Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 89:1-18

ರಚನೆಗಾರ: ಜೇರಹ ಕುಟುಂಬದ ಏತಾನ.

89 ಯೆಹೋವನೇ, ನಿನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
    ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.

ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
    ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
    ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”

ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
    ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
    ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
ದೇವರು ಪರಿಶುದ್ಧರ ಸಭೆ ಸೇರಿಸುವನು.
    ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
    ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
    ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
    ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
ಸಮುದ್ರವು ನಿನ್ನ ಅಧೀನದಲ್ಲಿದೆ.
    ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
    ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
    ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
    ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
    ನಿನ್ನ ಬಲವು ಮಹಾ ಬಲವೇ ಸರಿ!
    ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
    ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
    ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
    ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
    ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
    ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.

2 ಪೂರ್ವಕಾಲವೃತ್ತಾಂತ 34:22-33

22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದ ದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’

26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.

29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.

ಇಬ್ರಿಯರಿಗೆ 11:17-28

17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.

20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.

22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.

23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.

24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.

27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International