Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 89:1-18

ರಚನೆಗಾರ: ಜೇರಹ ಕುಟುಂಬದ ಏತಾನ.

89 ಯೆಹೋವನೇ, ನಿನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
    ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.

ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
    ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
    ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”

ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
    ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
    ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
ದೇವರು ಪರಿಶುದ್ಧರ ಸಭೆ ಸೇರಿಸುವನು.
    ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
    ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
    ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
    ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
ಸಮುದ್ರವು ನಿನ್ನ ಅಧೀನದಲ್ಲಿದೆ.
    ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
    ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
    ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
    ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
    ನಿನ್ನ ಬಲವು ಮಹಾ ಬಲವೇ ಸರಿ!
    ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
    ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
    ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
    ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
    ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
    ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.

ಯೆರೆಮೀಯ 33:14-26

ಉತ್ತಮ ಕೊಂಬೆ

14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’”[a]

17 ಯೆಹೋವನು ಹೀಗೆನ್ನುತ್ತಾನೆ: “ಯಾವಾಗಲೂ ದಾವೀದನ ವಂಶದವನೊಬ್ಬನು ಸಿಂಹಾಸನಾರೂಢನಾಗಿದ್ದುಕೊಂಡು ಇಸ್ರೇಲರನ್ನು ಆಳುವನು. 18 ಯಾವಾಗಲೂ ಲೇವಿವಂಶದವರೇ ಯಾಜಕರಾಗಿರುವರು. ಆ ಯಾಜಕರು ಸದಾಕಾಲ ನನ್ನ ಎದುರಿನಲ್ಲಿ ನಿಂತುಕೊಂಡು ಸರ್ವಾಂಗಹೋಮ, ಧಾನ್ಯಸಮರ್ಪಣೆ ಮತ್ತು ಯಜ್ಞಗಳನ್ನು ಮಾಡುವರು.”

19 ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು. 20 ಯೆಹೋವನು ಹೀಗೆ ಹೇಳಿದನು: “ಹಗಲು ಮತ್ತು ರಾತ್ರಿಗಳ ಜೊತೆ ನಾನೊಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವುಗಳು ಶಾಶ್ವತವಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಬಹುದಾದರೆ 21 ನೀವು ದಾವೀದನ ಮತ್ತು ಲೇವಿಯರ ಜೊತೆ ನಾನು ಮಾಡಿಕೊಂಡ ಒಡಂಬಡಿಕೆಯನ್ನೂ ಬದಲಾಯಿಸಬಹುದು. ಆಗ ದಾವೀದನ ವಂಶದವರು ರಾಜರಾಗಲಾರರು ಮತ್ತು ಲೇವಿಯರ ವಂಶದವರು ಯಾಜಕರಾಗಲಾರರು. 22 ಆದರೆ ನಾನು ನನ್ನ ಸೇವಕನಾದ ದಾವೀದನಿಗೂ ಲೇವಿಯರಿಗೂ ಅಸಂಖ್ಯಾತ ಸಂತಾನವನ್ನು ಕೊಡುತ್ತೇನೆ. ಅವರು ಆಕಾಶದ ನಕ್ಷತ್ರಗಳಂತೆಯೂ ಸಮುದ್ರದ ತೀರದ ಮರಳಿನಂತೆಯೂ ಅಸಂಖ್ಯಾತರಾಗುವರು.”

23 ಯೆರೆಮೀಯನು ಯೆಹೋವನಿಂದ ಈ ಸಂದೇಶವನ್ನು ಪಡೆದನು: 24 “ಯೆರೆಮೀಯನೇ, ಜನರು ಏನು ಹೇಳಿದರೆಂಬುದನ್ನು ಕೇಳಲಿಲ್ಲವೇ? ‘ಯೆಹೋವನು ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಎರಡು ಕುಟುಂಬಗಳನ್ನು ಆರಿಸಿಕೊಂಡನು; ಆದರೆ ಈಗ ಅವರನ್ನು ತಿರಸ್ಕರಿಸಿದ್ದಾನೆ.’ ಎಂದು ಅವರು ಹೇಳುತ್ತಿದ್ದಾರೆ. ಅನ್ಯಜನರು ನನ್ನ ಜನರನ್ನು ಎಷ್ಟು ದ್ವೇಷಿಸುತ್ತಾರೆಂದರೆ, ಅವರು ಒಂದು ಜನಾಂಗವಾಗಿ ಮುಂದುವರಿಯುವುದು ಅವರಿಗೆ ಇಷ್ಟವೇ ಇಲ್ಲ.”

25 ಯೆಹೋವನು ಹೀಗೆನ್ನುತ್ತಾನೆ: “ಹಗಲಿರುಳುಗಳ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆ ಸ್ಥಿರವಾಗಿಲ್ಲದಿದ್ದರೆ ಮತ್ತು ಭೂಮ್ಯಾಕಾಶಗಳಿಗೆ ನಾನು ಕಟ್ಟಳೆಗಳನ್ನೇ ವಿಧಿಸಿಲ್ಲದಿದ್ದರೆ 26 ಅವರನ್ನು ತ್ಯಜಿಸಬಹುದೇನೋ! ಯಾಕೋಬನ ಸಂತಾನದವರನ್ನು ತ್ಯಜಿಸಿ ದಾವೀದನ ವಂಶದವರು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ಆಳದಂತೆ ಮಾಡಬಹುದೇನೋ! ಆದರೆ ದಾವೀದನು ನನ್ನ ಸೇವಕ. ನಾನು ಅವರಿಗೆ ಕರುಣೆ ತೋರೇ ತೋರುವೆನು; ಅವರಿಗೆ ಒಳ್ಳೆಯದಾಗುವಂತೆ ಮಾಡೇ ಮಾಡುವೆನು.”

ಲೂಕ 12:41-48

ನಂಬಿಗಸ್ತನಾದ ಆಳು ಯಾರು?

41 ಪೇತ್ರನು, “ಪ್ರಭುವೇ, ನೀನು ಈ ಸಾಮ್ಯವನ್ನು ಹೇಳಿದ್ದು ನಮಗಾಗಿಯೋ ಅಥವಾ ಎಲ್ಲಾ ಜನರಿಗಾಗಿಯೋ?” ಎಂದು ಕೇಳಿದನು.

42 ಪ್ರಭುವು ಹೀಗೆಂದನು: “ವಿವೇಕಿಯೂ ನಂಬಿಗಸ್ತನೂ ಆದ ಆಳು ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಿಸಲ್ಪಟ್ಟವನೇ. 43 ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ, ಯಜಮಾನನು ಬಂದಾಗ ಅವನಿಗೆ ಬಹಳ ಸಂತೋಷವಾಗುವುದು. 44 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಯಜಮಾನನು ಆ ಸೇವಕನನ್ನು ತನ್ನ ಆಸ್ತಿಗೆಲ್ಲಾ ಮೇಲ್ವಿಚಾರಕನನ್ನಾಗಿ ನೇಮಿಸುವನು.

45 “ಆದರೆ ಆ ಸೇವಕನು ದುಷ್ಟನಾಗಿ ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದುಕೊಂಡರೆ ಏನಾಗುವುದು? ಆ ಸೇವಕನು ಯಜಮಾನನ ಇತರ ದಾಸದಾಸಿಯರನ್ನು ಹೊಡೆಯುವುದಕ್ಕೂ ತಿಂದುಕುಡಿದು ಮತ್ತನಾಗುವುದಕ್ಕೂ ತೊಡಗುವನು. 46 ಬಳಿಕ ಅವನು ನಿರೀಕ್ಷಿಸಿಲ್ಲದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ದಂಡಿಸಿ ಅಪನಂಬಿಗಸ್ತರಿರುವ ಸ್ಥಳಕ್ಕೆ ದಬ್ಬುವನು.

47 “ತನ್ನ ಯಜಮಾನನು ತನ್ನಿಂದ ಏನು ಅಪೇಕ್ಷಿಸುತ್ತಾನೆ ಎಂಬುದು ಆ ಸೇವಕನಿಗೆ ಗೊತ್ತಿತ್ತು. ಆದರೆ ಅವನು ತನ್ನನ್ನು ಸಿದ್ಧಪಡಿಸಿಕೊಳ್ಳಲಿಲ್ಲ ಮತ್ತು ತನ್ನ ಕೆಲಸವನ್ನು ಪೂರೈಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಅವನು ಕಠಿಣ ದಂಡನೆಗೆ ಗುರಿಯಾಗುವನು! 48 ಆದರೆ ತನ್ನ ಯಜಮಾನನ ಬಯಕೆಯನ್ನು ತಿಳಿದಿಲ್ಲದ ಸೇವಕನಿಗೆ ಏನಾಗುವುದು? ಇವನು ಸಹ ದಂಡನೆಗೆ ಅರ್ಹವಾದ ಕಾರ್ಯಗಳನ್ನು ಮಾಡುತ್ತಾನೆ. ಆದರೆ ತನ್ನ ಕರ್ತವ್ಯವನ್ನು ತಿಳಿದಿದ್ದರೂ ಮಾಡದೆಹೋದ ಸೇವಕನಿಗಿಂತ ಇವನಿಗೆ ಕಡಿಮೆ ದಂಡನೆ ಆಗುವುದು. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ಪಡೆದವನಿಂದ ಇನ್ನೂ ಹೆಚ್ಚಾಗಿ ನಿರೀಕ್ಷಿಸಲಾಗುವುದು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International