Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 127

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.

127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
    ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
    ಕಾವಲುಗಾರರ ಸಮಯವೆಲ್ಲಾ ವ್ಯರ್ಥ.

ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
    ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
    ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.

ಮಕ್ಕಳು ಯೆಹೋವನ ಕೊಡುಗೆ.
    ತಾಯಿಯ ಗರ್ಭಫಲವು ಆತನ ಬಹುಮಾನ.
ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
    ಅವನಿಗೆ ಸೋಲೇ ಇಲ್ಲ.
    ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.

ಪ್ರಸಂಗಿ 12:1-8

ಮುಪ್ಪಿನ ಸಮಸ್ಯೆಗಳು

12 ಕಷ್ಟಕಾಲಗಳು ಬರುವುದಕ್ಕಿಂತ ಮೊದಲೇ, ವರ್ಷಗಳು ಮುಗಿದು, “ನನಗೆ ಅವುಗಳಲ್ಲಿ ಸುಖವಿಲ್ಲ” ಎಂದು ಹೇಳುವ ಕಾಲಬರುವುದಕ್ಕಿಂತ ಮೊದಲೇ ಯೌವನಪ್ರಾಯದಲ್ಲಿ ನಿನ್ನ ಸೃಷ್ಟಿಕರ್ತನನ್ನು ಜ್ಞಾಪಿಸಿಕೊ.

ನೀನು ಮುದುಕನಾದಾಗ, ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ನಿನಗೆ ಕತ್ತಲೆಯಂತೆ ಕಾಣುತ್ತದೆ. ಮಳೆಯಾದ ಮೇಲೆಯೂ ಮತ್ತೆಮತ್ತೆ ಮೋಡಗಳಂತೆ ನಿನ್ನ ಜೀವನದಲ್ಲಿ ಕಷ್ಟಗಳು ತುಂಬಿರುತ್ತವೆ.

ಆ ಸಮಯದಲ್ಲಿ, ನಿನ್ನ ಬಲಿಷ್ಠವಾದ ತೋಳುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ; ನಿನ್ನ ಬಲಿಷ್ಠವಾದ ಕಾಲುಗಳು ಬಲಹೀನವಾಗಿ ಬಗ್ಗಿಹೋಗುತ್ತವೆ; ನಿನ್ನ ಹಲ್ಲುಗಳು ಬಿದ್ದುಹೋಗುತ್ತವೆ; ಆಗ ನೀನು ಆಹಾರವನ್ನು ಅಗಿದು ತಿನ್ನಲಾರೆ. ನಿನ್ನ ಕಣ್ಣುಗಳು ಮೊಬ್ಬಾಗುತ್ತವೆ. ನಿನ್ನ ಕಿವಿ ಮಂದವಾಗುತ್ತದೆ. ನೀನು ಮಾರುಕಟ್ಟೆಯ ಶಬ್ದವನ್ನೂ ಕೇಳಲಾರೆ. ಅರೆಯುವ ಕಲ್ಲು ಸಹ ನಿನಗೆ ತುಂಬ ಮೌನವಾಗಿದೆಯೋ ಎಂಬಂತೆ ತೋರುವುದು. ಗಾಯನವೂ ನಿನಗೆ ಕೇಳುವುದಿಲ್ಲ. ನಿನಗೆ ನಿದ್ರೆಬಾರದಿರುವುದರಿಂದ ಕೇವಲ ಒಂದು ಹಕ್ಕಿಯ ಧ್ವನಿಯು ನಿನ್ನನ್ನು ಹೊತ್ತಾರೆಯಲ್ಲಿ ಎಬ್ಬಿಸುವುದು.

ನೀನು ಎತ್ತರವಾದ ಸ್ಥಳಗಳ ಬಗ್ಗೆ ಭಯದಿಂದಿರುವೆ; ನಿನ್ನ ಹಾದಿಯಲ್ಲಿರುವ ಪ್ರತಿಯೊಂದು ಚಿಕ್ಕ ವಸ್ತುವಿಗೂ ಹೆದರಿಕೊಂಡು ನಡೆದಾಡುವೆ. ನಿನ್ನ ಕೂದಲು ಬಾದಾಮಿ ಮರದ ಹೂವುಗಳಂತೆ ಬಿಳುಪಾಗುವುದು. ನೀನು ನಡೆಯುವಾಗ ಮಿಡತೆಯಂತೆ ನಿನ್ನನ್ನು ಎಳೆದಾಡಿಕೊಂಡು ನಡೆಯುವೆ; ಮಗುವನ್ನು ಪಡೆಯಲಾರದಷ್ಟು ವಯಸ್ಸಾಗುವುದು. ಆಮೇಲೆ ನೀನು ನಿನ್ನ ಹೊಸ ಮನೆಗೆ (ಸಮಾಧಿಗೆ) ಹೋಗುವೆ. ನಿನ್ನ ಶವಸಂಸ್ಕಾರಕ್ಕೆ ಹೋಗಲು ಜನರು ಬೀದಿಗಳಲ್ಲಿ ತುಂಬಿರುವರು.

ಮರಣ

ನಿನ್ನ ಜೀವನ ಮುಖ್ಯವಾದದ್ದು.
    ನಿನ್ನ ಜೀವನ ಬೆಳ್ಳಿಬಂಗಾರಗಳಂತೆ ಬೆಲೆಬಾಳುವಂಥದ್ದು.
    ಆದರೆ, ಅದು ಬಹುಬೇಗನೆ ತುಂಡಾದ ದಾರದಂತೆಯೂ ಮುರಿದುಹೋದ ಪಾತ್ರೆಯಂತೆಯೂ ಆಗುವುದು.
    ನಿನ್ನ ಜೀವನ ಬಾವಿಯಲ್ಲಿ ಒಡೆದುಹೋದ ಬಿಂದಿಗೆಯಂತೆ ನಿಷ್ಟ್ರಯೋಜಕವಾಗುವುದು.
    ನಿನ್ನ ಜೀವನವು, ಬಾವಿಯ ಕಟ್ಟೆಯ ಮೇಲೆ ಮುಚ್ಚಿದ್ದ ಚಪ್ಪಡಿಕಲ್ಲು ತಾನೇ ಒಡೆದು ಬಾವಿಯೊಳಗೆ ಬಿದ್ದು ಹೋದಂತೆ ನಿಷ್ಪ್ರಯೋಜಕವಾಗುವುದು.
ಆದ್ದರಿಂದಲೇ ಯೌವನ ಪ್ರಾಯದಲ್ಲಿರುವಾಗಲೇ
    ನೀನು ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.
ನಿನ್ನ ದೇಹ ಭೂಮಿಯಿಂದ ಬಂದಿದೆ.
    ನೀನು ಸತ್ತಾಗ ಅದು ಮತ್ತೆ ಭೂಮಿಯ ಪಾಲಾಗುವುದು.
ಆದರೆ ನಿನ್ನ ಆತ್ಮವು ದೇವರಿಂದ ಬಂದಿದೆ.
    ನಿನ್ನ ದೇಹವು ಸತ್ತ ಮೇಲೆ, ನಿನ್ನ ಆತ್ಮವು ಮತ್ತೆ ದೇವರ ಬಳಿಗೆ ಹೋಗುವುದು.

ಪ್ರತಿಯೊಂದು ಉಪಯೋಗವಿಲ್ಲದ್ದು! ಪ್ರಸಂಗಿಯು ಹೇಳುವುದೇನೆಂದರೆ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ.

ಪ್ರಸಂಗಿ 12:13-14

13-14 ಈ ಪುಸ್ತಕದಲ್ಲಿ ಬರೆಯಲಾಗಿರುವ ಎಲ್ಲಾ ವಿಷಯಗಳಿಂದ ನಾವು ಕಲಿತುಕೊಳ್ಳತಕ್ಕದ್ದೇನು? ಒಬ್ಬನು ಮಾಡಬಹುದಾದ ಅತ್ಯಂತ ಮುಖ್ಯವಾದ ಕಾರ್ಯವೆಂದರೆ, ದೇವರಲ್ಲಿ ಭಯಭಕ್ತಿಯಿಂದಿದ್ದು ಆತನ ಆಜ್ಞೆಗಳಿಗೆ ವಿಧೇಯನಾಗರುವುದೇ. ಯಾಕೆಂದರೆ ಜನರ ಎಲ್ಲಾ ಕಾರ್ಯಗಳೂ ರಹಸ್ಯಗಳೂ ದೇವರಿಗೆ ಗೊತ್ತಿವೆ. ಆತನು ಪ್ರತಿಯೊಂದು ಕಾರ್ಯವನ್ನೂ ತಿಳಿದಿರುವುದರಿಂದ ಪ್ರತಿಯೊಂದಕ್ಕೂ ನ್ಯಾಯತೀರ್ಪು ನೀಡುವನು.

ಲೂಕ 12:22-31

ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ

(ಮತ್ತಾಯ 6:25-34,19-21)

22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?

27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International