Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ಸೊಲೋಮೋನ.
127 ಯೆಹೋವನು ಮನೆಯನ್ನು ಕಟ್ಟದಿದ್ದರೆ,
ಕಟ್ಟುವವರ ಸಮಯವೆಲ್ಲಾ ವ್ಯರ್ಥ.
ಯೆಹೋವನು ಪಟ್ಟಣವನ್ನು ಕಾಯದಿದ್ದರೆ,
ಕಾವಲುಗಾರರ ಸಮಯವೆಲ್ಲಾ ವ್ಯರ್ಥ.
2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು
ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ.
ಯಾಕೆಂದರೆ ದೇವರು ತನ್ನ ಪ್ರಿಯರಿಗೆ
ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.
3 ಮಕ್ಕಳು ಯೆಹೋವನ ಕೊಡುಗೆ.
ತಾಯಿಯ ಗರ್ಭಫಲವು ಆತನ ಬಹುಮಾನ.
4 ಯೌವನಸ್ಥನ ಗಂಡುಮಕ್ಕಳು ಸೈನಿಕನ ಬತ್ತಳಿಕೆಯಲ್ಲಿರುವ ಬಾಣಗಳಂತಿದ್ದಾರೆ.
5 ತನ್ನ ಬತ್ತಳಿಕೆಯಲ್ಲಿ ಗಂಡುಮಕ್ಕಳನ್ನು ತುಂಬುವವನು ಭಾಗ್ಯವಂತನಾಗಿದ್ದಾನೆ.
ಅವನಿಗೆ ಸೋಲೇ ಇಲ್ಲ.
ಅವನ ಗಂಡುಮಕ್ಕಳು ಅವನ ಪರವಾಗಿಯೂ ಅವನ ಶತ್ರುಗಳ ವಿರೋಧವಾಗಿಯೂ ನ್ಯಾಯಸ್ಥ್ಥಾನಗಳಲ್ಲಿ ವಾದಿಸುವರು.
16 ನಾನು ಈ ಲೋಕವನ್ನು ದೃಷ್ಟಿಸಿ ನೋಡಿದಾಗ, ನ್ಯಾಯಾಲಯಗಳಲ್ಲಿ ನೀತಿನ್ಯಾಯಗಳ ಬದಲಾಗಿ ದುಷ್ಟತನ ತುಂಬಿರುವುದನ್ನು ಕಂಡುಕೊಂಡೆನು. 17 ಆಗ ನಾನು ಮನಸ್ಸಿನಲ್ಲಿ, “ದೇವರು ಪ್ರತಿಯೊಂದಕ್ಕೂ ಸಮಯವನ್ನು ಗೊತ್ತುಪಡಿಸಿದ್ದಾನೆ. ಜನರು ಮಾಡುವ ಪ್ರತಿಯೊಂದಕ್ಕೂ ನ್ಯಾಯತೀರಿಸಲು ಆತನು ಸಮಯವನ್ನು ಗೊತ್ತುಪಡಿಸಿದ್ದಾನೆ. ದೇವರು ನೀತಿವಂತರಿಗೂ ದುಷ್ಟರಿಗೂ ನ್ಯಾಯತೀರಿಸುವನು” ಎಂದುಕೊಂಡೆನು.
ಮನುಷ್ಯರು ಪ್ರಾಣಿಗಳಂತಿರುವರೇ?
18 ಅಲ್ಲದೆ ಮನಸ್ಸಿನಲ್ಲಿ ಹೀಗೆಂದುಕೊಂಡೆನು: “ಮನುಷ್ಯರು ಪ್ರಾಣಿಗಳಿಗಿಂತ ಮೇಲಾದವರಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕೆಂಬುದು ದೇವರ ಇಷ್ಟವಾಗಿದೆ. 19 ಮನುಷ್ಯನು ಪ್ರಾಣಿಗಿಂತಲೂ ಉತ್ತಮನಾಗಿರುವನೇ? ಇಲ್ಲ! ಏಕೆಂದರೆ ಪ್ರತಿಯೊಂದು ಉಪಯೋಗವಿಲ್ಲದ್ದು. ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಗತಿಯಾಗುವುದು; ಪ್ರಾಣಿಗಳೂ ಸಾಯುವವು, ಮನುಷ್ಯರೂ ಸಾಯುವರು. ಮನುಷ್ಯರಿಗೂ ಪ್ರಾಣಿಗಳಿಗೂ ಇರುವುದು ಒಂದೇ ‘ಉಸಿರು.’ ಸತ್ತ ಪ್ರಾಣಿಗೂ ಸತ್ತ ಮನುಷ್ಯನಿಗೂ ವ್ಯತ್ಯಾಸವಿಲ್ಲ. 20 ಮನುಷ್ಯರ ಮತ್ತು ಪ್ರಾಣಿಗಳ ದೇಹಗಳೆಲ್ಲ ಒಂದೇ ಸ್ಥಳಕ್ಕೆ ಹೋಗುತ್ತವೆ. ಮನುಷ್ಯರು ಮಣ್ಣಿನಿಂದ ಬಂದರು. ಕೊನೆಗೆ ಅವರು ಮಣ್ಣಿಗೇ ಹೋಗುವರು. ಪ್ರಾಣಿಗಳು ಮಣ್ಣಿನಿಂದ ಬಂದವು; ಕೊನೆಗೆ ಅವು ಮಣ್ಣಿಗೆ ಹೋಗುತ್ತವೆ. 21 ಮನುಷ್ಯನ ಆತ್ಮಕ್ಕೆ ಏನು ಸಂಭವಿಸುವುದೋ ಯಾರಿಗೆ ಗೊತ್ತು? ಮನುಷ್ಯನ ಆತ್ಮವು ದೇವರ ಬಳಿಗೆ ಮೇಲಕ್ಕೆ ಹೋಗುವುದೋ ಪ್ರಾಣಿಯ ಆತ್ಮವು ಭೂಮಿಯೊಳಗೆ ಇಳಿಯುವುದೋ ಯಾರಿಗೆ ಗೊತ್ತು?”
22 ಆದ್ದರಿಂದ ಮನುಷ್ಯನಿಗೆ ತನ್ನ ಕಾರ್ಯದಲ್ಲಿ ಸಂತೋಷಪಡುವುದಕ್ಕಿಂತ ಬೇರೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಅಲ್ಲದೆ ಮುಂದಿನ ಕಾಲವನ್ನು ಕುರಿತು ಮನುಷ್ಯನು ಚಿಂತಿಸಬಾರದು. ಯಾಕೆಂದರೆ ಅವನ ಜೀವಮಾನದ ನಂತರ ಸಂಭವಿಸುವಂಥವುಗಳನ್ನು ನೋಡಲು ಈ ಲೋಕಕ್ಕೆ ಅವನನ್ನು ಯಾರು ಬರಮಾಡುವರು?
ಯಾರು ಮೇಲು? ಸತ್ತವರೋ? ಬದುಕಿರುವವರೋ?
4 ನಾನು ದೃಷ್ಟಿಸಿ ನೋಡಿದಾಗ, ಅನೇಕ ಜನರು ಹಿಂಸೆಗೆ ಒಳಗಾಗಿರುವುದನ್ನು ಕಂಡೆನು. ಅವರ ಕಣ್ಣೀರನ್ನೂ ನೋಡಿದೆನು. ದುಃಖದಲ್ಲಿದ್ದ ಅವರನ್ನು ಸಂತೈಸಲು ಒಬ್ಬರೂ ಇರಲಿಲ್ಲ. ಹಿಂಸಕರು ಎಲ್ಲಾ ಅಧಿಕಾರವನ್ನು ಹೊಂದಿದ್ದರು; ಅವರಿಂದ ಹಿಂಸೆಗೆ ಒಳಗಾದವರನ್ನು ಸಂತೈಸಲು ಯಾರೂ ಇರಲಿಲ್ಲ. 2 ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ನಿರ್ಧರಿಸಿದೆನು. 3 ಹುಟ್ಟುವಾಗಲೇ ಸತ್ತು ಹೋದವರಿಗೆ ಒಳ್ಳೆಯದೇ ಆಯಿತು! ಯಾಕೆಂದರೆ ಈ ಲೋಕದಲ್ಲಿ ನಡೆಯುವ ಕೆಟ್ಟದ್ದನ್ನು ಅವರು ನೋಡಲೇ ಇಲ್ಲ.
ಕಷ್ಟಪಟ್ಟು ದುಡಿಯುವುದೇಕೆ?
4 ಆಮೇಲೆ ನಾನು, “ಜನರು ಪ್ರಯಾಸಪಟ್ಟು ಕೆಲಸ ಮಾಡುವುದೇಕೆ?” ಎಂದು ಆಲೋಚಿಸಿದೆ. ಜನರು ಏಳಿಗೆ ಹೊಂದಲು ಮತ್ತು ಬೇರೆಯವರಿಗಿಂತ ಹೆಚ್ಚು ಅಭಿವೃದ್ಧಿಯಾಗಲು ಪ್ರಯತ್ನಿಸುವರು; ಅದಕ್ಕೆ ಅವರ ಮತ್ಸರವೇ ಕಾರಣ. ಇದೂ ಗಾಳಿಯನ್ನು ಹಿಂದಟ್ಟಿದ್ದ ಹಾಗೆ ವ್ಯರ್ಥ.
5 ಕೆಲವರು ಹೇಳುವಂತೆ, “ಏನೂ ಮಾಡದೆ ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಮೂಢತನ. ದುಡಿಯದವನು ಹಸಿವೆಯಿಂದ ಸಾಯುವನು.” 6 ಇದೇನೊ ನಿಜವಿರಬಹುದು. ಆದರೆ ದುರಾಶೆಪಡುವುದಕ್ಕಿಂತ ಇರುವುದರಲ್ಲಿ ತೃಪ್ತರಾಗಿರುವುದೇ ಮೇಲು.
7 ಲೋಕದಲ್ಲಿ ಮತ್ತೊಂದು ವ್ಯರ್ಥವನ್ನು ಕಂಡೆನು. 8 ಸ್ವಂತ ಕುಟುಂಬವನ್ನು ಹೊಂದಿಲ್ಲದವನು ಅಂದರೆ ಅಣ್ಣತಮ್ಮಂದಿರಾಗಲಿ ಮಕ್ಕಳಾಗಲಿ ಇಲ್ಲದವನು ಸಹ ಪ್ರಯಾಸಪಟ್ಟು ದುಡಿಯುವನು. ಅವನಿಗೂ ತನ್ನ ಆಸ್ತಿಯಲ್ಲಿ ತೃಪ್ತಿಯಿಲ್ಲ. ಅವನು ಬಿಡುವಿಲ್ಲದೆ ಪ್ರಯಾಸಪಟ್ಟು ದುಡಿಯುವನು. “ನಾನೇಕೆ ಪ್ರಯಾಸಪಟ್ಟು ದುಡಿಯುತ್ತಿರುವೆ? ನಾನೇಕೆ ಜೀವನದ ಸುಖವನ್ನು ಅನುಭವಿಸುತ್ತಿಲ್ಲ?” ಎಂದು ಅವನು ಆಲೋಚಿಸುವುದೇ ಇಲ್ಲ. ಇದು ಸಹ ಕೆಟ್ಟದ್ದೂ ವ್ಯರ್ಥವಾದದ್ದೂ ಆಗಿದೆ.
ಕ್ರೈಸ್ತರು ಮಾಡತಕ್ಕ ಕಾರ್ಯಗಳು
2 ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. 3 ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. 4 ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
5 ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ. 6 ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.
Kannada Holy Bible: Easy-to-Read Version. All rights reserved. © 1997 Bible League International