ಬಂಡಿಯನ್ನು ಮಾಡಿಸಿ ಮತ್ತು ಈಗ ತಾನೆ ಕರು ಹಾಕಿರುವ ಎರಡು ಹಸುಗಳನ್ನು ತೆಗೆದುಕೊಳ್ಳಿರಿ. ಈ ಹಸುಗಳು ಹೊಲಗಳಲ್ಲಿ ಹಿಂದೆಂದೂ ನೊಗ ಹೊತ್ತಿಲ್ಲದಂಥವುಗಳಾಗಿರಬೇಕು. ಈ ಹಸುಗಳನ್ನು ಬಂಡಿಗೆ ಹೂಡಿರಿ ಮತ್ತು ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ದೊಡ್ಡಿಯಲ್ಲಿ ಬಿಡಿರಿ. ಅವುಗಳು ತಮ್ಮ ತಾಯಂದಿರನ್ನು ಹಿಂಬಾಲಿಸಲು ಅವಕಾಶಕೊಡಕೂಡದು.[a] ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಡಿರಿ. ಚಿನ್ನದ ಮಾದರಿಗಳನ್ನು ಚೀಲದಲ್ಲಿಟ್ಟು ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಈ ಚಿನ್ನದ ಮಾದರಿಗಳು ನೀವು ನಿಮ್ಮ ಪಾಪಕ್ಷಮೆಗಾಗಿ ದೇವರಿಗೆ ಕಳುಹಿಸುತ್ತಿರುವ ಕಾಣಿಕೆಗಳಾಗಿವೆ; ಬಂಡಿಯನ್ನು ಅದರ ದಾರಿಯಲ್ಲಿ ಕಳುಹಿಸಿರಿ. ಆದರೆ ಅದರ ಕಡೆ ಗಮನವಿರಲಿ. ಅದು ತಾನಾಗಿ ಇಸ್ರೇಲಿಗೆ ಸೇರಿದ ಬೇತ್‌ಷೆಮೆಷಿನ ಕಡೆಗೆ ಹೋದರೆ, ಆಗ ಆ ದೊಡ್ಡ ಕೇಡನ್ನು ನಮಗುಂಟು ಮಾಡಿದವನು ಯೆಹೋವನೇ ಸರಿ. ಆದರೆ ಹಸುಗಳು ಬೇತ್‌ಷೆಮೆಷಿಗೆ ಹೋಗದಿದ್ದರೆ, ನಮ್ಮನ್ನು ಶಿಕ್ಷಿಸಿದವನು ಯೆಹೋವನಲ್ಲವೆಂದು ನಮಗೆ ಗೊತ್ತಾಗುವುದು. ನಮಗುಂಟಾದ ಕಾಯಿಲೆಯು ತಾನಾಗಿಯೇ ಬಂದದ್ದೆಂದು ತಿಳಿಯುವುದು” ಎಂದು ಹೇಳಿದರು.

10 ಅರ್ಚಕರು ಮತ್ತು ಮಾಂತ್ರಿಕರು ಹೇಳಿದಂತೆಯೇ ಫಿಲಿಷ್ಟಿಯರು ಮಾಡಿದರು. ಫಿಲಿಷ್ಟಿಯರು ಆಗ ತಾನೇ ಕರುಹಾಕಿದ ಎರಡು ಹಸುಗಳನ್ನು ತಂದು, ಅವುಗಳನ್ನು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನೆಯ ದೊಡ್ಡಿಯಲ್ಲಿ ಬಿಟ್ಟರು. 11 ಆಮೇಲೆ ಫಿಲಿಷ್ಟಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಬಂಡಿಯ ಮೇಲಿಟ್ಟರು. ಅಲ್ಲದೆ ಚಿನ್ನದ ಗಡ್ಡೆಗಳನ್ನೂ ಇಲಿಗಳನ್ನೂ ಚೀಲದೊಳಗೆ ಹಾಕಿ ಬಂಡಿಯ ಮೇಲಿಟ್ಟರು. 12 ಹಸುಗಳು ಬೇತ್‌ಷೆಮೆಷಿಗೆ ನೇರವಾಗಿ ಹೋದವು. ಅವು ದಾರಿಯಲ್ಲಿಯೇ ಹೋದವು. ಅವು ದಾರಿಯುದ್ದಕ್ಕೂ ಕೂಗುತ್ತಾ ನಡೆದವು. ಅವು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯರ ಅಧಿಪತಿಗಳು ಬೇತ್‌ಷೆಮೆಷಿನ ಗಡಿಯವರೆಗೂ ಹಸುಗಳನ್ನು ಹಿಂಬಾಲಿಸಿಕೊಂಡು ಹೋದರು.

13 ಬೇತ್‌ಷೆಮೆಷಿನ ಕಣಿವೆಯಲ್ಲಿ ಅಲ್ಲಿನ ಜನರು ಗೋಧಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ನೋಡಿದಾಗ, ಪವಿತ್ರ ಪೆಟ್ಟಿಗೆಯು ಅವರಿಗೆ ಕಾಣಿಸಿತು. ಅವರಿಗೆ ಬಹಳ ಸಂತೋಷವಾಯಿತು. ಅವರು ಅದನ್ನು ಸ್ವೀಕರಿಸಲು ಓಡಿಹೋದರು. 14-15 ಬೇತ್‌ಷೆಮೆಷಿನ ಯೆಹೋಶುವನಿಗೆ ಸೇರಿದ ಹೊಲಕ್ಕೆ ಆ ಬಂಡಿಯು ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಳಿ ಆ ಬಂಡಿಯು ನಿಂತಿತು. ಬೇತ್‌ಷೆಮೆಷಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು ಆ ಹಸುಗಳನ್ನು ಯೆಹೋವನಿಗೆ ಆಹುತಿಯಾಗಿ ಅರ್ಪಿಸಿದರು.

ಕೆಲವು ಲೇವಿಯರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಚಿನ್ನದ ಮಾದರಿಗಳಿದ್ದ ಚೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಚೀಲವನ್ನು ದೊಡ್ಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್‌ಷೆಮೆಷಿನ ಜನರು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದರು.

16 ಬೇತ್‌ಷೆಮೆಷಿನ ಜನರು ಮಾಡಿದ್ದನ್ನೆಲ್ಲ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ನೋಡಿ ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.

ಮತ್ತಾಯ 24:15-27

15 “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು[a] ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.) 16 ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ. 18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.

19 “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ! 20 ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ. 21 ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.

22 “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.

23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ. 24 ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು. 25 ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.

26 “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ. 27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International