Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

ಯೆಹೋಶುವನು 7:1

ಆಕಾನನ ಪಾಪ

ಇಸ್ರೇಲರು ಯೆಹೋವನ ಆಜ್ಞೆಗೆ ವಿಧೇಯರಾಗಲಿಲ್ಲ. ಯೆಹೂದ ಕುಲದವನೂ ಕರ್ಮೀಯ ಮಗನೂ ಜಬ್ದೀಯ ಮೊಮ್ಮಗನೂ ಜೆರಹನ ಗೋತ್ರದವನೂ ಆದ ಆಕಾನ ಎಂಬವನು ನಾಶಮಾಡಬೇಕಾದ ವಸ್ತುಗಳಲ್ಲಿ ಕೆಲವನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಯೆಹೋವನು ಇಸ್ರೇಲಿನವರ ಮೇಲೆ ತುಂಬಾ ಕೋಪಗೊಂಡನು.

ಯೆಹೋಶುವನು 7:10-26

10 ಯೆಹೋವನು ಯೆಹೋಶುವನಿಗೆ, “ಮೇಲಕ್ಕೆ ಏಳು, ನೀನು ಹೀಗೆ ಬೋರಲು ಬಿದ್ದಿರುವುದೇಕೆ? 11 ಇಸ್ರೇಲರು ಪಾಪಮಾಡಿದ್ದಾರೆ. ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ. ನಾನು ನಾಶಪಡಿಸಲು ಹೇಳಿದ ವಸ್ತುಗಳಲ್ಲಿ ಕೆಲವನ್ನು ಅವರು ತೆಗೆದುಕೊಂಡಿದ್ದಾರೆ; ಅವರು ನನ್ನಿಂದ ಕದ್ದಿದ್ದಾರೆ; ಸುಳ್ಳು ಹೇಳಿದ್ದಾರೆ. ಅವರು ಆ ವಸ್ತುಗಳನ್ನು ತಮಗಾಗಿ ತೆಗೆದುಕೊಂಡಿದ್ದಾರೆ. 12 ಅದಕ್ಕಾಗಿಯೇ ಇಸ್ರೇಲಿನ ಸೈನ್ಯವು ಯುದ್ಧದಿಂದ ವಿಮುಖವಾಗಿ ಓಡಿಬಂತು. ಅವರು ತಪ್ಪನ್ನು ಮಾಡಿದ್ದರಿಂದಲೇ ಶಾಪಕ್ಕೆ ಗುರಿಯಾಗಿದ್ದಾರೆ. ಆ ಪಾಪವನ್ನು ನಿಮ್ಮಿಂದ ತೆಗೆದುಹಾಕಬೇಕು, ಅಲ್ಲಿಯವರೆಗೆ ನಾನು ನಿಮಗೆ ಸಹಾಯ ಮಾಡುವುದಿಲ್ಲ, ನಾನು ನಿಮ್ಮ ಸಂಗಡ ಬರುವುದೇ ಇಲ್ಲ.

13 “ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.

14 “‘ನಾಳೆ ಬೆಳಿಗ್ಗೆ ನೀವೆಲ್ಲರು ಯೆಹೋವನ ಮುಂದೆ ಬಂದು ನಿಲ್ಲಬೇಕು. ಎಲ್ಲಾ ಕುಲಗಳು ಯೆಹೋವನ ಮುಂದೆ ಬಂದು ನಿಲ್ಲಬೇಕು. ಯೆಹೋವನು ಒಂದು ಕುಲವನ್ನು ಸೂಚಿಸುತ್ತಾನೆ. ಆಗ ಆ ಕುಲ ಮಾತ್ರ ಮುಂದೆ ನಿಲ್ಲಬೇಕು. ಆಗ ಯೆಹೋವನು ಒಂದು ಗೋತ್ರವನ್ನು ಸೂಚಿಸುತ್ತಾನೆ. ಆಗ ಆ ಗೋತ್ರದವರು ಮಾತ್ರ ಯೆಹೋವನ ಮುಂದೆ ನಿಲ್ಲಬೇಕು. ಆಗ ಯೆಹೋವನು ಆ ಗೋತ್ರದ ಪ್ರತಿಯೊಂದು ಕುಟುಂಬವನ್ನು ನೋಡಿ, ಒಂದು ಕುಟುಂಬವನ್ನು ಸೂಚಿಸುತ್ತಾನೆ. ಬಳಿಕ ಯೆಹೋವನು ಆ ಕುಟುಂಬದ ಪ್ರತಿಯೊಬ್ಬ ಮನುಷ್ಯನನ್ನು ನೋಡುತ್ತಾನೆ. 15 ಆಗ ನಾವು ನಾಶಪಡಿಸಬೇಕಾಗಿದ್ದ ವಸ್ತುಗಳನ್ನು ಇಟ್ಟುಕೊಂಡ ಮನುಷ್ಯನು ಸಿಕ್ಕಿಬೀಳುತ್ತಾನೆ. ಬಳಿಕ ಆ ಮನುಷ್ಯನು ಬೆಂಕಿಯಿಂದ ನಾಶವಾಗುವನು. ಅವನ ಎಲ್ಲಾ ಸ್ವತ್ತು ಅವನೊಂದಿಗೆ ನಾಶವಾಗುವುದು. ಆ ಮನುಷ್ಯನು ಯೆಹೋವನ ಆಜ್ಞೆಯನ್ನು ಮೀರಿದ್ದಾನೆ. ಇಸ್ರೇಲರಿಗೆ ಕೇಡನ್ನು ಬರಮಾಡಿದ್ದಾನೆ’” ಎಂದನು.

16 ಮಾರನೆಯ ದಿನ, ಬೆಳಿಗ್ಗೆ ಯೆಹೋಶುವನು ಇಸ್ರೇಲಿನ ಎಲ್ಲ ಜನರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದನು. ಎಲ್ಲ ಕುಲಗಳು ಯೆಹೋವನ ಮುಂದೆ ನಿಂತುಕೊಂಡವು. ಯೆಹೋವನು ಯೆಹೂದ ಕುಲವನ್ನು ಸೂಚಿಸಿದನು. 17 ಆದ್ದರಿಂದ ಯೆಹೂದ ಕುಲದ ಎಲ್ಲ ಗೋತ್ರಗಳು ಯೆಹೋವನ ಮುಂದೆ ಬಂದು ನಿಂತವು. ಯೆಹೋವನು ಜೆರಹನ ಗೋತ್ರವನ್ನು ಸೂಚಿಸಿದನು. ಆಗ ಜೆರಹನ ಗೋತ್ರದ ಎಲ್ಲ ಕುಟುಂಬಗಳು ಯೆಹೋವನ ಎದುರಿಗೆ ಬಂದು ನಿಂತವು. ಆಗ ಜಬ್ದೀಯ ಕುಟುಂಬವನ್ನು ಸೂಚಿಸಲಾಯಿತು. 18 ಆಗ ಯೆಹೋಶುವನು ಆ ಕುಟುಂಬದ ಎಲ್ಲ ಗಂಡಸರನ್ನು ಯೆಹೋವನ ಮುಂದೆ ಬರಲು ಹೇಳಿದನು. ಯೆಹೋವನು ಆಗ ಕರ್ಮೀಯ ಮಗನಾದ ಆಕಾನನನ್ನು ಸೂಚಿಸಿದನು. ಕರ್ಮೀಯು ಜಬ್ದೀಯ ಮಗನಾಗಿದ್ದನು, ಜಬ್ದೀಯು ಜೆರಹನ ಮಗನಾಗಿದ್ದನು.

19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ಇಸ್ರೇಲಿನ ದೇವರಾದ ಯೆಹೋವನನ್ನು ಸನ್ಮಾನಿಸು; ಆತನಿಗೆ ಸ್ತೋತ್ರಸಲ್ಲಿಸು. ನಿನ್ನ ಪಾಪಗಳನ್ನು ಆತನಿಗೆ ಅರಿಕೆಮಾಡು. ನೀನು ಮಾಡಿದ್ದನ್ನು ನನಗೆ ಹೇಳು; ನನ್ನಿಂದ ಏನನ್ನೂ ಮುಚ್ಚಿಡಬೇಡ” ಎಂದನು.

20 ಆಗ ಆಕಾನನು, “ಇದು ಸತ್ಯ. ನಾನು ಇಸ್ರೇಲಿನ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡಿದ್ದೇನೆ. 21 ನಾವು ಜೆರಿಕೊ ನಗರವನ್ನು ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾಗ, ಬಾಬಿಲೋನಿನ ಒಂದು ಸುಂದರವಾದ ನಿಲುವಂಗಿಯನ್ನೂ ಸುಮಾರು ಐದು ಪೌಂಡಿನಷ್ಟು ಬೆಳ್ಳಿಯನ್ನೂ ಒಂದು ಪೌಂಡಿಗಿಂತಲೂ ಹೆಚ್ಚು ಬಂಗಾರವನ್ನೂ ಕಂಡೆನು. ಈ ವಸ್ತುಗಳನ್ನು ನನಗಾಗಿ ಇಟ್ಟುಕೊಳ್ಳಬೇಕೆಂದು ತುಂಬ ಆಶೆಯಾಯಿತು. ಅದಕ್ಕಾಗಿ ನಾನು ಅವುಗಳನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದಲ್ಲಿ ಹುಗಿದಿಟ್ಟಿದ್ದೇನೆ. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇದೆ” ಎಂದು ಒಪ್ಪಿಕೊಂಡನು.

22 ಆಗ ಯೆಹೋಶುವನು ಕೆಲವರನ್ನು ಗುಡಾರಕ್ಕೆ ಕಳುಹಿಸಿದನು. ಅವರು ಗುಡಾರಕ್ಕೆ ಓಡಿಹೋಗಿ ಹುಗಿದಿಟ್ಟಿದ್ದ ಆ ವಸ್ತುಗಳನ್ನು ಕಂಡರು. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇತ್ತು. 23 ಜನರು ಆ ವಸ್ತುಗಳನ್ನು ಗುಡಾರದ ಹೊರಗೆ ತೆಗೆದುಕೊಂಡು ಬಂದು ಯೆಹೋಶುವನ ಮತ್ತು ಎಲ್ಲಾ ಇಸ್ರೇಲರ ಬಳಿಗೆ ಬಂದರು. ಅವರು ಯೆಹೋವನ ಮುಂದೆ ಆ ವಸ್ತುಗಳನ್ನೆಲ್ಲಾ ನೆಲದ ಮೇಲೆ ಹಾಕಿದರು.

24 ಆಗ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಸೇರಿ ಜೆರಹನ ಮಗನಾದ ಆಕಾನನನ್ನು, ಬೆಳ್ಳಿಯನ್ನು, ನಿಲುವಂಗಿಯನ್ನು, ಬಂಗಾರವನ್ನು, ಆಕಾನನ ಮಕ್ಕಳನ್ನು, ಅವನ ದನಕರುಗಳನ್ನು, ಕತ್ತೆಗಳನ್ನು, ಅವನ ಕುರಿಗಳನ್ನು, ಅವನ ಗುಡಾರವನ್ನು ಮತ್ತು ಅವನ ಎಲ್ಲ ಸ್ವತ್ತನ್ನು “ಆಕೋರ್” ಕಣಿವೆಗೆ ತೆಗೆದುಕೊಂಡು ಹೋದರು. 25 ಆಗ ಯೆಹೋಶುವನು ಅವನಿಗೆ, “ನೀನು ನಮಗೆ ಕೇಡನ್ನು ಬರಮಾಡಿರುವೆ! ಆದ್ದರಿಂದ ಯೆಹೋವನು ನಿನಗೂ ಕೇಡನ್ನು ಮಾಡಲಿ!” ಎಂದನು. ಆಗ ಜನರೆಲ್ಲರೂ ಕಲ್ಲುಗಳನ್ನು ತೂರಿ ಆಕಾನನನ್ನೂ ಅವನ ಕುಟುಂಬದವರನ್ನೂ ಕೊಂದರು ಮತ್ತು ಅವನ ಎಲ್ಲ ಸ್ವತ್ತನ್ನು ಸುಟ್ಟುಹಾಕಿದರು. 26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.

ಇಬ್ರಿಯರಿಗೆ 10:26-31

ಕ್ರಿಸ್ತನಿಂದ ದೂರ ಸರಿಯದಿರಿ

26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(A) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International